ದೈಹಿಕ, ಮಾನಸಿಕ ಆರೋಗ್ಯದಿಂದ ಉತ್ತಮ ಜೀವನ: ನ್ಯಾ.ಎಚ್.ಮಹದೇವಪ

KannadaprabhaNewsNetwork |  
Published : Oct 11, 2024, 11:54 PM IST
10ಕೆಎಂಎನ್ ಡಿ17 | Kannada Prabha

ಸಾರಾಂಶ

ದೇಹ ಮತ್ತು ಮನಸ್ಸು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ದೇಹಕ್ಕೆ ಕಾಯಿಲೆ ಬರುವ ಹಾಗೆ ಮನಸ್ಸಿಗೂ ಕಾಯಿಲೆ ಬರುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಾನಸಿಕ ಅಸ್ವಸ್ಥರನ್ನು ಕೀಳಾಗಿ ಕಾಣದೇ ಗೌರವಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮನುಷ್ಯನ ದೈಹಿಕ ಆರೋಗ್ಯಕ್ಕೆ ನೀಡುವ ಆದ್ಯತೆಯನ್ನು ಮಾನಸಿಕ ಆರೋಗ್ಯಕ್ಕೆ ನೀಡುತ್ತಿಲ್ಲ. ಎರಡರ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಬಹುದು ಎಂದು ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ಮಹದೇವಪ್ಪ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಯಿಂದ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಹ ಮತ್ತು ಮನಸ್ಸು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ದೇಹಕ್ಕೆ ಕಾಯಿಲೆ ಬರುವ ಹಾಗೆ ಮನಸ್ಸಿಗೂ ಕಾಯಿಲೆ ಬರುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಾನಸಿಕ ಅಸ್ವಸ್ಥರನ್ನು ಕೀಳಾಗಿ ಕಾಣದೇ ಗೌರವಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.

ಅಪರ ಸಿವಿಲ್ ನ್ಯಾಯಾಧೀಶ ಬಿ.ಆರ್.ಹನುಮಂತರಾಯಪ್ಪ ಮಾತನಾಡಿ, ಮಾನವ ಸಂಘ ಜೀವಿ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅಕ್ಕ ಪಕ್ಕ ಮನೆಯವರು ಕೂಡಿ ಕಾಲ ಕಳೆಯುವ ಸಂಪ್ರದಾಯ ಕಳೆದು ಹೋಗುತ್ತಿದೆ. ಇದರಿಂದ ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ ಎಂದರು.

ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಮಾತನಾಡಿ, ಮೆದುಳಿನಲ್ಲಾಗುವ ರಾಸಾಯನಿಕ ಕ್ರಿಯೆಗಳಿಂದ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಎಲ್ಲಾ ಮಾನಸಿಕ ರೋಗಗಳಿಗೆ ನಿಗದಿತ ಚಿಕಿತ್ಸೆಯಿಂದ ಗುಣಪಡಿಸಬಹುದು. ಸಾರ್ವಜನಿಕರು ಮಾನಸಿಕ ರೋಗಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದರು.

ತಾಲೂಕು ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಡಿ.ಟಿ.ಮಂಜುನಾಥ್ ಮಾತನಾಡಿ, ಜೀವನದಲ್ಲಿ ಸಂತೋಷ, ನಗು, ಪ್ರೀತಿ ಎಂಬುದು ಬಂದಾಗ ನಮ್ಮ ಜೀವನವು ನೆಮ್ಮದಿಯಾಗಿರುತ್ತದೆ. ಬರಿ ಕೋಪ, ಗಾಬರಿ, ಆತಂಕದಲ್ಲಿದ್ದರೆ ಅದೇ ಒತ್ತಡವಾಗಿ ಮಾರ್ಪಾಡಾಗುತ್ತದೆ. ನಮ್ಮಲ್ಲಿರುವ ಒತ್ತಡ, ಸಮಸ್ಯೆ ಏನು ಎಂಬುದನ್ನು ಅರಿತು ಪರಿಹರಿಸಿಕೊಂಡರೆ ಯಾವುದೇ ಸಮಸ್ಯೆಗಳಿಲ್ಲದೆ ನಗು ನಗುತ್ತ ಜೀವನ ಮಾಡಬಹುದು ಸಲಹೆ ಎಂದರು.

ವಾಕ್ ಶ್ರವಣ ತಜ್ಞರಾದ ಐಶ್ವರ್ಯ ಮಾನಸಿಕ ರೋಗದ ಲಕ್ಷಣಗಳು, ಮಾನಸಿಕ ರೋಗ ಬರದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿ ತಿಂಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಂಗಳ 3ನೇ ಮಂಗಳವಾರ ಮನೋಚೈತನ್ಯ ಹೆಸರಿನಲ್ಲಿ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಲಭ್ಯವಿದ್ದು ಹಾಗೆಯೇ ಮಾನಸಿಕ ಆರೋಗ್ಯ ಬೆಂಬಲಕ್ಕಾಗಿ ಸಹಾಯವಾಣಿ ಸಂಖ್ಯೆ 14416 ಬಳಸಿಕೊಳ್ಳಬೇಕೆಂದು ತಿಳಿಸಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಜಂಟಿ ಕಾರ್ಯದರ್ಶಿ ಡಿ.ಕೃಷ್ಣೇಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ, ಕೃಷ್ಣೇಗೌಡ, ಪಣಿಂದ್ರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...