ಪಾನಮತ್ತರು ವಾಹನ ಚಲಾಯಿಸಿದರೆ ಜೋಕೆ!

KannadaprabhaNewsNetwork |  
Published : Nov 09, 2026, 02:15 AM IST
ಫೋಟೊ ಶೀರ್ಷಿಕೆ: ಕೊಪ್ಪಳದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿರುವುದು. | Kannada Prabha

ಸಾರಾಂಶ

ಕೇವಲ ಜಾಗೃತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮಾತ್ರ ಪ್ರಕರಣ ದಾಖಲಿಸುವುದರಿಂದ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಿಲ್ಲ

ಕೊಪ್ಪಳ: ಸಂಚಾರ ನಿಯಮಗಳ ಉಲ್ಲಂಘನೆಗೆ ಬ್ರೇಕ್ ಹಾಕಲು ಮುಂದಾಗಿರುವ ಪೊಲೀಸ್ ಇಲಾಖೆ, ಜಿಲ್ಲಾದ್ಯಂತ ಹತ್ತು ದಿನಗಳ ಕಾರ್ಯಾಚರಣೆ ನಡೆಸಿ ಬರೋಬ್ಬರಿ 1,229 ಪ್ರಕರಣ ದಾಖಲಿಸಿದೆ.

ಅ. 29ರಿಂದ ನ. 7ರ ವರೆಗೆ ನಡೆದ ಸಂಚಾರ ಜಾಗೃತಿ ಕಾರ್ಯಾಚರಣೆಯಲ್ಲಿ ಪಾನಮತ್ತ ವಾಹನ ಚಾಲಕರು, ತ್ರಿಬಲ್ ರೈಡಿಂಗ್ ಮಾಡುವವರು ಹಾಗೂ ಹೆಲ್ಮೆಟ್ ಇಲ್ಲದೆ ಸಂಚರಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

ಪಾನಮತ್ತವಾಗಿ ವಾಹನ ಚಲಾಯಿಸುತ್ತಿದ್ದ 49 ಜನರ ವಿರುದ್ಧ, ತ್ರಿಬಲ್ ರೈಡಿಂಗ್ ಮಾಡುತ್ತಿದ್ದ 128 ಜನರ ವಿರುದ್ಧ ಹಾಗೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ 1,052 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಕೇವಲ ಹತ್ತು ದಿನಗಳ ಕಾರ್ಯಾಚರಣೆಯ ಲೆಕ್ಕಾಚಾರವಾಗಿದ್ದು, ಜಿಲ್ಲೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಮಾಣ ಎಷ್ಟಿದೆ ಎಂಬುದನ್ನು ಈ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ನಿತ್ಯವೂ ನಡೆಯಲಿ ಕಾರ್ಯಾಚರಣೆ: ಕೇವಲ ಜಾಗೃತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮಾತ್ರ ಪ್ರಕರಣ ದಾಖಲಿಸುವುದರಿಂದ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಿಲ್ಲ. ಪೊಲೀಸರು ನಿತ್ಯವೂ ಕಾರ್ಯಾಚರಣೆ ನಡೆಸಿದರೆ, ಪ್ರತಿದಿನವೂ ಇಷ್ಟೊಂದು ಪ್ರಕರಣಗಳು ದಾಖಲಾಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಸಂಜೆ ಬೈಕ್ ಸೇರಿದಂತೆ ವಿವಿಧ ವಾಹನ ಚಲಾಯಿಸುವವರಲ್ಲಿ ಕೆಲವರು ಪಾನಮತ್ತರಾಗಿರುತ್ತಾರೆ. ಇಂತಹವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಬೇಕು. ಕುಡಿದು ವಾಹನ ಚಲಾಯಿಸುವವರಿಂದ ಇತರರ ಜೀವಕ್ಕೂ ಅಪಾಯವಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಬ್ಬದ ಸಂಭ್ರಮದಲ್ಲೂ ದಂಡದ ಬಿಸಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಪೊಲೀಸರ ಕಾರ್ಯಾಚರಣೆಯ ಬಿಸಿ ತಟ್ಟಿದೆ. ಹಬ್ಬಕ್ಕಾಗಿ ಸಂತೆ, ಬಟ್ಟೆ ಖರೀದಿ ಸೇರಿದಂತೆ ವಿವಿಧ ಕೆಲಸಗಳಿಗೆ ಕುಟುಂಬದ ಸದಸ್ಯರನ್ನು ಬೈಕ್‌ನಲ್ಲಿ ಕರೆದೊಯ್ಯುವಾಗ ತ್ರಿಬಲ್ ರೈಡಿಂಗ್ ಮಾಡಿದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ ದಂಡ ಹಾಕಿದ್ದಾರೆ.

ಸಿಗ್ನಲ್‌ಗಳಲ್ಲಿ ಇರಲಿ ಎಚ್ಚರ: ನಗರದಲ್ಲಿ ಸಿಗ್ನಲ್ ಅಳವಡಿಸಿದ ಬಳಿಕ ಸಂಚಾರ ಸಮಸ್ಯೆ ನಿಯಂತ್ರಣಕ್ಕೆ ಬಂದಿದ್ದರೂ, ಅವುಗಳ ಸಮರ್ಪಕ ನಿರ್ವಹಣೆ ಹಾಗೂ ನಿಯಮಗಳ ಪಾಲನೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಕೆಲವು ವಾಹನ ಸವಾರರು ಸಿಗ್ನಲ್ ಜಂಪ್ ಮಾಡುತ್ತಿದ್ದರೂ, ಅವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಎಡಭಾಗದಲ್ಲಿ ಸಂಚಾರಕ್ಕೆ ಮುಕ್ತವಾಗಿದ್ದರೂ, ಕೆಲ ವಾಹನ ಸವಾರರು ಮುಂದೆ ಬಂದು ನಿಲ್ಲುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ವಾಹನ ಸವಾರರು ಹಾರ್ನ್ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಕರ್ತವ್ಯ ನಿರತ ಪೊಲೀಸರು ಸಂಚಾರವನ್ನು ಸುಗಮಗೊಳಿಸುವುದರ ಜತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು. ಸಿಗ್ನಲ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಸಂಚಾರ ನಿಯಮಗಳ ಪಾಲನೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ