ಮೂಡುಬಿದಿರೆ: ತಾಲೂಕು ಅಭಿವೃದ್ಧಿಗೆ ಸಿಪಿಎಂ ಸಾಮೂಹಿಕ ಹಕ್ಕೊತ್ತಾಯ ಸಭೆ

KannadaprabhaNewsNetwork | Published : Apr 30, 2025 12:30 AM

ಸಾರಾಂಶ

ಮೂಡುಬಿದಿರೆ ತಾಲೂಕಿನ ಅಭಿವೃದ್ಧಿಗಾಗಿ ಸಿಪಿಎಂ ಪಕ್ಷದ ವತಿಯಿಂದ ಸಾಮೂಹಿಕ ಹಕ್ಕಾತ್ತಾಯ ಸಭೆಯು ಆಡಳಿತ ಸೌಧದ ಮುಂಭಾಗ ಸೋಮವಾರ ನಡೆಯಿತು.ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ ತಾಲೂಕಿನ ಹಲವು ಸಮಸ್ಯೆಗಳನ್ನು ತೆರೆದಿಟ್ಟರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತಾಲೂಕಿನ ಅಭಿವೃದ್ಧಿಗಾಗಿ ಸಿಪಿಎಂ ಪಕ್ಷದ ವತಿಯಿಂದ ಸಾಮೂಹಿಕ ಹಕ್ಕಾತ್ತಾಯ ಸಭೆಯು ಆಡಳಿತ ಸೌಧದ ಮುಂಭಾಗ ಸೋಮವಾರ ನಡೆಯಿತು.

ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ಜಾಗತಿಕ ಉದಾರೀಕರಣ ನೀತಿ ತಂದ ಬಳಿಕ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚಾಯಿತು. ಇದರಿಂದಾಗಿ ಜನ ಸಾಮಾನ್ಯರು ಅತೀ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುವಂತ್ತಾಗಿದೆ ಎಂದರು.

ತಾಲೂಕಿನ ಆಸ್ಪತ್ರೆಗೆ ಓರ್ವ ಉತ್ತಮ ವೈದ್ಯರನ್ನು ನೀಡಲು ಶಾಸಕರಿಗೆ ಸಾಧ್ಯವಾಗಿಲ್ಲ. ತಾಲೂಕಿನ ಎಲ್ಲಾ ಪಂಚಾಯಿತಿಗಳಲ್ಲಿ ನಿವೇಶನ ರಹಿತರ ಪಟ್ಟಿ ಕೊಳೆಯುತ್ತಿದೆ. 94ಸಿ 94ಸಿಸಿ ಅಕ್ರಮ ಸಕ್ರಮಗಳಲ್ಲಿ ತಾಲೂಕಿನಲ್ಲಿ ಸಾವಿರಾರು ಅರ್ಜಿಗಳು ಕೊಳೆಯುತ್ತಿವೆ 94ಸಿಯಲ್ಲಿ 12 ಸೆಂಟ್ಸ್ ನಿವೇಶನ ನೀಡಬೇಕೆಂದು ಕಾನೂನು ಇರುವಾಗ 5 ಸೆಂಟ್ಸ್‌ ನಿವೇಶನ ನೀಡಿ ದ್ರೋಹವೆಸಲಾಗಿದೆ ಎಂದು ಆರೋಪಿಸಿದರು.

ಬ್ಯಾಂಕರ್ ಗಳ ಸಭೆ ಕರೆಯುವಂತೆ ತಹಸೀಲ್ದಾರ್ ಗೆ ಹೇಳುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹಣವಂತರಿಗೆ ಮಾತ್ರ ಉದ್ಯೋಗ, ಶಿಕ್ಷಣ,ಆರೋಗ್ಯವಾಗಿದೆ. ಕೊರಗ ಸಮುದಾಯದವರ ಬಳಿ ಹೋಗಿ ಅವರನ್ನು ವಿಚಾರಿಸಬೇಕೆಂದು ಸರ್ಕಾರ ಹೇಳುತ್ತದೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಆರೋಪಿಸಿದರು.

ಸಿಪಿಐ(ಎಂ) ಪಕ್ಷದ ಬೆಳ್ತಂಗಡಿ ಕಾರ್ಯದರ್ಶಿ ಬಿ.ಎಂ.ಭಟ್ ಮಾತನಾಡಿ, ರಾಮರಾಜ್ಯದ ಕನಸನ್ನು ಕಾಣುತ್ತಿದ್ದೇವೆ. ಆದರೆ ಅದು ಮೂಡುಬಿದಿರೆಯಲ್ಲೂ ಇಲ್ಲ, ದೇಶದಲ್ಲೂ ಇಲ್ಲ. ಜನರ ಜೀವ ತೆಗೆಯುತ್ತಿದ್ದೀರಿ. ಹಾಗಾಗಿ ನಿಮಗಿಂತ ದೊಡ್ಡ ಭಯೋತ್ಪಾಕರು ಯಾರೂ ಇಲ್ಲ ಎಂದರು

ಸಿಪಿಎಂ ಮುಖಂಡ ವಸಂತ ಆಚಾರಿ ಸಮಾರೋಪ ಭಾಷಣ ಮಾಡಿ, ಶ್ರೀಮಂತರಿರುವಲ್ಲಿ ಒಳಚರಂಡಿ ವ್ಯವಸ್ಥೆ ಮಾಡುತ್ತಾರೆ ಆದರೆ ಬಡವರ ಪ್ರದೇಶಗಳಲ್ಲಿ ಇನ್ನೂ ಆಗುತ್ತಿಲ್ಲ. ಭಯೋತ್ಪಾದಕ ದಾಳಿಯಲ್ಲಿ ಮೃತರಾದವರ ಮರಣವು ಮುಂದಿನ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿದೆ ಎಂದರು.

ಹಕ್ಕೊತ್ತಾಯ ಮನವಿಯನ್ನು ತಹಸೀಲ್ದಾರ್‌ ಶ್ರೀಧರ ಮುಂದಲಮನಿ ಅವರಿಗೆ ಸಲ್ಲಿಸಲಾಯಿತು. ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಗಿರಿಜಾ, ಕಟ್ಟಡ ಕಾರ್ಮಿಕರ ಸಂಘದ ಶಂಕರ್ ವಾಲ್ಪಾಡಿ ಇದ್ದರು.

ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ರಾಧಾ ಸ್ವಾಗತಿಸಿದರು. ಸಿಪಿಎಂ ಮೂಡುಬಿದಿರೆ ಕಾರ್ಯದರ್ಶಿ ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಯಾಝ್ ನಿರೂಪಿಸಿದರು.ಸುಂದರ್ ಶೆಟ್ಟಿ ವಂದಿಸಿದರು.

Share this article