ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ- ಮುರಳೀಧರ

KannadaprabhaNewsNetwork | Published : Jun 14, 2024 1:09 AM

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಯು ಗಿಡವನ್ನು ನೆಡುವುದಲ್ಲದೆ, ಅದನ್ನು ಪೋಷಿಸಿ ಹೆಮ್ಮರವಾಗಿ ಬೆಳೆಸಲು ಶ್ರಮಿಸಬೇಕಿದೆ. ಪರಿಸರ ಉಳಿಸುವ ಕಾರ್ಯ ನಿರಂತರವಾಗಿರಬೇಕಿದೆ

ಸಂಡೂರು: ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ. ಉತ್ತಮ ಪರಿಸರ ನಿರ್ಮಾಣದಲ್ಲಿ ಮರಗಿಡಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಗಿಡಮರಗಳನ್ನು ಹೆಚ್ಚೆಚ್ಚು ಬೆಳೆಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದು ಹಿರಿಯ ಪರಿಸರ ಅಧಿಕಾರಿ ಮುರಳೀದರ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಸೋಮಲಾಪುರದಲ್ಲಿನ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಪ್ಲಾಂಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡವನ್ನು ನೆಟ್ಟು, ನೀರೆರೆದು ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿಯವರು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಲವು ರೀತಿಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಗಿಡವನ್ನು ನೆಡುವುದಲ್ಲದೆ, ಅದನ್ನು ಪೋಷಿಸಿ ಹೆಮ್ಮರವಾಗಿ ಬೆಳೆಸಲು ಶ್ರಮಿಸಬೇಕಿದೆ. ಪರಿಸರ ಉಳಿಸುವ ಕಾರ್ಯ ನಿರಂತರವಾಗಿರಬೇಕಿದೆ ಎಂದರು.

ಎಂ.ಎಸ್.ಪಿ.ಎಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಮೇಧಾ ವೆಂಕಟಯ್ಯ ಮಾತನಾಡಿ, ಪ್ರಕೃತಿಗೆ ನಮ್ಮ ಕೊಡುಗೆ ಏನು ಎನ್ನುವ ಕುರಿತು ವಿಚಾರ ಮಾಡಬೇಕಿದೆ. ಕೈಗಾರಿಕಾ ಅಭಿವೃದ್ಧಿಗೆ ಗಣಿಗಾರಿಕೆ ಅವಶ್ಯವಾಗಿದೆ. ಅದೇರೀತಿಯಾಗಿ ಪರಿಸರವನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಬೇಕಿದೆ ಎಂದು ತಿಳಿಸಿದರು.

ಪರಿಸರ ಅಧಿಕಾರಿ ದೊಡ್ಡ ಶಾಣಯ್ಯ, ನಿವೃತ್ತ ಮುಖ್ಯ ಶಿಕ್ಷಕ ಹೆಚ್.ಎನ್. ಭೋಸ್ಲೆ, ಎಂ.ಎಸ್.ಪಿ.ಎಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಮಧುಸೂಧನ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಅವರು ಉತ್ತಮ ಪರಿಸರದ ಮಹತ್ವ ಮತ್ತು ಅದರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪಾತ್ರ ಕುರಿತು ಮಾತನಾಡಿದರು.

ಕಾರ್ಯಕ್ರಮದ ಪ್ರಯುಕ್ತ ಶಾಲೆಯ ಆವರಣದಲ್ಲಿ ಹಲವು ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ವಿಶಾಲಾಕ್ಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ತಿಪ್ಪೇಸ್ವಾಮಿ ಸ್ವಾಗತಿಸಿದರು. ಬಿ.ಎಂ. ನಾಗರಾಜ ನಿರೂಪಿಸಿದರು.

ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಉಪ ಪ್ರಾಚಾರ್ಯ ಮೆಹಬೂಬ್ ಬಾಷ, ಶಿಕ್ಷಕಿ ನಳಿನಾ, ಹೆಚ್.ಕೆ. ರಮೇಶ್, ಅಭಿರಾಜ್ ಹೆಚ್, ಅಧಿಕಾರಿಗಳಾದ ಪಿ ವೆಂಕಟರಮಣ ರೆಡ್ಡಿ, ವೆಂಕಟಾಚಾರ್, ಶಿಕ್ಷಕರು, ವಿದ್ಯಾರ್ಥಿಗಳು, ಎಂಎಸ್‌ಪಿಎಲ್ ಪೆಲ್ಲೆಟ್ ಪ್ಲಾಂಟ್ ಅಧಿಕಾರಿಗಳು ಉಪಸ್ಥಿತರಿದ್ದರು.

Share this article