ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ

KannadaprabhaNewsNetwork | Published : Nov 7, 2023 1:31 AM

ಸಾರಾಂಶ

ಸಾಂಪ್ರದಾಯಿಕ ಕೃಷಿಕರೂ, ವೈದಿಕ ವಿದ್ವಾಂಸರೂ ಆಗಿದ್ದ ಅವರು ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ ಅನೇಕ ಕನ್ನಡ ಹಾಗೂ ತುಳು ಭಜನೆ, ಪ್ರಾರ್ಥನಾ ಶ್ಲೋಕಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದರು. ತಮ್ಮ ಮನೆಯಲ್ಲಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿದ್ದರು

ಕನ್ನಡಪ್ರಭ ವಾರ್ತೆ ಮೂಲ್ಕಿ

ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ ಅಂಗಡಿಮಾರ್ ಕೃಷ್ಣ ಭಟ್ (102) ಎಸ್.ಕೋಡಿ ಪಕ್ಷಿಕೆರೆಯಲ್ಲಿರುವ ಪುತ್ರ ವಿಶ್ವೇಶ್ವರ ಭಟ್ ಅವರ ಮನೆಯಲ್ಲಿ ಭಾನುವಾರ ರಾತ್ರಿ ನಿಧನರಾದರು.

ಅವರು ತನ್ನ ಎಂಟನೇ ಪುತ್ರ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರ ಸಹಿತ ಐದು ಮಂದಿ ಪುತ್ರರು ಹಾಗೂ ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

ಸಾಂಪ್ರದಾಯಿಕ ಕೃಷಿಕರೂ, ವೈದಿಕ ವಿದ್ವಾಂಸರೂ ಆಗಿದ್ದ ಅವರು ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ ಅನೇಕ ಕನ್ನಡ ಹಾಗೂ ತುಳು ಭಜನೆ, ಪ್ರಾರ್ಥನಾ ಶ್ಲೋಕಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದರು. ತಮ್ಮ ಮನೆಯಲ್ಲಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿದ್ದರು. ಐದು ವೇದಗಳನ್ನು ಅಧ್ಯಯನ ಮಾಡಿರುವ ಅವರು ಸಂಹಿತಾ ಯಾಗಗಳು, ಮತ್ತಿತರ ಯಾಗಗಳನ್ನು ಮಾಡಿರುವ ಸಾಧಕರೆನಿಸಿದ್ದರು. ದಶಕಗಳ ಹಿಂದೆ ಪತ್ನಿ ಯಮುನಾ ಭಟ್ ಅವರನ್ನು ಕಳೆದುಕೊಂಡಿದ್ದರು.

ಅವರ ಜೀವಮಾನ ಸಾಧನೆಗಾಗಿ ಕೃಷ್ಣಾನುಗ್ರಹ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದಿಂದ ನೀಡಲಾದ ಪೇಜಾವರ ಶ್ರೀ ಜೀವಮಾನದ ಸಾಧನೆ ಪ್ರಶಸ್ತಿ, ಬ್ರಾಹ್ಮಣರ ಸಮ್ಮೇಳನದ ಗೌರವ ಪುರಸ್ಕಾರ, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರಿಂದ ಗೌರವ ಸಹಿತ ಅನೇಕ ಗೌರವಾಭಿನಂದನೆಗಳು ಪ್ರಾಪ್ತವಾಗಿವೆ. ಕಳೆದ ಹಲವಾರು ವರ್ಷಗಳಿಂದ ಪುರೋಹಿತ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಕೇರಳದ ಕನ್ಯಾ ಕುಮಾರಿ ದೇವಳ, ನಾಗರಕೊಯಿಲ್‌ ದೇವಸ್ಥಾನದಲ್ಲಿ ಪುರೋಹಿತರಾಗಿದ್ದರು. ಕಿನ್ನಿಗೋಳಿಯ ಯುಗಪುರುಷದ ಶ್ರೀ ಮದ್ಗುರು ರಾಘವೇಂದ್ರ ಸನ್ನಿಧಿ ಸಹಿತ ಮೂರು ದೇವಸ್ಥಾನಗಳಿಗೆ ರಥಗಳನ್ನು ನೀಡಿದ್ದರು.

* ಸಂತಾಪ

ಉಡುಪಿ ಅಷ್ಟ ಮಠದ ಯತಿಗಳು, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣ ಬಂಧುಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿಯ ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ. ಪ್ರಕಾಶ್‌ ಸುವರ್ಣ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಚಿತ್ರ:6ಅಂಗಡಿಮಾರು

Share this article