ಅಧಿಕೃತ ಖಾಸಗಿ ಮತ್ತು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ಕೊರತೆ ಇರುವುದಿಲ್ಲ. ರೈತರು ನ್ಯಾನೋ ರಸಗೊಬ್ಬರಗಳಾದ ನ್ಯಾನೋ ಯುರಿಯಾ ಮತ್ತು ನ್ಯಾನೋ ಡಿ.ಎ.ಪಿ ಬಳಸಬಹುದು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ ವರ್ಷ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರು ಈ ಬಾರಿ ಮುಂಗಾರು ಮಳೆ ಉತ್ತಮ ಆರಂಭ ಪಡೆದಿದ್ದರಿಂದ ಸಂತಸಗೊಂಡಿದ್ದಾರೆ. ಬಿತ್ತನೆ ಚುರುಕೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ರೈತರು ನಿರತರಾಗಿದ್ದಾರೆ. ಜಿಲ್ಲೆಯಾದ್ಯಂತ ರಾಗಿ, ಮುಸಿಕಿನ ಜೋಳ, ಗೋವಿನಜೋಳ, ಸೂರ್ಯಕಾಂತಿ, ಅಲಸಂದೆ, ತೊಗರಿ, ಹೆಸರು, ಶೇಂಗಾ(ಕಡಲೆಬೀಜ) ಸೇರಿ ಮತ್ತಿತರ ಬೆಳೆಗಳ ಬಿತ್ತನೆ ಜೋರಾಗಿದೆ. ರೈತರು ಕುಟುಂಬ ಸಮೇತರಾಗಿ ಮತ್ತು ಕೂಲಿ ಕಾರ್ಮಿಕರೊಂದಿಗೆ ಬಂದು ಬಿತ್ತನೆಯಲ್ಲಿ ತೊಡಗಿದ್ದಾರೆ.ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಪ್ರಸ್ತುತ ಸಾಮಾನ್ಯ ವಾಡಿಕೆ ಮಳೆ 224.1 ಮಿ.ಮಿ ಇದ್ದು, ಸದರಿ ವರ್ಷದಲ್ಲಿ 241.3 ಮಿ.ಮಿ ಮಳೆ ಸ್ವೀಕೃತವಾಗಿದೆ. 17.5 ಮಿ.ಮಿ ಅಧಿಕ ಮಳೆ ಆಗಿದೆ. ಈ ಹದವಾದ ಮಳೆಯು ವಿವಿಧ ಕೃಷಿ ಬೆಳೆಗಳ ಬಿತ್ತನೆ ಮಾಡಲು ಸೂಕ್ತವಾಗಿದ್ದು ನೆಲಗಡಲೆ, ತೊಗರಿ, ಮುಸುಕಿನ ಜೋಳ ಮತ್ತು ರಾಗಿ ಬೆಳೆಗಳನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಎ.ಕೇಶವರೆಡ್ಡಿ ತಿಳಿಸಿದರು.ತಾಲ್ಲೂಕಿನ ಮಂಡಿಕಲ್ ಹೋಬಳಿಯ ಯರ್ರಬಾಪನಹಳ್ಳಿ ಗ್ರಾಮದಲ್ಲಿ ಹೊಲ ಬಿತ್ತುತ್ತಿದ್ದ ರೈತರಿಗೆ ತಮ್ಮ ಅಧಿಕಾರಿಗಳ ತಂಡದೊಂದಿಗೆ ಬಿತ್ತನೆ ಬೀಜ,ರಸಗೊಬ್ಬರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬೆಳೆಗಳ ವಿಸ್ತೀರ್ಣ
ತಾಲ್ಲೂಕಿನಲ್ಲಿ ಪ್ರಸ್ತುತ ರಾಗಿ 11,110 ಹೆಕ್ಟೇರ್ ಗುರಿ ಪೈಕಿ 50 ಹೆಕ್ಟೇರ್, ಮುಸುಕಿನ ಜೋಳ 1,470 ಹೆಕ್ಟೇರ್ ಗುರಿ ಪೈಕಿ 200 ಹೆಕ್ಟೇರ್, ನೆಲಗಡಲೆ 240 ಹೆಕ್ಟೇರ್ ಗುರಿ ಪೈಕಿ 40 ಹೆಕ್ಟೇರ್ ಮತ್ತು ತೊಗರಿ 175 ಹೆಕ್ಟೇರ್ ಗುರಿ ಪೈಕಿ 40 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿರುತ್ತದೆ. ಒಟ್ಟಾರೆ 13,417 ಹೆಕ್ಟೇರ್ ಗುರಿ ಪೈಕಿ 330 ಹೆಕ್ಟೇರ್ ಬಿತ್ತನೆ ಆಗಿದ್ದು, ಶೇ.2.45 ಸಾಧನೆ ಆಗಿರುತ್ತದೆ ಎಂದರುರಸಗೊಬ್ಬರ ಲಭ್ಯತೆ
ತಾಲೂಕಿನ ವಿವಿಧ ಅಧಿಕೃತ ಖಾಸಗಿ ಮತ್ತು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ಕೊರತೆ ಇರುವುದಿಲ್ಲ. ರೈತರು ನ್ಯಾನೋ ರಸಗೊಬ್ಬರಗಳಾದ ನ್ಯಾನೋ ಯುರಿಯಾ ಮತ್ತು ನ್ಯಾನೋ ಡಿ.ಎ.ಪಿ ಬಳಸಬಹುದು. ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇತರೆ ಕಾಂಪ್ಲೆಕ್ಸ್ ರಸಗೊಬ್ಬರ ಮತ್ತು ಇತರೆ ರಸಗೊಬ್ಬರಗಳನ್ನು ಬಳಸಬಹುದಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಸಾಕಷ್ಟಿದ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.