ಉಳಿದ 3 ವರ್ಷದ ಅವಧಿಯಲ್ಲಿ ಶಕ್ತಿ ಮೀರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Apr 30, 2025 12:30 AM

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಮತಕ್ಕಾಗಿ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಸ್ವಾತಂತ್ರ್ಯ ತಂದ ಇತಿಹಾಸವಿಲ್ಲ. ರಾಜ್ಯ ಮತ್ತು ರಾಷ್ಟ್ರದಲ್ಲಿ ರೈತರ ಪರ ಕಾರ್ಯಕ್ರಮ ಕೊಟ್ಟ ಉದಾಹರಣೆ ಇಲ್ಲ. ಉಳುವವನಿಗೆ ಭೂಮಿ ಕೊಟ್ಟ ಇತಿಹಾಸವಿಲ್ಲ. ಕೇವಲ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಯಾರೇ ಹೊಗಳಲಿ, ತೆಗಳಲಿ, ಟೀಕೆ ಮಾಡಲಿ ತಲೆಕೆಡಿಸಿಕೊಳ್ಳದೆ ಉಳಿದಿರುವ ಮೂರು ವರ್ಷದ ಅವಧಿಯಲ್ಲಿ ಶಕ್ತಿ ಮೀರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಸಾಲಾದ್ರಿ ಕ್ಷೇತ್ರ ಕೋಟೆಬೆಟ್ಟದಲ್ಲಿ ಮಂಗಳವಾರ ಮುಂಬರುವ ಜಿಪಂ ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ತಾಲೂಕಿನಿಂದ ಮನ್ಮುಲ್‌ಗೆ ಆಯ್ಕೆಯಾಗಿರುವ ನೂತನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಮ್ಮೊಂದಿಗೆ ಪಕ್ಷವಿದೆ. ಶಾಸಕರು, ಜಿಲ್ಲೆಯಲ್ಲಿ ಅಸಂಖ್ಯಾತ ಕಾರ್ಯಕರ್ತರಿದ್ದಾರೆ. ತಾಲೂಕು ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾದರೆ ಯಾರಿಗೂ ಕೂಡ ಬಗ್ಗಿ ನಡೆಯುವ ಅವಶ್ಯಕತೆ ಇಲ್ಲ. ಪಕ್ಷದ ಮುಖಂಡರು ಒಬ್ಬರಿಗೊಬ್ಬರು ಕಾಲೆಳೆಯುವ ಕೆಲಸ ಮಾಡದೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಮತಕ್ಕಾಗಿ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಸ್ವಾತಂತ್ರ್ಯ ತಂದ ಇತಿಹಾಸವಿಲ್ಲ. ರಾಜ್ಯ ಮತ್ತು ರಾಷ್ಟ್ರದಲ್ಲಿ ರೈತರ ಪರ ಕಾರ್ಯಕ್ರಮ ಕೊಟ್ಟ ಉದಾಹರಣೆ ಇಲ್ಲ. ಉಳುವವನಿಗೆ ಭೂಮಿ ಕೊಟ್ಟ ಇತಿಹಾಸವಿಲ್ಲ. ಕೇವಲ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಛೇಡಿಸಿದರು.

ಸ್ವಾತಂತ್ರ್ಯ ನಂತರ ರಾಜ್ಯ ಮತ್ತು ರಾಷ್ಟ್ರದಲ್ಲಿ 5 ಗ್ಯಾರಂಟಿ ಯೋಜನೆಗಳಂತಹ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಹೊರತು ಪಡಿಸಿ ಬೇರ್‍ಯಾವುದೇ ಸರ್ಕಾರ ಕೊಟ್ಟಿಲ್ಲ. ಕಳೆದ ಎರಡು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ನಾಲ್ಕರಿಂದ ಐದು ಸಾವಿರ ಕೋಟಿ ಖರ್ಚಾಗಿದೆ. ತಾಲೂಕಿಗೆ 1500 ಕೋಟಿ ಹಣ ಬಿಡುಗಡೆ ಮಾಡಿಸಲಾಗಿದೆ. ಪ್ರತಿ ಹೋಬಳಿಗೆ 50 ರಿಂದ 60 ಕೋಟಿ ರು.ಹಣ ಮಂಜೂರಾಗಿದೆ ಎಂದರು.

ಕಳೆದ ಐದು ವರ್ಷದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರ ನಡೆಸಿ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ ತಾಲೂಕಿನ ಪಾಲಗ್ರಹಾರದಿಂದ ಕೋಟೆಬೆಟ್ಟದ ವರೆಗೆ ರಸ್ತೆ ಮಾಡಿಸಲು ಆಗಲಿಲ್ಲವೆಂದರೆ ಯಾವ ಭಾಷೆಯಲ್ಲಿ ಹೇಳಬೇಕು ಎಂದರು.

ತಾಲೂಕಿನ ಜನ ಬೇಜಾರು ಮಾಡಿಕೊಂಡರೂ ಸರಿ ಸತ್ಯವಾಗಿಯೂ ನನಗೆ ಆಸಕ್ತಿಯೇ ಇಲ್ಲ. ಆದರೆ ಅಧಿಕಾರವಿದ್ದಾಗ ಕರ್ತವ್ಯ ಮರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿ ಈಗ 15 ಕೋಟಿ ರು.ಅನುದಾನ ಬಿಡುಗಡೆ ಮಾಡಿಸಿ ಆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರು ಮಾಡಿಸಿದ್ದೇನೆ. ಅದೇ ರೀತಿ ಹಲವು ಗ್ರಾಮಗಳ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿಯಾಗಿದ್ದ ವೇಳೆ ತಾಲೂಕಿನ ದೇವಸ್ಥಾನಗಳ ಪೂಜೆಗೆ ಬರುತ್ತಿದ್ದವರು ಈಗೇಕೆ ಬರುತ್ತಿಲ್ಲ. ಗೆದ್ದು ಕೇಂದ್ರ ಮಂತ್ರಿಯಾಗಿರುವ ಯಜಮಾನರು ತಾಲೂಕಿಗೆ ಒಂದು ರಸ್ತೆ ಮಾಡಿಸಿದ್ದಾರಾ ಅಥವಾ ಯಾವುದಾದರೊಂದು ಕೆಲಸ ಮಾಡಿದ್ದಾರಾ. ಜಿಲ್ಲೆಗೆ ಕೃಷಿ ವಿವಿ ಬೇಡ ಎಂದು ಅವರ ಅಣ್ಣ ರಾಜ್ಯಪಾಲರಿಗೆ ಅರ್ಜಿ ಕೊಡುತ್ತಾರೆ. ಇವರು ರಾತ್ರಿ ವೇಳೆ ದೂರವಾಣಿ ಕರೆ ಮಾಡಿ ಹೇಳುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್ಡಿಕೆ ವಿರುದ್ಧ ಗುಡುಗಿದರು.

ನನ್ನ ಆರೋಗ್ಯ ಲೆಕ್ಕಿಸದೆ ವಿಶ್ರಾಂತಿ ಪಡೆಯದೆ ಹಗಲು ರಾತ್ರಿ ಎನ್ನದೆ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಜಿಲ್ಲೆಯ ಶಾಸಕರೊಂದಿಗೆ ಜನರ ಸೇವೆ ಮಾಡುತ್ತಿದ್ದೇವೆ. ಇಷ್ಟಾದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸುತ್ತೀರಾ ಎಂದರೆ ಏನು ಹೇಳಬೇಕೊ ಗೊತ್ತಿಲ್ಲ. ಜನರು ಈಗಲಾದರೂ ಅರ್ಥೈಸಿಕೊಳ್ಳಬೇಕು ಎಂದರು.

Share this article