ಸತ್ಯ, ಶುದ್ಧ ಕಾಯಕ ದಾಸೋಹಕ್ಕೆ ಬಸವಣ್ಣ ಆದರ್ಶ

KannadaprabhaNewsNetwork | Published : Apr 30, 2025 12:30 AM

ಸಾರಾಂಶ

ಕಲಬುರಗಿಯಲ್ಲಿ 2 ದಿನಗಳ ಬಸವ ಜಯಂತಿ ಸಂಭ್ರಮಕ್ಕೆ ಮಂಗಳವಾರ ಸಂಜೆ ನಡೆದ ಮಹಿಳೆಯರ ಬೈಕ್‌ ರ್ಯಾಲಿ ಹಾಗೂ ಮಂಗಳವಾರ ಸಂಜೆ ನಗರದ ಶರಣ ಬಸವೇಶ್ವರರ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ೮೯೨ನೇ ಬಸವ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬಸವಾಭಿಮಾನಿಗಳ ಬೃಹತ್ ಬಹಿರಂಗ ಸಮಾವೇಶದ ಉತ್ತಮ ಮುನ್ನುಡಿ ಬರೆದವು.

ಕನ್ನಡಪ್ರಭ ವಾರ್ತೆ ಕಲಬುರಗಿ.

ಕಲಬುರಗಿಯಲ್ಲಿ 2 ದಿನಗಳ ಬಸವ ಜಯಂತಿ ಸಂಭ್ರಮಕ್ಕೆ ಮಂಗಳವಾರ ಸಂಜೆ ನಡೆದ ಮಹಿಳೆಯರ ಬೈಕ್‌ ರ್ಯಾಲಿ ಹಾಗೂ ಮಂಗಳವಾರ ಸಂಜೆ ನಗರದ ಶರಣ ಬಸವೇಶ್ವರರ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ೮೯೨ನೇ ಬಸವ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬಸವಾಭಿಮಾನಿಗಳ ಬೃಹತ್ ಬಹಿರಂಗ ಸಮಾವೇಶದ ಉತ್ತಮ ಮುನ್ನುಡಿ ಬರೆದವು.

ಜಯಂತಿ ಮುನ್ನಾ ದಿನವೇ ಆಯೋಜಿಸಲಾಗಿದ್ದ ಬಸವಾಭಿಮಾನಿಗಳ ಸಮಾವೇಶದಲ್ಲಿ ನಗರ ಹಾಗೂ ಜಿಲ್ಲೆಯ ಸಹಸ್ರಾರು ಬಸವಾಭಿಮಾನಿಗಳು ಸೇರಿದ್ದರು. ಜಾತ್ರಾ ಮೈದಾನದಲ್ಲಿನ ಸಮಾವೇಶದಲ್ಲಿ ಶರಣರ ತತ್ವಗಳ ಚಿಂತನೆ ನಡೆಯಿತಲ್ಲದೆ ಬಸವಣ್ಣನವರ ಆದರ್ಶ, ತತ್ವಗಳ ಪಾಲನೆ ಬಗ್ಗೆಯೂ ಪರಿಣಿತರು ಕರೆ ಕೊಟ್ಟರು.

ವೈದಿಕ ಧರ್ಮಕ್ಕೆ ಮುಖಾಮುಖಿಯಾಗಿ ಹುಟ್ಟಿದ್ದು ಬಸವ ಧರ್ಮವಾದರೂ ಇಂದು ಹಲವರು ವೇದಗಳಲ್ಲಿಲ್ಲದ್ದು ಬಸವ ಧರ್ಮದಲ್ಲಿ ಅದ್ಯಾವುದಿದೆ ಎಂದು ಕೇಳುತ್ತಿದ್ದಾರೆ. ಅಂತಹವರಿಗೆ ವಚನಗಳ ಒಳಹೊಕ್ಕು, ಬಸವ ಧರ್ಮ, ತತ್ವಗಳ ಒಳ ಹೊಕ್ಕು ನೋಡುವಂತೆ ಬಸವ ಅಭಿಮಾನಿಗಳು ಹೇಳಬೇಕಿದೆ ಎಂದು ವಿಷಯ ಪರಿಣಿತರು ಸೇರಿದ್ದವರಿಗೆ ಕರೆ ನೀಡಿದರು.

ವಚನಗಳು ಅನುಭವ ಸಾಹಿತ್ಯ. ಶತಮಾಗಳಿಂದ ಶರಣರು ನಮಗೆ ನೀಡಿರುವ ದಿವ್ಯ ಅನುಭವಾಮೃತ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಮುಂದಿನ ಪೀಳಿಗೆಗೆ ವಚನಾಮೃತ ಸವಿಯುವ ಅವಕಾಶ ಸಿಗಬೇಕಾದಲ್ಲಿ ವಚನಗಳನ್ನು ಶಾಲಾ ಪಠ್ಯದ ಎಲ್ಲಾ ಹಂತಗಳಲ್ಲಿ ಸೇರಿಸಬೇಕು ಎಂಬ ಆಗ್ರಹ ಸಮಾವೇಶದಲ್ಲಿ ಕೇಳಿಬಂತು.

ಅಪರಿಗ್ರಹವೇ ಬಸವ ಧರ್ಮದ ಮೂಲ. ಆಯ್ದಕ್ಕಿ ಲಕ್ಕಮನಂತಹವರು ಈಸಕ್ಕೆ ಆಶೆ ಯಾಕೆಂದು ಕೇಳಿದ್ದಾರೆ. ನಾಳಿಗೆಂದು ಸಂಗ್ರಹಿಸುವ ಬುದ್ಧಿ ಬೇಡಬೇಕು. ದಾಸೋಹ ಬಾವದಲ್ಲಿ ಬದುಕಬೇಕು ಎಂಬ ಬಸವ ತತ್ವ ಎಲ್ಲರೂ ಮೈಗೂಡಿಸಿಕೊಂಡಾಗ ಹಸನಾದ ಸಮಾಜ ಸಾಧ್ಯವೆಂದು ಭಾಗವಹಿಸಿದ್ದ ಪರಿಣಿತರು, ಮಠಾಧೀಶರು ಹೇಳಿದರು.

ಬಸವ ಬವ ಎಂದು ಬಸವಣ್ಣನವರ ತತ್ವ ಚಿಂತನೆ ಮಾಡಿರಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಬಸವ ಧರ್ಮ ಪ್ರಚಾರ ಸಂಸ್ಥೆ, ವಿರಕ್ತಮಠದ ಶರಣಬಸವ ದೇವರು ಸಮಾವೇಶದಲ್ಲಿ ಮಾತನಾಡುತ್ತ ಕಾಯಕ ಮತ್ತು ದಾಸೋಹಕ್ಕೆ ಮೂಲ ಸಾಂಸ್ಕೃತಿಕ ನಾಯಕ,ವಿಶ್ವಗುರು ಬಸವಣ್ಣನವರು ಒಬ್ಬರೇ ಎಂದರು.

ಷಟಸ್ಥಲ ಧ್ವಜಾರೋಹಣ ಹಾಗೂ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ, ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಬಸವಾದಿ ಶರಣರ ವಚನಗಳಲ್ಲಿದೆ ಎಂದರು.

ರಾಜಕೀಯ ನಾಯಕರಲ್ಲಿ ವಚನ ಷಟಸ್ಥಲಗಳ ಮಾತು ಬರೋದೆ ಅಪರೂಪ. ಲಿಂಗಾಯತರ ಕೊರಳು ಗೊಳ ಗೊಳ ಅಂತ ಖಾಲಿಯಿವೆ. ಬಸವಣ್ಣನ ನಾಮ ಬಲದಿಂದ ನಮ್ಮ ರಾಜಕಾರಣಿಗಳು ದೊಡ್ಡವರಾಗಬೇಕು. ಕಾಯಕ ಮತ್ತು ದಾಸೋಹಕ್ಕೆ ಮೂಲ ಪ್ರತಿಪಾದಕ ಬಸವಣ್ಣನಾಗಿದ್ದು, ಜಗತ್ತಿಗೆ ದಾಸೋಹ ಪರಿಚಯ ಮಾಡಿದ್ದು ಬಸವಣ್ಣನವರು. ದಾಸೋಹದ ಮೂಲ ಬೀಜ ಬಿತ್ತುವ ಕೆಲಸ ಬಸವಣ್ಣ ಮಾಡಿದ್ದಾರೆ. ಈ ದೇಶದಲ್ಲಿ ಹೆಣ್ಣು ಮಾಯೇ, ಹೆರುವ ಹೆಣ್ಣು ಅಂದರು. ಆದರೆ, ಬಸವಣ್ಣನವರು ಹೆಣ್ಣನ್ನು ತಾಯಿ ಸಾಕ್ಷಾತ್‌ ಪಾರ್ವತಿ, ತಾಯಿ ಸ್ವರೂಪ ಎಂದರು.

ಬಸವಣ್ಣನವರನ್ನು ನಾವು ಹೊತ್ತು, ಸುತ್ತಿ, ಧರಿಸಿಕೊಂಡು ಹೋಗಬೇಕು. ಸಾಂಸ್ಕೃತಿಕ ನಾಯಕ ಆಗಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತದ ನಾಯಕ, ವಿಶ್ವದ ನಾಯಕವಾಗಲಿ ಎಂದ ಅವರು, ಶರಣರ ವಚನ ಉಳಿಸಿ ಬೆಳೆಸಿ. ಶರಣರಿಗಾಗಿ ದುಡಿಯಿರಿ, ಆಗತ್ಯ ಬಿದ್ದರೆ ಶರಣರಿಗಾಗಿ, ಶರಣರ ತತ್ವಗಳಿಗಾಗಿ ಪ್ರಾಣ ಕೊಡಲು ಸಿದ್ಧರಾಗಿರಿ ಎಂದರು.

ಶರಣ ಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಚಿ.ದೋಡ್ಡಪ್ಪ ಅಪ್ಪ ಮಾತನಾಡಿ,ಅನುಭವ ಮಂಟಪ ಇಡೀ ವಿಶ್ವಕ್ಕೆ ಹೆಸರು. ದಯವೇ ಧರ್ಮದ ಮೂಲ ಎಂದು ಬಸವಣ್ಣನವರು ಹೇಳಿದ್ದಾರೆ. ಜಾತಿ ಬೇಧ ಮರೆತು ಲೋಕ ಕಲ್ಯಾಣಕ್ಕಾಗಿ ಹೋರಾಟ ಮಾಡಿದ ಬಸವಣ್ಣನವರ ದಾರಿಯಲ್ಲಿ ನಾವೆಲ್ಲರೂ ಒಂದಾಗಿ ಸಮಾಜವನ್ನು ಮುನ್ನೆಡೆಸೋಣ ಎಂದು ಹೇಳಿದರು.

ವಚನ ಸಾಹಿತ್ಯ ಮುಂದಿನ ಪೀಳಿಗೆಗೆ ಪರಿಚಯಿಸುವ ಜರೂರತ್ತಿದೆ- ಸಚಿವ ಶರಣಪ್ರಕಾಶ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಭವಿಷ್ಯದ ಪೀಳಿಗೆಗೆ ವಚನಗಳ ಅರಿವು ಮಾಡಿಸಬೇಕು. ವಚನ ಸಾಹಿತ್ಯ ಪರಿಚಯ ಮಾಡುವ ಜರೂರತ್ ಇದೆ. ಬಸವಾದಿ ಶರಣರ ಆಚರಣೆ, ವೀರಶೈವ ಲಿಂಗಾಯತ ಧರ್ಮದ ಆಚರಣೆ. ಲಿಂಗ ಕಟ್ಟುವ ಮೂಲಕ ಅದರ ಪೂಜೆ ಮಾಡಬೇಕು.ಲಿಂಗ ಪೂಜೆಯಿಂದ ಮನಸ್ಸು ಶಾಂತಿಯಿಂದ ಇರಲಿದೆ. ಲಿಂಗ ಪೂಜೆಯಿಂದ ಜೀವನದಲ್ಲಿ ಬದಲಾವಣೆ, ಮನಃಶಾಂತಿ, ಸಹನ ಶೀಲತೆ ಹೆಚ್ಚಾಗುತ್ತವೆ ಎಂದರು.

ಸಮಾವೇಶದಲ್ಲಿ ಬಾಗಲಕೋಟೆಯ ಶಿರೂರಿನ ಬಸವಲಿಂಗ ಮಹಾಸ್ವಾಮಿಗಳು, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ, ಶಾಸಕ ಎಂ.ವೈ.ಪಾಟೀಲ್ ಮಾತನಾಡಿದರು. ಸಚಿವರಾದ ಶರಣಬಸಪ್ಪಾ ದರ್ಶನಾಪುರ, ಕೆಕೆಆರಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಧರ್ಮಸಿಂಗ್, ಶಾಸಕ ಬಸವರಾಜ ಮತ್ತಿಮಡು, ಅಲ್ಲಂಪ್ರಭು ಪಾಟೀಲ್, ಬಿ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಚಂದು ಪಾಟೀಲ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ್, ಅಶೋಕ್ ಬಗಲಿ, ಶಿವರಾಜ್ ಪಾಟೀಲ್ ರದ್ದೇವಾಡಗಿ , ಸೋಮಶೇಖರ್ ಹಿರೇಮಠ, ಸುರೇಶ್ ಸಜ್ಜನ, ಗಿರಿರಾಜ್ ಯಳಮೇಲಿ,ಎಂ.ಎಸ್.ಪಾಟೀಲ್ ನರಿಬೋಳ,ಆರ್.ಕೆ.ಪಾಟೀಲ್,ಗಿರಿರಾಜ್ ಯಳಮೇಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

-------------

ದಯವೇ ಧರ್ಮದ ಮೂಲ. ಎಲ್ಲರೂ ಮೌಲ್ಯದ ಗುಣಗಳನ್ನು ಹಿಡಿದು ನಡೆಯೋಣ. ಕಾಯಕ ಯೋಗಿ ಬಸವಣ್ಣನವರು ದಾಸೋಹ ಜ್ಞಾನ ಪರಿಚಯಿಸಿದ ಮಹಾನ್ ಪುರುಷ. ಬಸವ ತತ್ವ ಅಗತ್ಯ. ಅದರಲ್ಲಿ ಶಾಂತತೆ, ಸಹೋದರತ್ವ ಇದೆ. ಮೌಲೀಕ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳೋಣ.

ಡಾ.ದಾಕ್ಷಾಯಿಣಿ ಎಸ್ ಅಪ್ಪ

ಚೇರ್ ಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ.

ಬಸವಾದಿ ಶರಣರು ಸೇರಿ ಕಟ್ಟಿದ ಧರ್ಮ ಇದಾಗಿದ್ದು, ನಾವೆಲ್ಲರೂ ಲಿಂಗ ಪೂಜೆ ಮಾಡಬೇಕು. ಅಣ್ಣ ಬಸವಣ್ಣ ಹಾಗೂ ಶರಣರು ನುಡಿದ ಹಾಗೂ ನಡೆದ ಹಾದಿಯಲ್ಲಿ ನಡೆದರೆ ಮಾತ್ರ ನಮ್ಮ ಜೀವನ ಸಾರ್ಥಕ ಆಗಲಿದೆ. ನಮ್ಮಿಂದಲೇ ಮೊದಲ ಪರಿವರ್ತನೆ ಆಗಲಿ. ನಡೆ ಮತ್ತು ನುಡಿ ಶುದ್ಧ ಆಗಿರಬೇಕು. ಬಸವಣ್ಣನವರ ಆಚಾರ ವಿಚಾರ ಪಾಲಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಿಗಲಿದೆ.

ಡಾ.ಶರಣಪ್ರಕಾಶ್ ಪಾಟೀಲ್

ವೈದ್ಯಕೀಯ ಶಿಕ್ಷಣ ಸಚಿವ.

------------

ಮಡದಿಯನ್ನು ಬಿಟ್ಟು ಪ್ರತಿ ಹೆಣ್ಣಿನಲ್ಲಿ ಅಕ್ಕ ಮಹಾದೇವಿಯ, ತಾಯಿಯ ರೂಪವನ್ನು ಕಾಣುವುದೇ ನಿಜವಾದ ಶರಣರ ಆಶಯವಾಗಿತ್ತು. ಒಂದು ಬೆರಳಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನೂರಾರು ಬೆರಳು ಕೂಡಿದಾಗಲೇ ಒಂದೊಳ್ಳೆ ಕಾರ್ಯಕ್ರಮ ನಡೆಯುತ್ತದೆ.

ಸಿದ್ದಲಿಂಗ ಮಹಾಸ್ವಾಮಿಗಳು,

ವಿರಕ್ತಮಠದ, ಯಡ್ರಾಮಿ.

---------

ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ನಾಯಕ ಬಸವಣ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಚನಗಳು ಪಠ್ಯವಾಗಲಿ, ಶರಣರ ವಚನ ಚಳವಳಿಯೇ ವೈದಿಕಕ್ಕೆ ಮುಖಾಮುಖಿಯಗಿದ್ದು. ನಮ್ಮಲ್ಲಿ ತುಂಬಿದ್ದ ಚಾತುವ್ರಣ್ಯದ ಕೊಳೆ ಕಿತ್ತು ಹಾಕಿದ್ದೇ ಶರಣರು ಎಂದು ಹೇಳುತ್ತ ವಚನಗಳ ವಿಮರ್ಶೆಗೆ ವೈಜ್ಞಾನಿಕ ದೃಷ್ಟಿಕೋನ ಬೇಕೆಂದರು.

ಮಹಿಳೆಯರಿಂದ ಬೈಕ್ ರ್ಯಾಲಿ.

ಬಸವ ಜಯಂತಿ ಉತ್ಸವ ಸಮಿತಿ ಕಲಬುರಗಿ ವತಿಯಿಂದ ಸಮಾನತೆಯ ಹರಿಕಾರ, ಸಾಂಸ್ಕೃತಿಕ ನಾಯಕ ಬಸವಣ್ಣನವರ ೮೯೨ನೇ ಜಯಂತಿ ಅಂಗವಾಗಿ ನಗರದಲ್ಲಿ ಉತ್ತರ ಕರ್ನಾಟಕ ಸೊಬಗಾದ ಇಳಕಲ್ ಸೀರೆಯುಟ್ಟ ಮಹಿಳೆಯರಿಂದ ದ್ವೀತಿಯ ವರ್ಷದ ಬೃಹತ್ ಬೈಕ್ ರ್ಯಾಲಿ ಜರುಗಿತು.ನಗರದ ಶರಣಬಸವೇಶ್ವರರ ದೇವಸ್ಥಾನದಿಂದ ಹೊರಟ ಬೈಕ್ ರ್ಯಾಲಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಡಾ.ದಾಕ್ಷಾಯಿಣಿ ಎಸ್ ಅಪ್ಪ ಅವರು ಚಾಲನೆ ನೀಡಿದರು.

Share this article