ಕುಷ್ಟಗಿ: ಕುಷ್ಟಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಯಲ್ಲಿ ನಡೆದಿದೆ ಎನ್ನಲಾದ ₹74 ಲಕ್ಷ ಹಣದ ದುರ್ಬಳಕೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಗುರುವಾರ ಏಕಾಏಕಿಯಾಗಿ ಕಚೇರಿಗೆ ಆಗಮಿಸಿದ ಖಾಸಗಿ ವ್ಯಕ್ತಿಗಳು ಬಿಇಒ ಉಮಾದೇವಿ ಬಸಾಪುರ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ, ವಾಗ್ವಾದ ನಡೆಸಿದ್ದಾರೆ ಎನ್ನಲಾದ ಘಟನೆಯಿಂದ ಅವರು ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಇಒ ಉಮಾದೇವಿ ಬಸಾಪುರ ಮತ್ತು ಖಾಸಗಿ ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ತೀವ್ರಗೊಂಡ ಸಂದರ್ಭದಲ್ಲಿ ಉಮಾದೇವಿ ಬಸಾಪುರ ಅವರಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಇಲಾಖೆಯ ಸಿಬ್ಬಂದಿ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಬೆದರಿಕೆ ಕರೆಗಳು: ಬಿಇಒ ಕಚೇರಿಯಲ್ಲಿ ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ, ಅತಿಥಿ ಶಿಕ್ಷಕರ ಗೌರವಧನ, ಜಿಪಿಎಫ್ ಪಾವತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ₹74 ಲಕ್ಷದ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಎ ಕನಕನಗೌಡ ವಿರುದ್ಧ ದೂರು ದಾಖಲಿಸಿದ ಬಳಿಕ ತಮಗೆ ಅನೇಕ ಕರೆಗಳು ಬಂದಿದ್ದು, ಬೆದರಿಕೆಗಳನ್ನೂ ಎದುರಿಸಬೇಕಾಯಿತು ಎಂದು ಉಮಾದೇವಿ ಬಸಾಪುರ ತಿಳಿಸಿದ್ದಾರೆ.ಆಪರೇಟರ್ ವಿರುದ್ಧವೂ ಕ್ರಮ: ಇಲಾಖೆಗೆ ಸಂಬಂಧಪಡದ ಕಂಪ್ಯೂಟರ್ ಆಪರೇಟರ್ ಶಿವರುದ್ರಪ್ಪ ಅಲಿಯಾಸ್ ಮುತ್ತಣ್ಣ ವಿರುದ್ಧವೂ ಹಲವು ದೂರುಗಳಿವೆ ಎಂದು ಆರೋಪಿಸಿರುವ ಶಿಕ್ಷಕರು ಹಾಗೂ ಸಾರ್ವಜನಿಕರು ಅವರ ವಿರುದ್ದ ಪ್ರಕರಣವನ್ನು ದಾಖಲಿಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗುರುವಾರ ಕಚೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬಿಇಒ ಉಮಾದೇವಿ ಬಸಾಪುರ ಅವರು ಖಾಸಗಿ ವ್ಯಕ್ತಿಗಳ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಮಾನತುಗೊಂಡ ಎಸ್‌ಡಿಎ ಕನಕನಗೌಡ ಅವರ ದೂರವಾಣಿ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ. ಅವರು ಪತ್ತೆಯಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಬಿಇಒ ಉಮಾದೇವಿ ಬಸಾಪುರ.ತನಿಖೆ ನಡೆಸಲಾಗಿದೆ: ಬಿಇಒ ಕಾರ್ಯಾಲಯಕ್ಕೆ ಅನ್ಯವ್ಯಕ್ತಿಗಳು ಬಂದು ಗಲಾಟೆ ಮಾಡಿರುವ ಕುರಿತು ಬಿಇಒ ಉಮಾದೇವಿ ಬಸಾಪುರ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು. ಕನಕನಗೌಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲಾಗುತ್ತಿದೆ ಎಂದು ಕುಷ್ಟಗಿ ಪೊಲೀಸ್ ಠಾಣೆ ಪಿಎಸ್‌ಐ ಹನುಮಂತಪ್ಪ ತಳವಾರ ಹೇಳಿದರು.