ಮಠಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಶ್ರೀಗಳ ಆಶೀರ್ವಾದದಿಂದ ನಾನು ಸಚಿವನಾಗಿದ್ದೇನೆ. ಮಠದಿಂದ ನೀಡುವ ಜೀವನದಿ ರಾಷ್ಟ್ರೀಯ ಪ್ರಶಸ್ತಿ ನೀಡಿದ್ದು, ಈ ಪ್ರಶಸ್ತಿಗೆ ಗೌರವ ತರುವ ಕೆಲಸ ಮಾಡುತ್ತೇನೆ. ಮುಂದೆಯೂ ಮಠದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಹೆಣ್ಣು ಮಕ್ಕಳಿಗೆ ಮಡಿಲು ಅಕ್ಕಿ, ಬಾಗಿನ ನೀಡುವ ಮೂಲಕ ಬೇಬಿಗ್ರಾಮದ ದುರ್ದಂಡೇಶ್ವರ ಮಠ, ಚಂದ್ರವನ ಆಶ್ರಮವು ತಾಯಂದಿರು, ಹೆಣ್ಣುಮಕ್ಕಳಿಗೆ ತವರು ಮನೆ ಸಂಬಂಧವನ್ನು ವೃದ್ಧಿಸುವ ಕೆಲಸ ಮಾಡುತ್ತಿವೆ ಎಂದು ಸಕ್ಕರೆ, ಜವಳಿ ಸಚಿವ ರುದ್ರಪ್ಪಮಾನಪ್ಪ ಲಮಾಣಿ ಶ್ಲಾಘಿಸಿದರು.
ತಾಲೂಕಿನ ಬೇಬಿಗ್ರಾಮದ ಶ್ರೀದುರ್ದಂಡೇಶ್ವರ ಮಹಂತ ಶಿವಯೋಗಿ ಮಠದ ಆವರಣದಲ್ಲಿ ನಡೆದ ಶ್ರೀಮರಿದೇವರು ಶಿವಯೋಗಿಸ್ವಾಮೀಜಿಗಳ 18ನೇ ವರ್ಷದ ಪುಣ್ಯಸ್ಮರಣೆ ಹಾಗೂ 10ನೇ ವರ್ಷದ ಮಹಾರಥೋತ್ಸವದಲ್ಲಿ ಮಠದಿಂದ ನೀಡುವ ಮಹಾಚೇತನ ಶ್ರೀಮರಿದೇವರು ಶಿವಯೋಗಿ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಉತ್ತರ ಕರ್ನಾಟಕದಿಂದ ಬಂದ ಶ್ರೀಮರೀದೇವರು ಸ್ವಾಮೀಜಿಗಳು ಬೇಬಿ ಗ್ರಾಮದಲ್ಲಿ ಬಂದು ನೆಲೆಸಿ ಮಠ ನಿರ್ಮಿಸಿ ಈ ಭಾಗದ ಜನರಿಗೆ ಧರ್ಮದ ಜಾಗೃತಿ ಮೂಡಿಸಿ ಆಶೀರ್ವಾದ ಮಾಡಿದ್ದಾರೆ. ಈಗಿನ ಪೀಠಾಧ್ಯಕ್ಷ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿಗಳು ಧಾರ್ಮಿಕ, ಶಿಕ್ಷಣ, ದಾಸೋಹ ನೀಡುವ ಮೂಲಕ ಮಠವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದರು.
ಮಠಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಶ್ರೀಗಳ ಆಶೀರ್ವಾದದಿಂದ ನಾನು ಸಚಿವನಾಗಿದ್ದೇನೆ. ಮಠದಿಂದ ನೀಡುವ ಜೀವನದಿ ರಾಷ್ಟ್ರೀಯ ಪ್ರಶಸ್ತಿ ನೀಡಿದ್ದು, ಈ ಪ್ರಶಸ್ತಿಗೆ ಗೌರವ ತರುವ ಕೆಲಸ ಮಾಡುತ್ತೇನೆ. ಮುಂದೆಯೂ ಮಠದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಶ್ರೀಮರೀದೇವರು ಸ್ವಾಮೀಜಿ ದರ್ಶನ ಪಡೆದ ನಾವೆಲ್ಲರು ಭಾಗ್ಯವಂತರು. ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಮರೀದೇವರು ಸ್ವಾಮೀಜಿಗಳ ದರ್ಶನ ಪಡೆದು ಹೋದರೆ ಆ ಕೆಲಸ ಯಶಸ್ವಿಯಾಗುತ್ತಿತ್ತು. ಅಷ್ಟೊಂದು ದಿವ್ಯಸ್ವರೂಪಿಯಾಗಿದ್ದರು ಎಂದು ಸ್ಮರಿಸಿದರು.
ಸಣ್ಣಮಂಟಪದಿಂದ ಇದ್ದ ಮಠವನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರಮಟ್ಟದಲ್ಲಿ ಮಠವನ್ನು ಬೆಳೆಸಿದ್ದಾರೆ. ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿಗಳು ಹಲವು ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಅವಧೂತ ಮಠದ ವಿನಯ್ ಗುರೂಜಿ ಮಾತನಾಡಿ, ಹರಿಯುವ ಗಂಗೆ ಬತ್ತಿಹೋಗ ಬಹುದೇನೋ ಆದರೆ, ಸಿದ್ಧಗಂಗೆ ಹಾಗೂ ಅಲ್ಲಿ ನಡೆಯುವ ದಾಸೋಹ ಎಂದಿಗೂ ಬತ್ತಿ ಹೋಗುವುದಿಲ್ಲ ಎಂದರು.
ಸಿದ್ಧಗಂಗಾಮಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗುರುವಿಗೆ ಮಹತ್ತರ ಸ್ಥಾನಮಾನವಿದೆ. ನಾವು ವಾಸಿಸುವ ಸಮಾಜ, ಪ್ರಕೃತಿಯಲ್ಲೂ ನಾವುಗಳು ಗುರುಗಳನ್ನು ಸ್ಮರಿಸುತ್ತೇವೆ. ಗುರುವಿನ ಸ್ಮರಣೆ ಮಾಡುವುದು ಸಹ ಪುಣ್ಯದ ಕೆಲಸವಾಗಿದೆ. ನಡೆದಾಡುವ ದೇವರ ರೀತಿ ಮರಿದೇವರು ಸ್ವಾಮೀಜಿಗಳು ಈ ಭಾಗದ ಜನರಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಿದ್ದಾರೆ ಎಂದು ಬಣ್ಣಿಸಿದರು.
ಇದೇ ವೇಳೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಮಹಾಚೇತನ ಶ್ರೀಮರಿದೇವರು ಶಿವಯೋಗಿ ಜೀವನದಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಮಠದಲ್ಲಿ ಹಲವು ಪೂಜಾ ಕಾರ್ಯಕ್ರಮಗಳು ನಡೆದವು.
ಬಳಿಕ ಮಠದ ಆವರಣದಲ್ಲಿ ರಥೋತ್ಸವ ನಡೆಯಿತು, ರಥೋತ್ಸವಕ್ಕೆ ಎಲ್ಲ ಗಣ್ಯರು ಚಾಲನೆ ನೀಡಿದರು. ಭಕ್ತರು ರಥವ ಎಳೆಯುವ ಮೂಲಕ ಭಕ್ತಿಭಾವ ಸಮರ್ಪಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ಡಾ.ಶ್ರೀತ್ರಿನೇತ್ರಮಹಂತ ಶಿವಯೋಗಿಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬ್ಯಾಡಗಿ ಶಾಸಕ ಬಸವರಾಜ್ ನೀಲಪ್ಪ ಶಿವಣ್ಣನವರ್, ಶಾಸಕ ಯು.ಬಿ.ಬಣಕರ್, ವಿಧಾನಸಭೆ ಸಭಾಧ್ಯಕ್ಷರ ಆಪ್ತಕಾರ್‍ಯದರ್ಶಿ ಡಾ.ಶ್ರೀಪಾದ ಎಸ್.ಬಿ., ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ಆದರ್ಶ, ವೀರಶೈವ ಮುಖಂಡ ಬೆಳ್ಳಾಳೆ ಮಹೇಶ್, ಸುನೀತ ಪುಟ್ಟಣ್ಣಯ್ಯ, ವೀ.ಲಿಂ.ಮ.ಸ.ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಶಿಂಢಭೋಗನಹಳ್ಳಿ ನಾಗಣ್ಣ, ಉದ್ಯಮಿ ಎಂ.ಪಿ.ಮಧು, ಬಿಇಒ ಧರ್ಮಶೆಟ್ಟಿ, ರವಿಕುಮಾರ್, ಚಿಕ್ಕಪಾಳ್ಯ ಪ್ರಕಾಶ್, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ಆಡಳಿತ ಅಧಿಕಾರಿ ಚಿಕ್ಕತಿಮ್ಮಯ್ಯ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.