ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಗಮನಹರಿಸಿ: ಟಿ.ಡಿ.ರಾಜೇಗೌಡ ತಾಕೀತು

KannadaprabhaNewsNetwork |  
Published : Nov 29, 2023, 01:15 AM IST
ನರಸಿಂಹರಾಜಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ  ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು | Kannada Prabha

ಸಾರಾಂಶ

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಗಮನಹರಿಸಿ: ಟಿ.ಡಿ.ರಾಜೇಗೌಡ ತಾಕೀತು ತ್ರೈಮಾಸಿಕ ಕೆಡಿಪಿ ಸಭೆ

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯ ತ್ರೈಮಾಸಿಕ ಕೆಡಿಪಿ ಸಭೆಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುಂದಿನ ಬೇಸಿಗೆಯಲ್ಲಿ ಶೃಂಗೇರಿ ಕ್ಷೇತ್ರದ ಕೊಪ್ಪ, ನರಸಿಂಹರಾಜಪುರ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದಿನ 3 ತಿಂಗಳ ಒಳಗೆ ಎಲ್ಲಾ ರಸ್ತೆಯ ಗುಂಡಿ ಮುಚ್ಚಿರಬೇಕು. ಜಂಗಲ್ ಕ್ಲಿಯರ್ ಮಾಡಬೇಕು. ಮುಂದೆ ಚುನಾವಣೆಗಳು ಬರುವುದರಿಂದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಎಲ್ಲಾ ಕಾಮಗಾರಿಗಳನ್ನು ಶೇ.100 ರಷ್ಟು ಮುಗಿಸಬೇಕು ಎಂದು ಸೂಚಿಸಿದರು.

ರೇಲ್ವೆ ಬ್ಯಾರಿಕೇಡ್: ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ನೀಲೇಶ್ ಮಾತನಾಡಿ, ಮುತ್ತಿನಕೊಪ್ಪ ಭಾಗದಲ್ಲಿ ಕಾಡಾನೆಗಳು ಬಾರದಂತೆ ಅರಣ್ಯ ಇಲಾಖೆ ಐಬೆಕ್ಸ್‌ ಬೇಲಿ ನಿರ್ಮಿಸಿತ್ತು. ಆದರೆ, ಕಳೆದ 6 ತಿಂಗಳಿಂದ ಐಬೆಕ್ಸ್‌ ಬೇಲಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಾಡಾನೆಗಳು ಬಾರದಂತೆ ಗುಣಮಟ್ಟದ ರೈಲ್ವೆ ಬ್ಯಾರಿಕೇಡ್‌ ಹಾಕಲು ಸರ್ಕಾರ ಗಮನ ನೀಡಿದೆ. ತಮಿಳುನಾಡಿನಲ್ಲೂ ಸಹ ಕಾಡಾನೆಗಳು ಬಾರದಂತೆ ರೈಲ್ವೆ ಹಳಿಯ ಬ್ಯಾರಿಕೇಡ್ ಹಾಕಿ ಯಶಸ್ಸು ಕಂಡಿದ್ದಾರೆ. ಐಬೆಕ್ಸ್ ಬೇಲಿ ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಗಿಡ,ಗುಂಟೆ ಬೆಳೆದು ಬ್ಯಾಟರಿ ಹಾಳಾಗುತ್ತದೆ. ಗುಣಮಟ್ಟದ ರೇಲ್ವೆ ಬ್ಯಾರಿಕೇಡ್‌ ನ್ನು ಹಂತ, ಹಂತವಾಗಿ ಮಾಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ನರಸಿಂಹರಾಜಪುರ ತಾಲೂಕಿಗೆ ಪ್ರತ್ಯೇಕವಾಗಿ ಎಲಿಫೆಂಟ್ ಟಾಸ್ಕ್‌ ಪೋರ್ಸ ಹಾಕಿಸಲಾಗುವುದು ಎಂದು ಭರವಸೆ ನೀಡಿದರು.

ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿಲ್ಲ: ಸಹಕಾರ ಸಂಘಗಳ ಮೂಲಕ ಶೂನ್ಯ ದರದಲ್ಲಿ ಸಾಲ ನೀಡುತ್ತಿಲ್ಲ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್‌, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸಂದೀಪ,ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಬೆಮ್ಮನೆ ಮೋಹನ್, ಪಿ.ಸಿ.ಎ.ಆರ್.ಡಿ.ಬ್ಯಾಂಕಿನ ಅಧ್ಯಕ್ಷ ರಂಗನಾಥ್ ಶಾಸಕರ ಗಮನಕ್ಕೆ ತಂದರು.

ಶಾಸಕ ಟಿ.ಡಿ.ರಾಜೇಗೌಡ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ.ನಬಾರ್ಡನಲ್ಲಿ ದುಡ್ಡಿನ ಕೊರತೆ ಇಲ್ಲ.ಬೇಡಿಕೆ ಇದ್ದಷ್ಟು ಹಣ ನೀಡುತ್ತೇವೆ. ಶೂನ್ಯದರದಲ್ಲಿ ಸಾಲ ನೀಡದಿದ್ದರೆ ಬೆಳಗಾಂ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.

ಜಂಟಿ ಸರ್ವೆಗೆ ಆದೇಶ: ಅರಣ್ಯ ಹಾಗೂ ಕಂದಾಯ ಭೂಮಿಗಳ ಗಡಿ ಗುರುತಿಗೆ ಜಂಟಿ ಸರ್ವೆ ಮಾಡಲು ಸರ್ಕಾರ ಆದೇಶ ನೀಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಹಕ್ಕು ಪತ್ರಗಳನ್ನು ಕಾನೂನು ಬದ್ದವಾಗಿ ನೀಡುತ್ತೇವೆ. ಕಾನೂನು ಚೌಕಟ್ಟಿನ ಒಳಗೆ ಹಕ್ಕು ಪತ್ರ ನೀಡಿದರೆ ರೈತರಿಗೆ ಅನುಕೂಲ ವಾಗಲಿದೆ. ತತ್ತೊಳದಲ್ಲಿ ಒತ್ತುವರಿ ಮಾಡಿದ್ದ ಪ್ರಬಾವಿ ವ್ಯಕ್ತಿಗಳ ಜಮೀನು ಸಹ ತೆರವು ಗೊಳಿಸಲಾಗಿದೆ. ಸರಿಯಾದ ದಾಖಲೆ ಇಲ್ಲದೆ ಬೋಗಸ್‌ ದಾಖಲೆ ಸೃಷ್ಠಿ ಮಾಡಿ ಹಕ್ಕು ಪತ್ರ ನೀಡಿದ್ದ ಶೃಂಗೇರಿ ಕೇಸುಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನ್ಯಾಯಬದ್ದವಾದ ದಾಖಲೆ ಇದ್ದ 48 ಜನ ರೈತರಿಗೆ ಹಕ್ಕು ಪತ್ರ ನೀಡಿದ್ದೇವೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಾಸಕ ಟಿ.ಡಿ.ರಾಜೇಗೌಡ ವಹಿಸಿದ್ದರು. ವೇದಿಕೆಯಲ್ಲಿ ತಹಸೀಲ್ದಾರ್‌ ತನುಜ, ತಾಲೂಕು ಪಂಚಾಯಿತಿ ಇ.ಒ.ನವೀನ್ ಕುಮಾರ್‌, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೊಪ್ಪ ಡಿಎಫ್‌ಒ ನಂದೀಶ್, ನೋಡಲ್ ಅಧಿಕಾರಿ ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ಉಮೇಶ್ ಇದ್ದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ