ಮಲ್ಲಿಕಾರ್ಜುನ ಸಿದ್ದಣ್ಣವರ ಹುಬ್ಬಳ್ಳಿ
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಚನ್ನಪ್ಪಗೌಡ ಅವರು ಕಳೆದ ಎರಡೂವರೆ ವರ್ಷದಿಂದ ಇಲ್ಲಿನ ಗಂಟಿಕೇರಿ ಪ್ರದೇಶದ ತಮ್ಮ ಕಚೇರಿಯ ಒಂದು ಕೋಣೆಯಲ್ಲಿ ಅನಧಿಕೃತ ವಾಸ್ಯವ್ಯ ಹೂಡಿದ್ದರೂ ಸರ್ಕಾರದಿಂದ ಮನೆ ಬಾಡಿಗೆ (ಹೌಸ್ ರೆಂಟ್ ಅಲೌನ್ಸ್-ಎಚ್‌ಆರ್‌ಎ) ಮೊತ್ತ ₹ 6,56,580 ಪಡೆದಿರುವುದು ಬೆಳಕಿಗೆ ಬಂದಿದೆ.ಕಾರವಾರ ಪ್ರವಾಸೋಧ್ಯಮ ಇಲಾಖೆಯ ಕಚೇರಿಯನ್ನು ಬರೀ ವಿಶ್ರಾಂತಿಗೆ ಬಳಸಿಕೊಂಡ ಅಪರಾಧಕ್ಕಾಗಿ ಅಲ್ಲಿನ ಉಪನಿರ್ದೇಶಕ ಜಯಂತ ಯತ್ತಂಗಡಿ ಶಿಕ್ಷೆಗೊಳಗಾದ ಮತ್ತು ಸೇವೆಯಿಂದ ಅಮಾನತುಗೊಳಿಸುವಂತೆ ಶಿಪಾರಸು ಆಗಿರುವ ಘಟನೆ ಮಾಸುವ ಮುನ್ನವೇ ಈ ಬಿಇಒ ಕಚೇರಿಯ ಒಂದು ಭಾಗದಲ್ಲಿ ಖಾಯಂ ಮನೆ ಮಾಡಿಕೊಂಡು ಗಮನ ಸೆಳೆದಿದ್ದಾರೆ.
"ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ " 31.04.2022 ರಲ್ಲೇ ಈ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಲಿಖಿತ ದೂರು ನೀಡಿ "ಬಿಇಒ ಕಚೇರಿಯಲ್ಲಿ ವಾಸ್ತವ್ಯ ಹೂಡಿಯೂ ಪ್ರತಿ ತಿಂಗಳು ಎಚ್‌ಆರ್‌ಎ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಬಿಇಒ ಚನ್ನಪ್ಪಗೌಡರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಿ " ಎಂದು ಆಗ್ರಹಿಸಿದ್ದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ.ಕೋಣೆಗೆ ಮನೆಯ ರೂಪ: ಗಂಟಿಕೇರಿಯ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ನಂ-1ರಲ್ಲಿ ಮಕ್ಕಳ ಸಂಖ್ಯೆ ಕೊರತೆಯಿಂದಾಗಿ ಕಟ್ಟಡದ ಅರ್ಧ ಭಾಗವನ್ನು ಬಿಇಒ ಕಾರ್ಯಾಲಯ ಮಾಡಲಾಗಿದೆ. ಮೊದಲು ಮರಾಠಾ ಗಲ್ಲಿಯಲ್ಲಿದ್ದ ಬಿಇಒ ಕಾರ್ಯಾಲಯವನ್ನು ಹಿಂದಿನ ಬಿಇಒ ಶ್ರೀಶೈಲ ಕರೀಕಟ್ಟಿ ಈ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.
ಕರೀಕಟ್ಟಿ ಅವರ ಮನೆ ಧಾರವಾಡದಲ್ಲಿ ಇದ್ದ ಕಾರಣ ಮಧ್ಯಾಹ್ನ ವಿಶ್ರಾಂತಿ ಪಡೆಯಲೆಂದು ಕಚೇರಿಯ ಕಟ್ಟಡದ ಮೇಲಿನ ಕೋಣೆಯೊಂದನ್ನು (ಮೊದಲ ಮಹಡಿಯ, ಮೆಟ್ಟಿಲು ಪಕ್ಕದ ಮೂಲೆ ಕೋಣೆ) ವಾಸಕ್ಕೆ ಅನುಕೂಲವಾಗುವಂತೆ ಶೌಚಾಲಯ, ಬಾತ್ ರೂಂ, ಬೆಡ್, ಟಿವಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿದ್ದರು.ಆಗಸ್ಟ್ 2022 ರಲ್ಲಿ ಹಾಸನದಿಂದ ವರ್ಗವಾಗಿ ಬಂದ ಚನ್ನಪ್ಪಗೌಡರ ಈ ಕೋಣೆಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿ ತಮ್ಮ ಖಾಯಂ ವಾಸಸ್ಥಳ ಮಾಡಿಕೊಂಡಿದ್ದಾರೆ. ಪತ್ನಿ, ಮಕ್ಕಳು ಹಾಸನದಲ್ಲಿ ಇರುವುದರಿಂದ ಇಲ್ಲಿ ಇವರು ಒಬ್ಬರೇ ಇರುತ್ತಾರೆ. ಪ್ರತಿ ಶುಕ್ರವಾರ ಸಂಜೆ ರೈಲು ಹತ್ತಿ ಸೋಮವಾರ ಮಧ್ಯಾಹ್ನ ವಾಪಸ್ ಸೇವೆಗೆ ಹಾಜರಾಗುತ್ತಾರಂತೆ.
ಕೆಲವು ಮುಖ್ಯೋಪಾಧ್ಯಾಯರು, ಶಿಕ್ಷಕ ಸಂಘಟನೆಗಳ ಮುಖಂಡರು, ಆಪ್ತ ಶಿಕ್ಷಕರು ತುರ್ತು ಕೆಲಸವಿದ್ದಾಗ ಈ ಕೋಣೆಗೆ ಬಂದು ಇವರ ಜತೆ ಚರ್ಚಿಸುವುದು, ಕಾಫಿ-ತಿಂಡಿ, ಊಟ ಸೇವಿಸುವುದು ಸಹಜ. ಆಗಾಗ ರಾತ್ರಿ ಗುಂಡು ಪಾರ್ಟಿಗಳು ನಡೆಯುತ್ತವೆ ಎಂದು ಸಮಾರಾಧನೆಯ ಸವಿಯುಂಡವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.₹6.5 ಲಕ್ಷ ಎಚ್ಆರ್‌ಎ: ಚನ್ನಪ್ಪಗೌಡರ ಮಾರ್ಚ, 2025ರ ಸ್ಯಾಲರಿ ಸ್ಲಿಪ್ (ಡಿಡಿಒ ಕೋಡ್-3100ಕ್ಯೂಇ0037) ನಲ್ಲಿ ಎಚ್‌ಆರ್‌ಎ ₹ 21180 ಜಮೆಯಾಗಿದೆ. ಅಂದರೆ ಆಗಸ್ಟ್-2022 ರಲ್ಲಿ ಇಲ್ಲಿಗೆ ಬಂದಿರುವ ಇವರು ಕಳೆದ 31 ತಿಂಗಳಿಂದ ಇಲ್ಲಿ ವಾಸವಾಗಿದ್ದಾರೆ. ಹಾಗಾಗಿ ಈ ವರೆಗೆ ಒಟ್ಟು ₹6,56,580 ರಷ್ಟು ದೊಡ್ಡ ಮೊತ್ತವನ್ನು ಸರ್ಕಾರದಿಂದ ಮನೆ ಬಾಡಿಗೆ ಪಡೆದಿದ್ದಾರೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ.
ಪ್ರತಿ ತಿಂಗಳು ₹ 178384 ರಷ್ಟು ದೊಡ್ಡ ಸಂಬಳ ಪಡೆಯುವ ಅಧಿಕಾರಿಯಾಗಿ ಚನ್ನಪ್ಪಗೌಡರ ಹೀಗೆ ಕಚೇರಿಯನ್ನು ಅನಧಿಕೃತವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ಮಹಾನಗರ ಪಾಲಿಕೆಯ ಸದಸ್ಯರೊಬ್ಬರು "ಬಿಇಒ ಆಪೀಸ್ ಲಾಡ್ಜಿಂಗ್ ಮಾಡಿಕೊಂಡ ಚೈನಿ ಮಾಡಾಕತ್ತೀ, ನೋಡ್ಕೊತೀನಿ ನಿನ್ನ " ಎಂದು ಆವಾಜ್ ಹಾಕಿದ್ದನ್ನು ಬಿಡ್ನಾಳ್ ಶಾಲೆಯ ಕೆಲವರು ರಮ್ಯವಾಗಿ ಸ್ಮರಿಸುತ್ತಾರೆ.ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬರಲು ಚನ್ನಪ್ಪಗೌಡರನ್ನು ಆಹ್ವಾನಿಸಲು ಅವರು ವಾಸಿಸುವ ಬಿಇಒ ಕಚೇರಿ ಮೇಲಿನ ಕೋಣೆಗೆ ಹೋಗಿದ್ದೆ. ಆಗ ಅವರು ಬನಿಯನ್, ಪಟ್ಟಾಪಟ್ಟಿ ಚಡ್ಡಿಯಲ್ಲಿದ್ದರು. ಅವರದು ಊಟ-ವಸತಿ ಅಲ್ಲೇ. ಸುಮಾರು ಹೊತ್ತು ಚರ್ಚಿಸಿ ಬಂದೆ ಎಂದು ಕರಾಶಿನೌ ಸಂಘದ ಕಾರ್ಯದರ್ಶಿ ಎಸ್.ಎನ್. ಗಡದಿನ್ನಿ ಹೇಳಿದರು.
ಸರ್ಕಾರಿ ಶಾಲೆ ಮತ್ತು ಕಚೇರಿಗಳಲ್ಲಿ ರಾತ್ರಿ ಹೊತ್ತು ಕಾವಲು ಸಿಬ್ಬಂದಿ ಹೊರತುಪಡಿಸಿ ಬೇರೆ ಯಾವುದೇ ಅಧಿಕಾರಿ, ಶಿಕ್ಷಕರಿಗೆ ವಾಸ್ತವ್ಯ ಉಳಿಯಲು "2021ರ ನಡತೆ ನಿಯಮ 3 (1,2,3) ಪ್ರಕಾರ ಅವಕಾಶವಿಲ್ಲ. ಈ ನಿಯಮ ಮೀರಿದವರ ವಿರುದ್ಧ ಹಾಗೂ ಅಕ್ರಮವಾಗಿ ಎಚ್‌ಆರ್‌ಎ ಪಡೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಕೊಳ್ಳಲಾಗುತ್ತದೆ ಎಂದು ಧಾರವಾಡ ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದರು.