ಕನ್ನಡಪ್ರಭ ವಾರ್ತೆ ಹಿರಿಯೂರು
ಪರಿಸರ ಸ್ವಚ್ಛವಾಗಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಕಸ ಮುಕ್ತ ಗ್ರಾಮಗಳನ್ನು ರೂಪಿಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದು ಸಮಾಜ ವಿಜ್ಞಾನಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ.ಧರಣೇಂದ್ರಯ್ಯ ಅಭಿಪ್ರಾಯಪಟ್ಟರು.ತಾಲೂಕಿನ ಕಂದಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೆಹರೂ ಯುವ ಕೇಂದ್ರ, ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ ಹಾಗೂ ಕಂದಿಕೆರೆ ಯುವ ಬಳಗದ ಆಶ್ರಯದಲ್ಲಿ 2024-25ನೇ ಸಾಲಿನ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಡಿಯಲ್ಲಿ ಆಯೋಜಿಸಿದ್ದ ಏಕ ಬಳಕೆಯ ಪ್ಲಾಸ್ಟಿಕ್ ಸಂಗ್ರಹಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆ ಒಂದು ಸೇವೆಯಾಗಿದ್ದು, ಪ್ರತಿಯೊಬ್ಬರು ದೈನಂದಿನ ಬದುಕಿನಲ್ಲಿ ಸ್ವಚ್ಛತೆ ಹಾಗೂ ಶುಭ್ರತೆಯಿಂದ ಇರುವುದು ಜವಾಬ್ದಾರಿಯುತ ನಾಗರೀಕರ ಕರ್ತವ್ಯವಾಗಿದೆ. ಆದಕಾರಣ ತಮ್ಮ ಸುತ್ತಮುತ್ತಲಿನಲ್ಲಿರುವ ಕಸ ಕಡ್ಡಿ, ಪ್ಲಾಸ್ಟಿಕ್ ಇತರೆ ವಸ್ತುಗಳನ್ನು ವಿಂಗಡಿಸಿ ಹಸಿಕಸ ಮತ್ತು ಒಣಕಸ ಎಂದು ಬೇರ್ಪಡಿಸಿ ವಿಲೇವಾರಿ ಮಾಡಬೇಕು ಎಂದರು.ಪ್ಲಾಸ್ಟಿಕ್ ಬಳಕೆಯನ್ನು ಎಲ್ಲರೂ ತ್ಯಜಿಸಬೇಕು, ಮನೆಯ ಪಕ್ಕದಲ್ಲಿ ತಿಪ್ಪೆಗಳನ್ನು ಹಾಕುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಲು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಭಾರತ ಸರ್ಕಾರದ ನೆಹರೂ ಯುವ ಕೇಂದ್ರವು ಮಹಾತ್ಮ ಗಾಂಧೀಜಿಯವರ ಜನ್ಮ ಜಯಂತಿಯ ಸವಿ ನೆನಪಿಗಾಗಿ ಸ್ವಚ್ಛತೆ ಹೀ ಸೇವಾ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಿಂದ ಗ್ರಾಮೀಣ ಭಾಗದ ಯುವಕರಿಗೆ ಮತ್ತು ಯುವತಿಯರಿಗೆ ಸ್ವಚ್ಛತಾ ಅರಿವು, ಆರೋಗ್ಯ ಜಾಗೃತಿ, ಸಾಮಾಜಿಕ ಕಾಳಜಿ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಟಿ.ವೆಂಕಟರಾಮು, ಎಸ್‌ಡಿಎಂಸಿ ಅಧ್ಯಕ್ಷ ಜಿ.ಆಯ್ತಾರಪ್ಪ, ಮಾಳಮ್ಮ, ಬಿ.ಸುನೀತ, ಪವಿತ್ರ, ಕೆಟಿ.ಗೋವಿಂದರಾಜು, ಟಿ.ನಯನ, ವಿದ್ಯಾಶ್ರೀ ರಂಗಸ್ವಾಮಿ, ರಕ್ಷಿತ, ರಚನಾ ಮುಂತಾದವರು ಉಪಸ್ಥಿತರಿದ್ದರು.
ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯ: ಕಂದಿಕೆರೆ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಕಲ್ಯಾಣಿ, ಕೆಂಚಮ್ಮನ ದೇವಸ್ಥಾನ, ಹಾಗೂ ಪ್ರಮುಖ ಬೀದಿಗಳಲ್ಲಿ ಬಿದ್ದಿದ್ದ ಕಸಕಡ್ಡಿ ಪ್ಲಾಸ್ಟಿಕ್ ಬಳಕೆ ವಸ್ತುಗಳನ್ನು ಆರಿಸಿ ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ 30ಕ್ಕೂ ಹೆಚ್ಚು ಯುವಕರು, ಯುವತಿಯರು ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವಕ ಯುವತಿಯರಿಗೆ ಟಿ ಶರ್ಟ್, ಕ್ಯಾಪ್, ನೋಟ್ ಪುಸ್ತಕ ಹಾಗೂ ಪೆನ್‍ಗಳನ್ನು ವಿತರಿಸಲಾಯಿತು.