ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರದೇ ಪಾರುಪತ್ಯ: ಗೃಹ ಸಚಿವ ಡಾ. ಜಿ. ಪರಮೇಶ್ವರ್

KannadaprabhaNewsNetwork |  
Published : Oct 07, 2024, 01:37 AM IST
ಕ್ರೀಡಾ ದಸರಾ ಹಾಗೂ ಮಹಿಳಾ ದಸರಾ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಡಾ. ಜಿ. ಪರಮೇಶ್ವರ್ | Kannada Prabha

ಸಾರಾಂಶ

ದೇಶದ ಎಲ್ಲಾ ವಲಯದಲ್ಲಿಯೂ ಮಹಿಳೆಯರು ತಮ್ಮ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿದ್ದಾರೆ. ಮಹಿಳೆಯರು ಎಂದಿಗೂ ಸಮರ್ಥರು ಎಂದು ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರದೇ ಪಾರುಪತ್ಯ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್ ಹೇಳಿದರು.

ತುಮಕೂರು ದಸರಾ- 2024ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ರಾಜ್ಯ ಬಾಲಭವನ ಸೊಸೈಟಿ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕ್ರೀಡಾ ದಸರಾ ಹಾಗೂ ಮಹಿಳಾ ದಸರಾ ರಂಗೋಲಿ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ವೇಗವಾಗಿ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಪಾತ್ರ ಏನೆಂಬುದನ್ನು ಅರ್ಥೈಸಿಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನಿಗದಿಪಡಿಸಿದ ಬಳಿಕ ದೇಶದಾದ್ಯಂತ 14 ಲಕ್ಷ ಮಹಿಳೆಯರು ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ ಎಂದರು.

ದೇಶದ ಎಲ್ಲಾ ವಲಯದಲ್ಲಿಯೂ ಮಹಿಳೆಯರು ತಮ್ಮ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿದ್ದಾರೆ. ಮಹಿಳೆಯರು ಎಂದಿಗೂ ಸಮರ್ಥರು ಎಂದು ಸಚಿವರು ಹೇಳಿದರು.

ನಮ್ಮ ದೇಶದ ಸಂಸ್ಕೃತಿ ಪರಂಪರೆ ಉಳಿಯಬೇಕು. ಈ ಹಿನ್ನೆಲೆಯಲ್ಲಿ ತುಮಕೂರು ದಸರಾ ಆಚರಣೆಯಲ್ಲಿ ರಂಗೋಲಿ ಸ್ಪರ್ಧೆ ಮತ್ತಿತರ ಗ್ರಾಮೀಣ ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿದೆ. ತುಮಕೂರು ದಸರಾದಲ್ಲಿ ನಮ್ಮ ಜಿಲ್ಲೆಯ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಹರ್ಷ ತಂದಿದೆ ಎಂದರು.

ಮನುಷ್ಯನ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತಿದ್ದ ಅಳು- ಗುಣಿಮನೆ, ಕುಂಟೆ- ಬಿಲ್ಲೆ, ಹಗ್ಗ- ಜಗ್ಗಾಟ, ಲಗೋರಿ, ಚಿನ್ನಿದಾಂಡಿನಂತಹ ಗ್ರಾಮೀಣ ಆಟಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಲು ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಪ್ರಯೋಜಕಾರಿಯಾಗಿವೆ ಎಂದು ತಿಳಿಸಿದರು.

ಗಿಡ-ಮರಗಳನ್ನೇ ತಮ್ಮ ಮಕ್ಕಳಂತೆ ಬೆಳಸಿ ವೃಕ್ಷಮಾತೆ ಎನಿಸಿಕೊಂಡಿರುವ ಸಾಲು ಮರದ ತಿಮ್ಮಕ್ಕನವರು ಮಹಿಳಾ ದಸರಾ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ತಮಗೆ ಮಕ್ಕಳಿಲ್ಲದ ಕಾರಣ ಲಕ್ಷಾಂತರ ಗಿಡಗಳನ್ನು ನೆಡುವ ಮೂಲಕ ವಿಶ್ವಕ್ಕೇ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ತುಮಕೂರು ದಸರಾ ಅತ್ಯಂತ ಯಶಸ್ಸಿನ ಹೊಸ್ತಿಲಲ್ಲಿ ಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ಸಜ್ಜುಗೊಳ್ಳುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಸಕ ಎಚ್. ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎನ್. ಚೇತನ್ ಕುಮಾರ್, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ರಾಜೇಶ್ವರಿ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯದ ಅಭಿಯಾನ ವ್ಯವಸ್ಥಾಪಕರಾದ ದೊಡ್ಡವಲ್ಲಪ್ಪ ಹಾಗೂ ಅಂಜನ್ ಮೂರ್ತಿ, ಅಧಿಕಾರೇತರ ಸದಸ್ಯರಾದ ತುಮಕೂರು ದಸರಾ ಸಮಿತಿ ಕುಮುದಾ ಹರೀಶ್, ಮುಖಂಡರು ಹಾಗೂ ಸಮಾಜ ಸೇವಕ ನಾಗಮಣಿ, ಪತ್ರಕರ್ತರಾದ ನಾಗರತ್ನ ಶಿವಣ್ಣ, ಸಾ.ಚಿ. ರಾಜ್‌ಕುಮಾರ್, ಕಮಲ ಗಂಗಹನುಮಯ್ಯ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ