ಬೆಣ್ಣಿಹಳ್ಳ-ತುಪರಿಹಳ್ಳಕ್ಕೆ ಬೇಕಿದೆ ಇನ್ನಷ್ಟು ಅನುದಾನ!

KannadaprabhaNewsNetwork |  
Published : Feb 25, 2026, 02:30 AM IST
ಬೆಣ್ಣಿಹಳ್ಳ | Kannada Prabha

ಸಾರಾಂಶ

ಬೆಣ್ಣಿಹಳದ ಪ್ರವಾಹದಿಂದ ಶಾಶ್ವತ ತಡೆಗೆ ಕರ್ನಾಟಕ ನೀರಾವರಿ ನಿಗಮವು ₹ 1612 ಕೋಟಿ ಯೋಜನೆ ರೂಪಿಸಿದೆ. ಅದರಲ್ಲಿ ರಾಜ್ಯ ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಿ ಕೆಲಸವನ್ನು ಇತ್ತೀಚಿಗಷ್ಟೇ ಶುರು ಮಾಡಿಕೊಂಡಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಮಲಪ್ರಭಾ ನದಿ ಹೂಳೆತ್ತುವುದು.. ತುಪರಿಹಳ್ಳದ 2ನೇ ಹಂತದ ಹಣ ಬಿಡುಗಡೆ. ಬೆಣ್ಣಿಹಳ್ಳಕ್ಕೆ ಇನ್ನಷ್ಟು ಅನುದಾನ!

ಇವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ ಬಗ್ಗೆ ರೈತರು ಇಟ್ಟುಕೊಂಡಿರುವ ನಿರೀಕ್ಷೆಗಳು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದ ಬಳಿ ಉಗಮವಾಗುವ ಬೆಣ್ಣಿಹಳ್ಳ ಬರೋಬ್ಬರಿ 141 ಕಿಮೀ ಹರಿದು ಮಲಪ್ರಭಾ ನದಿ ಸೇರುತ್ತದೆ. ಇನ್ನು ಬೆಳಗಾವಿ ಜಿಲ್ಲೆಯ ಕಿತ್ತೂರಲ್ಲಿ ಹುಟ್ಟುವ ತುಪರಿಹಳ್ಳ 80 ಕಿಮೀಗೂ ಅಧಿಕ ಹರಿದು ನದಿ ಸೇರುತ್ತದೆ.

ಮಳೆಗಾಲದಲ್ಲಿ ಎರಡು ಹಳ್ಳಗಳು ಸೃಷ್ಟಿಸುವ ಆವಾಂತರ ಅಷ್ಟಿಷ್ಟಲ್ಲ. ಬೇಸಿಗೆಯಲ್ಲಿ ಅಕ್ಷರಶಃ ಆಟದ ಮೈದಾನದಂತೆ ಕಾಣುವ ಎರಡು ಹಳ್ಳಗಳು, ಮಳೆಗಾಲದಲ್ಲಿ ಯಾವ ನದಿಗೂ ಕಮ್ಮಿಯಿಲ್ಲದಂತೆ ಉಕ್ಕೇರುತ್ತವೆ. ಅಕ್ಕಪಕ್ಕದ ಗ್ರಾಮಗಳಿಗೆಲ್ಲ ನುಗ್ಗಿ ರೈತರನ್ನು ಹೈರಾಣು ಮಾಡುತ್ತದೆ.

ಬೆಣ್ಣಿಹಳದ ಪ್ರವಾಹ ಶಾಶ್ವತ ತಡೆಗೆ ಕರ್ನಾಟಕ ನೀರಾವರಿ ನಿಗಮವು ₹ 1612 ಕೋಟಿ ಯೋಜನೆ ರೂಪಿಸಿದೆ. ಅದರಲ್ಲಿ ರಾಜ್ಯ ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಿ ಕೆಲಸವನ್ನು ಇತ್ತೀಚಿಗಷ್ಟೇ ಶುರು ಮಾಡಿಕೊಂಡಿದೆ. ಇದೀಗ ಯೋಜನೆಗೆ ಇನ್ನು ₹ 500 ಕೋಟಿ ಆದರೂ ಈ ವರ್ಷದ ಬಜೆಟ್‌ನಲ್ಲಿ ಮೀಸಲಿಡಬೇಕು ಎಂಬ ಬೇಡಿಕೆ ರೈತರದ್ದು.

ತುಪರಿಹಳ್ಳದ ಪ್ರವಾಹ ತಡೆಯ ₹ 312 ಕೋಟಿ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿ ₹ 150 ಕೋಟಿ ಬಿಡುಗಡೆ ಮಾಡಿತ್ತು. ಆ ಕೆಲಸವೆಲ್ಲ ಇದೀಗ ಪೂರ್ಣವಾಗಿದೆ. ಇನ್ನು ₹ 160 ಕೋಟಿ ವೆಚ್ಚದ 2ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಆ ಕೆಲಸವಾಗಬೇಕು. ಅದಕ್ಕೆ ಈ ಬಜೆಟ್‌ನಲ್ಲಿ ಘೋಷಿಸಬೇಕೆಂದು ರೈತರ ಆಗ್ರಹ.

ಹೂಳೆತ್ತಲಿ:

ಈ ಎರಡು ಹಳ್ಳಗಳು ಸೇರುವುದು ಮಲಪ್ರಭಾ ನದಿಯನ್ನೇ. ಮಲಪ್ರಭಾ ನದಿಯ ನೀರನ್ನೇ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಹಳ್ಳಿಗಳು ಪಡೆಯುತ್ತವೆ. ಆದರೆ ಮಲಪ್ರಭಾ ನದಿಯಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಜತೆಗೆ ಒತ್ತುವರಿಯೂ ಹೆಚ್ಚಾಗಿ ತನ್ನ ಮೂಲಸ್ವರೂಪವನ್ನು ನದಿ ಕಳೆದುಕೊಂಡಿದೆ. ಇದರಿಂದಾಗಿ ನೀರಿನ ಸಂಗ್ರಹ ಕಡಿಮೆಯಾದರೆ ಸಹಜವಾಗಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜತೆಗೆ ಈ ನದಿಯನ್ನೇ ಬೆಣ್ಣಿಹಳ್ಳ-ತುಪರಿಹಳ್ಳಗಳು ಸೇರುತ್ತವೆ. ತುಪರಿಹಳ್ಳ ಹಾಗೂ ಬೆಣ್ಣಿಹಳ್ಳದಲ್ಲಿನ ಮಣ್ಣು ನದಿಗೆ ಸೇರಿಕೊಂಡು ಹೂಳು ಹೆಚ್ಚಾಗುತ್ತಿದೆ ಎಂಬುದು ನೀರಾವರಿ ತಜ್ಞರ ಅಂಬೋಣ. ಆದಕಾರಣ ಮಲಪ್ರಭಾ ನದಿಯ ಹೂಳೆತ್ತಬೇಕು. ಜತೆಗೆ ನದಿಯ ಒತ್ತುವರಿ ತೆರವುಗೊಳಿಸುವ ಮೂಲಕ ಮೂಲ ಸ್ವರೂಪದ ನದಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಅನುದಾನ ನೀಡಿ ಸಮೀಕ್ಷೆ ನಡೆಸಿ ಒತ್ತುವರಿ ತೆರವಿಗೆ ಆದೇಶಿಸಬೇಕೆಂಬುದು ರೈತರ ಒಕ್ಕೊರಲಿನ ಆಗ್ರಹ.

ಕಳಸಾ-ಬಂಡೂರಿ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸದ್ಯಕ್ಕೆ ಏನು ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಅರಣ್ಯ ಹಾಗೂ ಪರಿಸರ ಇಲಾಖೆ, ಮತ್ತು ವನ್ಯಜೀವಿ ಮಂಡಳಿ ಅನುಮತಿ ಕೊಡುವವರೆಗೂ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದಕ್ಕೆ ಅನುದಾನ ಮೀಸಲಿಡಬೇಕು. ಜತೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.ಬೆಣ್ಣಿಹಳ್ಳಕ್ಕೆ ಕನಿಷ್ಠ ₹ 500 ಕೋಟಿ ಮೀಸಲಿಡಬೇಕು. ಕಾಮಗಾರಿ ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು. ತುಪರಿಹಳ್ಳದ ಯೋಜನೆಗೆ 2ನೇ ಹಂತದ ಅನುದಾನ ಬಿಡುಗಡೆ ಮಾಡಬೇಕು. ಮಲಪ್ರಭಾ ನದಿ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಬೇಕು.

ಗಂಗಾಧರ ಪಾಟೀಲ, ಪ್ರಗತಿಪರ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ವಾರದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಹಾಲು ಉತ್ಪಾದಕ ಸಂಘಗಳು ರೈತರ ಬೆನ್ನೆಲುಬು