ಕನ್ನಡಪ್ರಭ ವಾರ್ತೆ ಚಾಮರಾಜನಗರ
ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವಜ್ಞಾನಿಯಾಗಿದ್ದು, ಸಂವಿಧಾನ ರಚಿಸುವ ಮೂಲಕ ಎಲ್ಲಾ ವರ್ಗದವರಿಗೂ ಮೀಸಲಾತಿ ಕಲ್ಪಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಮಹಾಪುರುಷ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.ತಾಲೂಕಿನ ಮಂಗಲದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಹಾಗೂ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮೊದಲು ಬರಬೇಕು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ, ಎಲ್ಲರೂ ಸಮಾನತೆಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಲು ಸಂವಿಧಾನ ದತ್ತವಾಗಿ ಮೀಸಲಾತಿ ಕಲ್ಪಿಸಿಕೊಟ್ಟರು. ಅವರು ಕೇವಲ ಎಸ್‌ಸಿ, ಎಸ್‌ಟಿಗಳಿಗೆ ಮಾತ್ರ ಮೀಸಲಾತಿ ನೀಡಿಲ್ಲ. ಎಲ್ಲಾ ವರ್ಗಗಳು ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿವೆ. ಅವರ ಆಶಯವು ಸಹ ಎಲ್ಲರೂ ಸಮಾನರು, ನಾವೆಲ್ಲರೂ ಭಾರತೀಯರು ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು ಎಂದರು.
ಆದರೆ, ಇಂದಿಗೂ ಸಹ ಅವರ ಆಶಯಗಳು ಈಡೇರುತ್ತಿಲ್ಲ. ಅವರು ಸಂವಿಧಾನ ರಚನೆಯ ಸಂದರ್ಭದಲ್ಲಿ ಕೇವಲ ೬ ಜಾತಿಗಳು ಮಾತ್ರ ಅಸ್ಪಶ್ತ್ಯತೆ ಪಟ್ಟಿಯಲ್ಲಿದ್ದವು. ಈಗ ನಮ್ಮ ರಾಜ್ಯದಲ್ಲಿಯೇ ೧೦೧ ಜಾತಿಗಳು ಸೇರ್ಪಡೆಯಾಗಿವೆ. ದೇಶದಲ್ಲಿ ೧೨೦೦ ಜಾತಿಗಳು ಎಸ್ಸಿ ಮೀಸಲಾತಿ ಪಟ್ಟಿಯಲಿವೆ. ಇದರ ಪ್ರಮಾಣ ಇನ್ನೂ ಸಹ ಹೆಚ್ಚಾಗುತ್ತದೆ. ಕಾರಣ ಮೀಸಲಾತಿ ಬೇಡ ಎನ್ನುತ್ತಿದ್ದವರು. ಈಗ ನಮಗೂ ಮೀಸಲಾತಿ ಬೇಕು ಎನ್ನುವಷ್ಟರ ಮಟ್ಟಿಗೆ ಬಂದಿದ್ದಾರೆ. ಮೀಸಲಾತಿ ಯಾರಿಗೆ ಇಲ್ಲ ಎಂಬುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ. ಕೇವಲ ಅಂಬೇಡ್ಕರ್ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮಾತ್ರ ಸಿಮೀತವಾಗಿಲ್ಲ. ಎಲ್ಲ ವರ್ಗದವರು ಪ್ರೀತಿಸುವ, ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತಹ ಕೆಲಸವನ್ನು ಅವರು ಮಾಡಿದ್ದಾರೆ. ಅಂಥ ಮಹಾನ್ ಸಂತನನ್ನು ನೆನಪು ಮಾಡಿಕೊಳ್ಳುವ ಕೆಲಸವಾಗಬೇಕು. ಎಲ್ಲಾ ಗ್ರಾಮಗಳಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಹಾಗೂ ಜಯಂತಿಗಳು ನಡೆಯುತ್ತಿವೆ. ಇತರೆ ಸಮುದಾಯಗಳವರೂ ಸಹ ಸಹಕಾರ ನೀಡುತ್ತಿದ್ದಾರೆ. ಮಂಗಲ ಗ್ರಾಮದಲ್ಲಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ ಪುತ್ಥಳಿ ಉದ್ಘಾಟನೆಗೆ ಸಹಕಾರ ನೀಡಿದ್ದಾರೆ ಎಂದು ಕೃಷ್ಣಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು.ಇಂದು ನಮ್ಮ ಮುಂದೆ ಒಳ ಮೀಸಲಾತಿ ವರ್ಗೀಕರಣ ಚರ್ಚೆ ಜೋರಾಗಿದೆ. ಅಲ್ಲದೇ ಮೇ ೫ ರಿಂದ ಜಾತಿ ಸಮೀಕ್ಷೆಯು ಸಹ ಆರಂಭವಾಗಿದೆ. ಇಲ್ಲಿ ಯಾರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಬಲಗೈ, ಎಡಗೈ ಇತರೆ ಜಾತಿಗಳ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ಸಹ ತಮ್ಮ ನಿಖರ ಜಾತಿಯನ್ನು ದಾಖಲಿಸಿ ನಮ್ಮ ಸಂಖ್ಯೆಯನ್ನು ಗುರುತಿಸಬೇಕಾಗಿದೆ. ಈ ಸಂಬಂಧ ಮೇ ೪ ರಂದು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮುದಾಯದ ಮುಖಂಡರು, ಯಜಮಾನರ ಸಭೆ ಕರೆಯಲಾಗಿದೆ. ಎಲ್ಲರೂ ಭಾಗವಹಿಸಿ ಸ್ಪಷ್ಟವಾದ ಮಾಹಿತಿ ತಿಳಿದುಕೊಂಡು ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಎ.ಆರ್.ಕೃಷ್ಣಮುರ್ತಿ ತಿಳಿಸಿದರು.
ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ, ಇಂದು ಮೀಸಲಾತಿಯನ್ನು ಕಲ್ಪಿಸಿಕೊಡದಿದ್ದರೆ ನಾವು ನಿಂತು ಮಾತನಾಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಅವರು ಕೊಟ್ಟ ಸಂವಿಧಾನದಡಿಯಲ್ಲಿ ನಾನು ಶಾಸಕನಾಗಿದ್ದೇನೆ. ಹೀಗಾಗಿ ಅವರ ಜಯಂತಿಯನ್ನು ಆಚರಣೆ ಮಾಡುವ ಜೊತೆಗೆ ತತ್ವ, ಅದರ್ಶಗಳನ್ನು ಪಾಲನೆ ಮಾಡಬೇಕಾಗಿದೆ. ಅವರ ಅನುಯಾಯಿಗಳಾಗಿ ನಿರಂತರವಾಗಿ ಓದುವ ಜೊತೆಗೆ ಉನ್ನತ ಹುದ್ದೆಗಳನ್ನು ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಯುವ ಜನಾಂಗ ಮುಂದಾಗಬೇಕು. ಮಂಗಲ ಗ್ರಾಮದಲ್ಲಿ ಬಹಳ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.ಮೂಡಿಗೆರೆ ತಹಸೀಲ್ದಾರ್ ರಾಜಶೇಖರಮೂರ್ತಿ ಮುಖ್ಯ ಭಾಷಣ ಮಾಡಿ, ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಸಲುವಾಗಿ ಮೀಸಲಾತಿ ಕಲ್ಪಿಸಿಕೊಟ್ಟರು. ಆದರೆ, ಇಂದು ಜಾತಿ ವ್ಯವಸ್ಥೆಗೆ ಭದ್ರವಾಗುತ್ತಿದೆ. ಜಾತಿಗಳು ಹೆಚ್ಚಾಗುತ್ತಿವೆ. ಜಾತಿ ಹೆಸರಿನಲ್ಲಿ ಸಂಘಟನೆಗಳು ಜಾಸ್ತಿಯಾಗಿವೆ. ನಾವೆಲ್ಲರೂ ಜಾತಿರಹಿತ ಸಮಾಜ ನೋಡಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಬೌದ್ಧ ಧರ್ಮವನ್ನು ಸ್ವೀಕರಿಸಿ, ಜಾತಿ ರಹಿತ ಭಾರತವನ್ನು ನೋಡಲು ಅಂಬೇಡ್ಕರ್ ಅವರ ಹೇಳುತ್ತಿದ್ದಾರೆ. ಆದರೆ ನನ್ನ ಜನ ಜಾತಿ ಬಿಡುತ್ತಿಲ್ಲ. ಭೌದ್ಧ ಧಮ್ಮವನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ಕಂದಕ ಹೆಚ್ಚಾಗುತ್ತಿದೆ. ಮೊದಲು ಮಾನವನಾಗು ಎಂದು ಹೇಳಿದ್ದರು. ಅವರ ಆಶಯವನ್ನು ಈಡೇರಿಸಲು ಎಲ್ಲರೂ ಒಂದಾಗಬೇಕು ಎಂದರು.
ಇದಕ್ಕೂ ಮುನ್ನ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ಟಿ. ನರಸೀಪುರದ ನಳಂದ ಬುದ್ಧ ವಿಹಾರದ ಪೂಜ್ಯ ಬಂತೆ ಭೋದಿ ರತ್ನ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಪಂ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಸದಸ್ಯರಾದ ಶೋಭಾ, ಸುಮ ಕುಮಾರಸ್ವಾಮಿ, ಗ್ರಾಮದ ಯಜಮಾನರು, ಮುಖಂಡರು, ಸರ್ಕಾರಿ ನೌಕರರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.