ಹುಡಾ ಅಧ್ಯಕ್ಷರಾಗಿ ಎಚ್‌ಎನ್‌ಎಫ್‌ ಇಮಾಮ್‌ ಅಧಿಕಾರ ಸ್ವೀಕಾರ

KannadaprabhaNewsNetwork |  
Published : Jun 16, 2024, 01:47 AM IST
14ಎಚ್‌ಪಿಟಿ2ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಚ್‌ಎನ್‌ ಮಹಮ್ಮದ್‌ ಇಮಾಮ್‌ ನಿಯಾಜಿ ಅವರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು. | Kannada Prabha

ಸಾರಾಂಶ

ಈ ಹಿಂದೆ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಎಚ್‌ಎನ್‌ಎಫ್‌ ಇಮಾಮ್‌ರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿತ್ತು.

ಹೊಸಪೇಟೆ: ಇಲ್ಲಿನ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ (ಹುಡಾ) ಕಾಂಗ್ರೆಸ್‌ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಚ್‌ಎನ್‌ ಮಹಮ್ಮದ್‌ ಇಮಾಮ್‌ ನಿಯಾಜಿ ಅವರನ್ನು ನೇಮಕ ಮಾಡಿ ಸರ್ಕಾರ ಶುಕ್ರವಾರ ಆದೇಶ ಮಾಡಿದೆ. ಈ ಆದೇಶದ ಬೆನ್ನಲೇ ಅವರು ಹುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 3(3)(ಎ)ರನ್ವಯ ಹಾಗೂ 3(4)ರಡಿಯಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶ ಬೆನ್ನಲೇ ಅಧಿಕಾರ ಸ್ವೀಕಾರ: ಈ ಹಿಂದೆ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಎಚ್‌ಎನ್‌ಎಫ್‌ ಇಮಾಮ್‌ರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ, ಆದೇಶ ಬಂದು ಅಧಿಕಾರ ಸ್ವೀಕಾರ ಮಾಡಲು ತೆರಳಿದಾಗ ಮತ್ತೆ ಆದೇಶ ಹಿಂಪಡೆಯಲಾಗಿದೆ ಎಂಬ ಮರು ಆದೇಶ ಬಂದಿರುವುದನ್ನು ಹುಡಾ ಆಯುಕ್ತರು ಗಮನಕ್ಕೆ ತಂದಿದ್ದರು. ಈ ಬಾರಿ ಆದೇಶ ಬಂದ ಕೂಡಲೇ ಅವರು ಹುಡಾ ಆಯುಕ್ತ ಈರಣ್ಣ ಬಿರಾದಾರ ಅವರಿಂದ ಅಧಿಕಾರ ಸ್ವೀಕರಿಸಿದರು.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಶಾಸಕ ಎಚ್.ಆರ್‌. ಗವಿಯಪ್ಪನವರ ಜೊತೆಗೆ ಚರ್ಚಿಸಿ ಈ ಬಾರಿ ಇಮಾಮ್‌ ಅವರಿಗೆ ಅಧ್ಯಕ್ಷ ಹುದ್ದೆ ಕೊಡೋಣ ಎಂದು ಹೇಳಿದ ಬಳಿಕ ಮುಖ್ಯಮಂತ್ರಿ ಅವರ ಮಾತಿಗೆ ಶಾಸಕ ಗವಿಯಪ್ಪನವರು ಒಪ್ಪಿಗೆ ಸೂಚಿಸಿದ ಬಳಿಕವೇ ಈ ಆದೇಶ ಹೊರ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಹುಡಾ ಅಧ್ಯಕ್ಷರಾಗಿ ಇಮಾಮ್‌ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, ಹೊಸಪೇಟೆ ನಗರದಲ್ಲಿ ಹೊಸ ಲೇಔಟ್‌ ನಿರ್ಮಾಣ ಸೇರಿದಂತೆ ಈ ಹಿಂದಿನ ಲೇಔಟ್‌ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಶಾಸಕರ ಜೊತೆಗೆ ಚರ್ಚಿಸಿ ನಗರದಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗುವುದು. ಜೂನ್‌ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್ ಅವರು ಕೆಡಿಪಿ ಸಭೆ ನಡೆಸಲು ಆಗಮಿಸುತ್ತಿದ್ದಾರೆ. ನಗರದ ಹಲವು ಸಮಸ್ಯೆಗಳಿಗೂ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ