ಜಿಲ್ಲೆಯಲ್ಲಿ ಕಾಫಿ ಬೆಳೆಯಲು ಉತ್ತಮ ಹವಾಮಾನ: ವಿಶ್ವಾಸ್ ರಂಜನ್

KannadaprabhaNewsNetwork |  
Published : Apr 30, 2025, 12:30 AM IST
ಕಾಫಿ ಮತ್ತು ಕಾಳು ಮೆಣಸಿನ ಕಾರ್ಯಾಗಾರ-ಪಿಎಸಿಎಸ್ ಮತ್ತು ಕೋರಮಂಡಲ್ ಇಂಟರ್ನ್ಯಾಷನಲ್ ಸಂಸ್ಥೆ ಸಹಯೋಗ | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯಲು ಉತ್ತಮ ಹವಮಾನ ಇದೆ. ನೆರಳಿನಲ್ಲಿ ಕಾಫಿ ಬೆಳೆಯುತ್ತಿರುವುದರಿಂದ ಉತ್ತಮ ಗುಣಮಟ್ಟದ ಕಾಫಿ ಸಿಗುತ್ತದೆ ಎಂದು ವಿಶ್ವಾಸ್‌ ರಂಜನ್‌ ತಿಳಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯಲು ಉತ್ತಮ ಹವಾಮಾನ ಇದೆ. ನೆರಳಿನಲ್ಲಿ ಕಾಫಿ ಬೆಳೆಯುತ್ತಿರುವುದರಿಂದ ಉತ್ತಮ ಗುಣಮಟ್ಟದ ಕಾಫಿ ಸಿಗುತ್ತದೆ ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ವಿಶ್ವಾಸ್ ರಂಜನ್ ಹೇಳಿದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೋರಮಂಡಲ್ ಇಂಟರ್‌ನ್ಯಾಷನಲ್ ಇವರ ಸಹಯೋಗದಲ್ಲಿ ಸ್ಥಳೀಯ ಮಹಿಳಾ ಸಮಾಜದಲ್ಲಿ ಸೋಮವಾರ ಕಾಫಿ ಮತ್ತು ಕಾಳು ಮೆಣಸಿನ ಕೃಷಿಯ ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಕೋರಮಂಡಲ್ ಇಂಟರ್‌ನ್ಯಾಷನಲ್‌ನ ಹಿರಿಯ ಬೇಸಾಯ ತಜ್ಞ ರವೀಂದ್ರ ಮಾತನಾಡಿ, ಯಾವುದೇ ಬೆಳೆಯನ್ನು ಬೆಳೆಯುವ ಮುನ್ನ ವರ್ಷಕ್ಕೆ ಒಮ್ಮೆ ಮಣ್ಣು ಪರೀಕ್ಷೆ ಮಾಡಿಸುವುದರಿಂದ, ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಬಹುದು. ಮಣ್ಣಿನ ಪರೀಕ್ಷೆ ಮಾಡುವ ಸಂದರ್ಭ ಮಣ್ಣಿನಲ್ಲಿ ಪೋಷಕಾಂಶಗಳ ವಿವರ ಇರುವುದರಿಂದ, ಮಣ್ಣಿನಲ್ಲಿ ಕೊರತೆ ಇರುವ ಪೋಷಕಾಂಶಗಳನ್ನು ಮಾತ್ರ ನೀಡಿದರೆ ಸಾಕಾಗುತ್ತದೆ. ತಪ್ಪಿದಲ್ಲಿ ಮಣ್ಣಿಗೆ ಅವಶ್ಯಕತೆ ಇಲ್ಲದೆ ಇರುವ ಗೊಬ್ಬರ ಮತ್ತು ಪೋಷಕಾಂಶ ನೀಡಿದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಹೆಚ್ಚಿನ ಖರ್ಚಿನೊಂದಿಗೆ ಗುಣಮಟ್ಟದ ಬೆಳೆಯನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ವರ್ಷಕ್ಕೆ ಒಮ್ಮೆ ಕಾಫಿ ಗಿಡದ ಎಲೆ ಪರೀಕ್ಷೆ ಮಾಡಿಸುವುದರಿಂದ ಗಿಡಗಳಲ್ಲಿ ಪೋಷಕಾಂಶ ಕೊರತೆ ತಿಳಿಯಬಹುದಾಗಿದೆ ಎಂದರು.

ಕಾಫಿ ಮಂಡಳಿಯ ಸಹಾಯಕ ಅಧಿಕಾರಿ ಲಕ್ಷ್ಮಿಕಾಂತ್ ಮಾತನಾಡಿ, ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ರಾಸಾಯನಿಕ ಗೊಬ್ಬರಕ್ಕೆ ಹೆಚ್ಚಿನ ಖರ್ಚು ಬರುವುದು. ಮಣ್ಣಿನ ಪರೀಕ್ಷೆ ಮಾಡಿಸಿದಲ್ಲಿ ಅದರಲ್ಲಿ ಪೋಷಕಾಂಶ ಮತ್ತು ಪಿಎಚ್ ಎಷ್ಟು ಮತ್ತು ಯಾವ ಗೊಬ್ಬರ ನೀಡಬಹುದು ಎಂದು ತಿಳಿಯುತ್ತದೆ. ಅದರ ಪ್ರಮಾಣದಲ್ಲಿ ಗೊಬ್ಬರ ನೀಡಬೇಕು. ವರ್ಷಕ್ಕೆ ಒಮ್ಮೆ ಕೃಷಿ ಸುಣ್ಣವನ್ನು ಭೂಮಿಯಲ್ಲಿ ತೇವಾಂಶ ಇದ್ದಾಗ ಹಾಕಬೇಕು. ಕಾಫಿ ಹೂ ಅರಳುವ ಮುನ್ನ ಒಮ್ಮೆ ಮತ್ತು ನಂತರ ಎರಡು ಭಾರಿ ರಾಸಾಯನಿಕ ಗೊಬ್ಬರ ಮತ್ತು ಇನ್ನಿತರ ಪೋಷಕಾಂಶಗಳನ್ನು ನೀಡಿದಲ್ಲಿ ಮಾತ್ರ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.

ಕಾರ್ಯಾಗಾರವನ್ನು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹುಲ್ಲೂರಿಕೊಪ್ಪ ಚಂದ್ರಶೇಖರ್ ಉದ್ಘಾಟಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮಾತನಾಡಿದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!