ಗುರು ಶಿಷ್ಯ ಪರಂಪರೆಯು ಜ್ಞಾನ ವೃದ್ಧಿಗೆ ಸಹಕಾರಿ: ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಡಾ.ಕೆ.ನಾಗೇಶ್‌

KannadaprabhaNewsNetwork | Published : Jun 16, 2024 1:46 AM

ಸಾರಾಂಶ

ಗುರು ಶಿಷ್ಯ ಪರಂಪರೆ ಜ್ಞಾನ ವೃದ್ಧಿಗೆ ಸಹಕಾರಿ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕೆ.ನಾಗೇಶ್ ಅಭಿಪ್ರಾಯಪಟ್ಟರು. ಚನ್ನರಾಯಪಟ್ಟಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಕ್ಷರಾಭ್ಯಾಸಕ್ಕೆ ಚಾಲನೆ । ಭಾರತ ಶ್ರೀಮಂತ ಸಂಸ್ಕೃತಿ, ಗುರು ಪರಂಪರೆ ಹೊಂದಿದ ರಾಷ್ಟ್ರ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗುರು ಶಿಷ್ಯ ಪರಂಪರೆ ಜ್ಞಾನ ವೃದ್ಧಿಗೆ ಸಹಕಾರಿ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕೆ.ನಾಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಜ್ಞಾನಸಾಗರ ಶಾಲೆಯ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಾಗೇಶ್ ಶಿಕ್ಷಣ ಸಂಸ್ಥೆಯ ಜ್ಞಾನಸಾಗರ ಅಂತರಾಷ್ಟ್ರೀಯ ವಿದ್ಯಾ ಶಾಲಾ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮರ್ಥ ಗುರುವಿನಿಂದ ಶಿಷ್ಯರಿಗೆ ಪರಂಪರೆಯ ಜ್ಞಾನ ಹರಿದರೆ ಅದು ಸ್ವಸ್ಥ ಸಮಾಜದ ನಿರ್ಮಾಣಕ್ಕೂ ಪೂರಕವಾಗುತ್ತದೆ. ಭಾರತ ಶ್ರೀಮಂತ ಸಾಂಸ್ಕೃತಿಕ ಮಹತ್ವ ಮತ್ತು ಗುರು ಪರಂಪರೆಯನ್ನು ಹೊಂದಿದ ರಾಷ್ಟ್ರ. ಪ್ರಾಚೀನ ಕಾಲದಿಂದಲೂ ಇಲ್ಲಿ ಗುರುವಿನ ಮೂಲಕವೇ ವಿದ್ಯೆ ಪಡೆಯುವ ಸಂಪ್ರದಾಯ ಇತ್ತು. ಬ್ರಿಟಿಷರು ಬಲವಂತವಾಗಿ ಈ ಪದ್ಧತಿಗೆ ತಡೆಯೊಡ್ಡಿ ತಮ್ಮದೇ ಆದ ಪಠ್ಯಕ್ರಮದ ಶಾಲೆಗಳನ್ನು ತೆರೆದರು. ಭಾರತೀಯ ಸಂಸ್ಕೃತಿ ಮತ್ತು ವೇದ ವಿದ್ಯೆಗೆ ತಡೆ ಒಡ್ಡಿದ್ದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ನೆಲದ ಶಿಕ್ಷಣ ಸೃಜನಶೀಲತೆ ಮತ್ತು ಶ್ರೇಷ್ಠ ಮೌಲ್ಯಗಳನ್ನು ರೂಢಿಗತ ಮಾಡುತ್ತದೆ. ಸತ್ಯ, ಧೈರ್ಯ ಮತ್ತು ಸಹಜೀವನ ಕಲಿಸುತ್ತದೆ. ಧರ್ಮ ಸಾಮರಸ್ಯ ಬೋಧಿಸುತ್ತದೆ. ನಿಗದಿತ ವಿಷಯಗಳ ಆಳವಾದ ದೃಷ್ಟಿಕೋನವನ್ನು ಮೂಡಿಸುತ್ತದೆ. ಸಮತೋಲಿತ ಮತ್ತು ಸಾಮರಸ್ಯದ ವ್ಯಕ್ತಿತ್ವಕ್ಕೆ ನಿರ್ಮಿಸುತ್ತದೆ. ಒಟ್ಟಾರೆ ಗುರು ಪರಂಪರೆಯಲ್ಲಿ ಬಾಲ್ಯದಿಂದಲೇ ಶ್ರಮ ಜೀವನದ ಪಾಠವನ್ನೂ ಕಲಿಸುತ್ತದೆ’ ಎಂದು ಹೇಳಿದರು.

‘ನಮ್ಮ ಸಂಸ್ಥೆ ಆರಂಭದಿಂದಲೂ ಗುರು ಶಿಷ್ಯ ಪರಂಪರೆಗೆ ಮಹತ್ವ ನೀಡಿದೆ. ಅಂಕ ಗಳಿಕೆಯೇ ಶಿಕ್ಷಣವಲ್ಲ. ಶಿಕ್ಷಣ ಎಂಬುದು ಅಂಕಗಳಿಗಾಗಿ ಮಾತ್ರವಲ್ಲ, ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಬೇಕು. ಬಾಲ್ಯದಲ್ಲಿ ಮೌಲ್ಯಯುತ ಶಿಕ್ಷಣ ದೊರೆಯಬೇಕು. ಆಗ ಅದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಶಿಷ್ಯರ ಸಾಧನೆಗಳಲ್ಲಿ ಸಾರ್ಥಕತೆ ಕಾಣುವುದೇ ಶಿಕ್ಷಕರ ಉದಾತ್ತ ಭಾವ’ ಎಂದು ಹೇಳಿದರು.

ಪ್ರತಿಭೆ ಹೊರತರುವ ಉದ್ದೇಶ:

ಶಿಕ್ಷಣ ಸಂಸ್ಥೆಯ ಸಿಇಒ ಡಾ. ಭಾರತಿ ನಾಗೇಶ್ ಮಾತನಾಡಿ, ಪ್ರತಿ ಮಗುವಿನಲ್ಲೂ ಇರುವ ಪ್ರತಿಭೆ ಹೊರತರುವುದೇ ಶಿಕ್ಷಣದ ನಿಜವಾದ ಉದ್ದೇಶ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ಸಂಸ್ಥೆ ಧ್ಯೇಯ ಎಂದು ತಿಳಿಸಿದರು.

ಮಕ್ಕಳ ಕೈ ಹಿಡಿದು ಬರೆಸಿದ ಪಾಲಕರು ವಿದ್ಯಾಧಿದೇವತೆ ಸರಸ್ವತಿ ಪೂಜೆಯೊಂದಿಗೆ ಅಕ್ಷರಾಭ್ಯಾಸದ ಪೂಜಾ ವಿಧಿ- ವಿಧಾನ ನೆರವೇರಿಸಲಾಯಿತು. ಪುಟ್ಟ ಮಕ್ಕಳೊಂದಿಗೆ ಕುಳಿತ ತಂದೆ-ತಾಯಿಯರು ತಟ್ಟೆಯೊಳಗೆ ಹರಡಿದ ಅಕ್ಷತೆ ಮೇಲೆ ಅರಿಶಿಣದ ಕೊಂಬಿನಿಂದ ಮಕ್ಕಳ ಕೈಹಿಡಿದು ಸ್ವಸ್ತಿಕ್ ಚಿಹ್ನೆ, ಓಂಕಾರ, ಶ್ರೀಕಾರ ಬರೆಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಡೀನ್ ಸುಜಾ ಫಿಲಿಪ್, ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ, ಫಿಲಿಪ್ ಶಿಕ್ಷಕಿಯರು ಹಾಜರಿದ್ದರು.

Share this article