ಹರಪನಹಳ್ಳಿ ತಾಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆ

KannadaprabhaNewsNetwork |  
Published : Jun 16, 2024, 01:46 AM IST
ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿಯಲ್ಲಿ  ಹುರುಪಿನಿಂದ ಬಿತ್ತನೆ ಕೈ ಗೊಂಡಿರುವ ರೈತರು. | Kannada Prabha

ಸಾರಾಂಶ

ವಾಡಿಕೆಗಿಂತ ಹೆಚ್ಚು ಮಳೆ: ಈವರೆಗೆ 48.8 ಮಿ.ಮೀ. ವಾಡಿಕೆ ಮಳೆ ಬರಬೇಕಾಗಿತ್ತು. ಆದರೆ 58.01 ಮಿ.ಮೀ. ಮಳೆ ಸುರಿದಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ತಾಲೂಕಿನಲ್ಲಿ ಈವರೆಗೂ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಈಗಾಗಲೇ 54,132 ಹೆಕ್ಟರ್‌ ಬಿತ್ತನೆ ಪೂರ್ಣಗೊಂಡಿದೆ. ಚುರುಕಿನಿಂದ ಬಿತ್ತನೆ ಪ್ರಕ್ರಿಯೆ ಪ್ರಗತಿಯಲ್ಲಿದೆ.ತಾಲೂಕಿನಲ್ಲಿ ಒಟ್ಟು 87,396 ಹೆಕ್ಟರ್‌ ಬಿತ್ತನೆ ಗುರಿ ಇದ್ದು, ಈವರೆಗೂ ಮೆಕ್ಕೆಜೋಳ -49,909 ಹೆಕ್ಟೇರ್‌, ತೊಗರಿ - 2762 ಹೆಕ್ಟೇರ್‌, ಶೇಂಗಾ- 1010 ಹೆಕ್ಟೇರ್‌, ಸಜ್ಜೆ 40 ಹೆಕ್ಟೇರ್‌, ಜೋಳ -150 ಹೆಕ್ಟೇರ್‌ ಹೀಗೆ ಈವರೆಗೂ 54132 ಹೆಕ್ಟರ್‌ ಬಿತ್ತನೆ ಕಾರ್ಯ ಮುಗಿದಿದೆ.

ಈಗ ಭೂಮಿ ಹದಗೊಂಡಿದ್ದು, ಎರೆ ಭೂಮಿಯಲ್ಲಿ ಹೆಚ್ಚು ಹಸಿ ಇದ್ದು, ಸದ್ಯ ಬಿತ್ತನೆಗೆ ಬರುವುದಿಲ್ಲ. ಕಳೆದೆರಡು ದಿನಗಳಿಂದ ಮಳೆ ಬಿಡುವು ನೀಡಿದ್ದು, ಎರೆ ಭೂಮಿಯಲ್ಲಿ ಬಿತ್ತನೆ ಮಾಡಬೇಕಾದರೆ ಇನ್ನು 3-4 ದಿನ ಮಳೆ ವಿರಾಮ ಕೊಡಬೇಕಾಗಿದೆ. ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ ಮಳೆ ಸುರಿದಿಲ್ಲ.

ವಾಡಿಕೆಗಿಂತ ಹೆಚ್ಚು ಮಳೆ: ಈವರೆಗೆ 48.8 ಮಿ.ಮೀ. ವಾಡಿಕೆ ಮಳೆ ಬರಬೇಕಾಗಿತ್ತು. ಆದರೆ 58.01 ಮಿ.ಮೀ. ಮಳೆ ಸುರಿದಿದೆ. ಅದರಲ್ಲಿ ಅರಸೀಕೆರೆ- 41.7 ಮಿ.ಮೀ., ಹರಪನಹಳ್ಳಿ -41.7 ಮಿ.ಮೀ., ಚಿಗಟೇರಿ -63 ಮಿ.ಮೀ., ತೆಲಿಗಿ -77 ಮಿ.ಮೀ. ಮಳೆ ಬಿದ್ದಿದ್ದು, ತೆಲಿಗಿ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಹರಪನಹಳ್ಳಿ ಕಸಬಾ ಹೋಬಳಿಯಲ್ಲಿ ಕಡಿಮೆ ಮಳೆ ಬಿದ್ದಿದೆ.

ಬೀಜ, ಗೊಬ್ಬರ ಖರೀದಿಗೆ ಬಿಲ್‌ ಪಡೆಯಿರಿ: ಬೀಜ, ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಅಧಿಕೃತ ಮಾರಾಟ ಕೇಂದ್ರಗಳಲ್ಲಿ ಖರೀದಿ ಮಾಡಿ ಬಿಲ್‌ ಪಡೆಯಲು ಮರೆಯಬೇಡಿ ಎಂದು ಕೃಷಿ ಅಧಿಕಾರಿ ನಾಗರಾಜ ಸಕ್ರಿಗೌಡ ರೈತರಿಗೆ ಸೂಚನೆ ನೀಡಿದ್ದಾರೆ.

ಬಿತ್ತನೆಗೆ ಅಗತ್ಯ ಬೀಜ ಹಾಗೂ ಗೊಬ್ಬರ ತಾಲೂಕಿನಲ್ಲಿ ದಾಸ್ತಾನು ಇದೆ ಎನ್ನುತ್ತಾರೆ ಅಧಿಕಾರಿಗಳು.

₹61.01 ಕೋಟಿ ವಿಮೆ ಹಣ ಬಂದಿದೆ: ಕಳೆದ ವರ್ಷ ವಿಜಯನಗರ ಜಿಲ್ಲೆಗೆ ₹85.76 ಕೋಟಿ ಬೆಳೆ ವಿಮೆ ಬಂದಿದ್ದು, ಅದರಲ್ಲಿ ಹರಪನಹಳ್ಳಿ ತಾಲೂಕಿಗೆ ₹61.01 ಕೋಟಿ ಬಂದಿದ್ದು, ರೈತರ ಖಾತೆಗೆ ಜಮಾ ಆಗಿದೆ.

ಕಳೆದ ಬಾರಿ ತಾಲೂಕಿನಲ್ಲಿ 22,580 ರೈತರು ಬೆಳೆ ವಿಮೆ ಪಾವತಿ ಮಾಡಿದ್ದರು. ಅದರಲ್ಲಿ 20394 ರೈತರಿಗೆ ವಿಮೆ ಪರಿಹಾರ ಬಂದಿದೆ ಎಂದು ಕೃಷಿ ಇಲಾಖಾ ಮೂಲಗಳು ತಿಳಿಸಿವೆ.

ಕಳೆದ ಬಾರಿ ಬೆಳೆ ವಿಮೆ ಕಟ್ಟಿದ ಬಹುತೇಕ ರೈತರಿಗೆ ವಿಮೆ ಪರಿಹಾರ ಹಣ ಸಂದಾಯವಾಗಿದೆ. ಈ ಬಾರಿ ಸಹ ವಿಮೆ ನೋಂದಣಿ ಆರಂಭಗೊಂಡಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಬೇಕು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೆಶಕ ವಿ.ಸಿ. ಉಮೇಶ.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌