ನರೇಗಲ್ಲ: ಜಗತ್ತಿನಲ್ಲಿಯೇ ಅತೀ ಹೆಚ್ಚು ಜ್ಞಾನವಂತ ಯುವಶಕ್ತಿ ಹೊಂದಿರುವ ನಮ್ಮ ದೇಶದ ಮುಂದಿನ ಬಹು ದೊಡ್ಡ ಆಸ್ತಿಯೇ ನಮ್ಮ ಯುವ ಶಕ್ತಿಯಾಗಿದೆ. ಯುವಕರು ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಮಾಜ ಕಟ್ಟಿ ಬೆಳೆಸುವುದರಲ್ಲಿ ಯುವ ಜನಾಂಗ ಗಟ್ಟಿಯಾದ ಹೆಜ್ಜೆಯನ್ನಿಡಬೇಕು ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನೀತಿ ನಿಯಮವಿಲ್ಲದೇ ಸಮಾಜ-ನಾಡು ಬೆಳೆಯಲಾರದು. ಯುವ ಜನಾಂಗಕ್ಕೆ ಇತಿಹಾಸದ ಅರಿವು ಆದರ್ಶಗಳ ಪರಿಜ್ಞಾನ ಅವಶ್ಯಕ. ವರ್ತಮಾನ ಭವಿಷ್ಯತ್ತುಗಳಿಗೆ ಇತಿಹಾಸ ನಾಂದಿ. ಬೆಳೆಯುವ ಯುವ ಜನಾಂಗದಲ್ಲಿ ವೈಚಾರಿಕತೆ ಇರಲಿ. ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು.
ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಸದ್ಬಾವನೆಗಳು ಬೆಳೆಯದಿರುವುದೇ ಇಂದಿನ ಹಲವಾರು ಆವಾಂತರಗಳಿಗೆ ಕಾರಣವೆಂದರೆ ತಪ್ಪಾಗದು. ಮನುಷ್ಯನ ಬುದ್ಧಿ ಶಕ್ತಿ ಬೆಳೆದಷ್ಟು ಭಾವನೆ ಬೆಳೆಯುತ್ತಿಲ್ಲ. ಧರ್ಮದಿಂದ ಭಾವಶಕ್ತಿ ಬೆಳೆಯಬೇಕು. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆಯಬೇಕು. ಬದುಕಿ ಬಾಳುವ ಮನುಷ್ಯನಿಗೆ ಆಹಾರ ಆರೋಗ್ಯ ಮತ್ತು ಆಧ್ಯಾತ್ಮದ ಅರಿವು ಮುಖ್ಯ. ಕಲಬೆರಕೆ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯ ಕೆಡುತ್ತಿದೆ. ಆಹಾರವೇ ಔಷಧವಾಗಬೇಕಲ್ಲದೇ ಔಷಧಿಯೇ ಆಹಾರವಾಗಬಾರದು. ಆರೋಗ್ಯ ಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಶ್ರೇಷ್ಠ ಸಂಪತ್ತು. ಆರೋಗ್ಯ ಸೂತ್ರ ಪರಿಪಾಲಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಆಧ್ಯಾತ್ಮದ ಅರಿವು ಆಚರಣೆ ಮುಖ್ಯವೆಂದ ಅವರು, ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಅರಾಧನೆಯಿಂದ ದೈವಿಕ ಇಚ್ಛೆ ಕೈಗೂಡುತ್ತವೆ. ಪ್ರಗತಿ ಮತ್ತು ಅಭ್ಯುದಯ ಪ್ರಾಪ್ತವಾಗುತ್ತದೆ ಎಂದರು.ಬೆಳಗಾವಿ ಸಂಸದ-ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಭಾರತದ ಉಸಿರು ಧರ್ಮ ಮತ್ತು ಭಾವೈಕ್ಯತೆ. ಭಾರತೀಯ ಸಂಸ್ಕೃತಿ ಎಲ್ಲರನ್ನು ಒಗ್ಗೂಡಿಸುವುದೇ ಆಗಿದೆ ಹೊರತು ವಿಘಟಿಸುವುದಲ್ಲ. ದೇಶ ಉಳಿದರೆ ಧರ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಸಂಚರಿಸಿ ಧರ್ಮ ಪ್ರಜ್ಞೆ ಉಂಟು ಮಾಡುವುದಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ನೇತೃತ್ವ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಬಹು ಜನ್ಮದ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಜೀವನ ಅಭ್ಯುದಯಕ್ಕೆ ಕಾರಣವಾಗಿರುವ ಧರ್ಮಾಚರಣೆ ಮರೆಯಬಾರದು. ಬುದ್ಧಿ ಭಾವನೆಗಳ ಪರಿಶುದ್ಧತೆಯಿಂದ ಬಾಳು ಉಜ್ವಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಕಾರ್ಯಗಳು ನಡೆಯುತ್ತಿವೆ ಎಂದರು.
ಆಹಾರ-ಆರೋಗ್ಯ ಮತ್ತು ಆಧ್ಯಾತ್ಮ ಕುರಿತು ಉಪನ್ಯಾಸ ನೀಡಿದ ರಾಯಚೂರಿನ ಡಾ.ಅರುಣಾ ಹಿರೇಮಠ ಮಾತನಾಡಿ, ಜೀವನ ಶ್ರೇಯಸ್ಸಿಗೆ ಮತ್ತು ನೆಮ್ಮದಿಯ ಬದುಕಿಗೆ ಇವು ಮೂರು ಬಹಳ ಮುಖ್ಯ.ಆರೋಗ್ಯವೇ ಭಾಗ್ಯ. ಆರೋಗ್ಯ ಒಂದಿದ್ದರೆ ಏನನ್ನಾದರೂ ಸಂಪಾದಿಸಲು ಸಾಧ್ಯ ಎಂದರು.
ವೀರಾಪುರ-ಕಲಕೇರಿ ಮುದಕೇಶ್ವರ ಶಿವಾಚಾರ್ಯರು ಸ್ವಾಮಿಗಳು, ಎಲೆರಾಂಪುರ ಡಾ. ಹನುಮಂತನಾಥ ಸ್ವಾಮಿಗಳು, ಯಂಕಂಚಿ ರುದ್ರಮುನಿ ಶಿವಾಚಾರ್ಯರು, ಕಲಾದಗಿ ಗಂಗಾಧರ ಶಿವಾಚಾರ್ಯರು, ಇಟಗಿ-ನಿಡಗುಂದಿ ಷಣ್ಮುಖಪ್ಪಜ್ಜನವರು ಧರ್ಮರಮಠ, ಡಾ.ಆರ್. ಬಿ. ಬಸವರೆಡ್ಡೇರ್, ಷಣ್ಮುಖಯ್ಯ ಶಾಸ್ತ್ರೀಗಳು ಹಿರೇಮಠ, ಅಬ್ಬಿಗೇರಿ, ಮಾರುತಿ ಬಂಡಿವಡ್ಡರ್, ಸೂಡಿಯ ಶಿವಾನಂದಯ್ಯ ಲಿಂ. ಜುಕ್ತಿಹಿರೇಮಠ, ರುದ್ರಪ್ಪ ಸಂ. ಮಾರನಬಸರಿ, ಮಲ್ಲನಗೌಡ್ರು ಪ. ದೇಸಾಯಿ, ಪರತಪ್ಪ ಶಿ. ಪಟ್ಟಣಶೆಟ್ಟಿ ಹಾಗೂ ಶರಣಪ್ಪ ಈ. ನರಗುಂದಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಮಲ್ಲಿಕಾರ್ಜುನ ಗುಗ್ಗರಿ ಸ್ವಾಗತಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಪಾರ್ವತಿ ಮಹಿಳಾ ಬಳಗ ಹುಬ್ಬಳ್ಳಿ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.