ದಾವಣಗೆರೆ: ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಸಂವಿಧಾನೋ ರಕ್ಷತಿ ರಕ್ಷಿತಃ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು, ರಾಷ್ಟ್ರೀಯ ಗ್ರಂಥವಾದ ಸಂವಿಧಾನದ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕರೆ ನೀಡಿದರು. ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ-1984ರ ಅಡಿ ವಕೀಲರ ಪಾತ್ರದ ಕುರಿತ ಉಪನ್ಯಾಸ ಮಾಲಿಕೆ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯಾಂಗ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ವಕೀಲರ ವೈಫಲ್ಯವೇ ಮುಖ್ಯ ಕಾರಣವಾಗಿದೆ. ವಕೀಲರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ನ್ಯಾಯಾಂಗ ಕ್ಷೇತ್ರದಲ್ಲೂ ಸುಧಾರಣೆ ಕಾಣಲಿದೆ ಎಂದರು.
ಕಲುಷಿತ ಹಾಗೂ ತ್ಯಾಜ್ಯ ನೀರನ್ನು ಕೆರೆ ಮೂಲ, ನದಿಗಳಿಗೆ ಹರಿಸಲಾಗುತ್ತದೆ. ಕೆರೆಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಅರಣ್ಯ ನಾಶವಾಗುತ್ತಿದೆ. ಇವುಗಳನ್ನು ತಡೆಗಟ್ಟಲು ವಕೀಲರು ಪಣ ತೊಡಬೇಕು. ವಕೀಲರು ಅಧಿಕಾರಿಗಳನ್ನು ಪ್ರಶ್ನಿಸುವ ತಮ್ಮ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಡಿ.ಕೆ.ವೇಲಾ, ಸದಸ್ಯ ಕಾರ್ಯದರ್ಶಿ ಮಹಾವರ ಮ.ಕರೆಣ್ಣವರ, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ, ಎನ್.ವಿ.ಅರವಿಂದ, ವಿ.ಎನ್.ಮಿಲನ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್, ಕಾರ್ಯದರ್ಶಿ ಎಸ್.ಬಸವರಾಜ, ಸಹ ಕಾರ್ಯದರ್ಶಿ ಎ.ಎನ್.ಮಂಜುನಾಥ, ಉಪಾಧ್ಯಕ್ಷ ಜಿ.ಕೆ.ಬಸವರಾಜ ಗೋಪನಾಳ್, ವಕೀಲ ಸಿ.ಪಿ.ಸಿದ್ದೇಶ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಉಗ್ರರ ದಾಳಿಗೆ ಬಲಿಯಾದ ನಾಗರಿಕರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಡಾ.ಅನುಪಮಾ ಹಾಗೂ ಬಸು ಬರೆದಿರುವ ಭೀಮಯಾನ ಹಾಗೂ ಈ ದಿನ ಡಾಟ್‌ಕಾಂ ಹೊರ ತಂದ ಅರಿವೇ ಅಂಬೇಡ್ಕರ್ ಕೃತಿಗಳನ್ನು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬಿಡುಗಡೆ ಮಾಡಿದರು.