ಗುರು ಹಿರಿಯರ ಮಾತು ಪಾಲಿಸಿದಾಗ ಉತ್ತಮ ಭವಿಷ್ಯ: ಶ್ರೀ ಪ್ರಸನ್ನನಾಥ ಸ್ವಾಮೀಜಿ

KannadaprabhaNewsNetwork | Published : Jun 16, 2024 1:47 AM

ಸಾರಾಂಶ

ಶಿವಮೊಗ್ಗದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳು ಬದುಕಿನ ರಕ್ಷಣೆಯ ಬಗ್ಗೆ ಹಾಗೂ ತಮ್ಮನ್ನು ಸಾಕಿ ಸಲಹಿದ ತಂದೆ ತಾಯಿಗಳ ಬಗ್ಗೆಯೂ ಕೂಡ ಚಿಂತನೆ ನಡೆಸಬೇಕು ಎಂದು ಶ್ರೀ ಆದಿಚುಂಚನ ಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪರಿಚಯ ಕಾರ್ಯಕ್ರಮ ಹಾಗೂ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಹೇಳುವಂತಹ ಮಾತನ್ನು ಪಾಲಿಸಿದಾಗ ಉತ್ತಮ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ ಸಕಾರಾ ತ್ಮಕವಾದ ಅಂಶಗಳನ್ನು ಹೇಳಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು. 10 ನಿಮಿಷಗಳ ನಂತರ ಪುಸ್ತಕವನ್ನು ಮುಚ್ಚಿ ಅಲ್ಲಿಯವರೆಗೆ ಓದಿದ್ದನ್ನು ಮರುಕಳಿಸಬೇಕು ಎಂದು ಸಲಹೆ ನೀಡಿದರು.

ಪರೀಕ್ಷೆಯ ಸಮಯದಲ್ಲಾಗಲಿ ಇತರ ದಿನಗಳಲ್ಲಾಗಲಿ, ವಿದ್ಯಾರ್ಥಿ 8 ಗಂಟೆಗಳ ನಿದ್ರೆ ಅತ್ಯಾವಶ್ಯಕ, ಪರೀಕ್ಷೆಯ ಸಮಯದಲ್ಲಿ ಓದಿನ ಜೊತೆಗೆ ನಿದ್ರೆಯೂ ಇರಬೇಕು. ಪೋಷಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ, ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶೈಕ್ಷಣಿಕ ಸಲಹೆಗಾರ ವಿಜಯವಾಮನ್ ಮಾತನಾಡಿ, ತಂದೆ ತಾಯಿಗಳು ನಿಮ್ಮ ಎಲ್ಲಾ ಬೇಕು ಬೇಡಿಕೆಗಳನ್ನು ಈಡೇರಿ ಸುತ್ತಾರೆ. ಜೀವನದ ಸಂಧ್ಯಾ ಕಾಲದಲ್ಲಿ ನಿಮಗೆ ಬದುಕು ನೀಡಿದ ತಂದೆ ತಾಯಿಗಳ ರಕ್ಷಣೆ ಹಾಗೂ ಪೋಷಣೆ ನಿಮ್ಮ ಮೇಲಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜು ಎಸ್. ವಿ. ಪ್ರಾಂಶುಪಾಲಗುರುರಾಜ್‌, ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್‌.ಎಚ್‌.ಸುರೇಶ್, ಮತ್ತು ಗಣ್ಯರು ಹಾಗೂ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

ತೀರ್ಥಹಳ್ಳಿಯ ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗೆರೆ ಮಾತನಾಡಿ, ಶಿಕ್ಷಣಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ದಿನಮಾನಗಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣದೊಳಗೆ ನಮ್ಮ ಭಾರತ ಇದೆಯೋ ಇಲ್ಲವೇ ಭಾರತದಲ್ಲಿ ಶಿಕ್ಷಣ ಇದೆಯೋ ಎಂಬ ಪ್ರಶ್ನೆ ಹುಟ್ಟುತ್ತಿರುವುದು ಸಹಜವಾಗಿದೆ. ಇಂದು ಶಿಕ್ಷಣ ಕೇವಲ ಕಲಿಕೆಯಾಗದೆ ಅದು ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಸಹ ಬಿಂಬಿಸುವ ಅಂಶವಾಗಬೇಕಿದೆ. ಉತ್ತಮವಾದ ಕಲಿಕೆ ಲಭಿಸಲು ಪಠ್ಯದ ಜೊತೆ, ಪಠ್ಯೇತರ ಚಟುವಟಿಕೆಗಳು ಸಹ ಅಗತ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.

Share this article