ಇತ್ತೀಚಿನ ದಿನಗಳಲ್ಲಿ ದರೋಡೆ ಹಾಗೂ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಒಂಟಿಯಾಗಿ ವಾಸಿಸುವ ಮಹಿಳೆಯರ ಮನೆಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಉಪಯುಕ್ತ ಎಂದು ಸಂಚಾರ ವಿಭಾಗದ ಎಸಿಪಿ ನಜ್ಮಾ ಫರೂಕಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಇತ್ತೀಚಿನ ದಿನಗಳಲ್ಲಿ ದರೋಡೆ ಹಾಗೂ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಒಂಟಿಯಾಗಿ ವಾಸಿಸುವ ಮಹಿಳೆಯರ ಮನೆಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಉಪಯುಕ್ತ ಎಂದು ಸಂಚಾರ ವಿಭಾಗದ ಎಸಿಪಿ ನಜ್ಮಾ ಫರೂಕಿ ಹೇಳಿದ್ದಾರೆ. ಅವರು ಭಾನುವಾರ ನಗರದ ಮಂಗಳಾದೇವಿ ಬಳಿಯ ಕಾಂತಿ ಚರ್ಚ್ ಹಾಲ್‌ನಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ರಿ.) ಮಂಗಳಾದೇವಿ ವಲಯ ಸಮಿತಿಯ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯಾವುದೇ ಕರೆ ಬಂದರೂ ಭಯಪಡದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬ್ಯಾಂಕ್ ಖಾತೆಗಳ ವಹಿವಾಟಿನ ಮೇಲೆ ನಿಗಾ ಇಡಬೇಕು ಎಂದು ಅವರು ಮನವರಿಕೆ ಮಾಡಿದರು.
ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳ ಸುರಕ್ಷತೆಯ ಬಗ್ಗೆಯೂ ಪೋಷಕರು ಎಚ್ಚರ ವಹಿಸಬೇಕು. ಖಾಸಗಿ ವ್ಯಾನ್‌ಗಳು, ವೈಟ್ ಬೋರ್ಡ್ ಹಾಗೂ ಯೆಲ್ಲೋ ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸೂಕ್ತ ನಿಯಮಗಳು ಮತ್ತು ವಿಮಾ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಸಂಚಾರಿ ನಿಯಮ ಪಾಲಿಸಿ:
ರಸ್ತೆ ಸುರಕ್ಷತೆ ಕುರಿತು ಮಾತನಾಡಿದ ಅವರು, ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಪೋಷಕರು ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿ ಪಾಲಿಸಬೇಕು. ಮಹಿಳೆಯರು ದ್ವಿಚಕ್ರ ವಾಹನ ಚಲಾಯಿಸುವಾಗ ಕೈಯಲ್ಲಿ ಹ್ಯಾಂಡ್‌ಬ್ಯಾಗ್ ಹಿಡಿದುಕೊಂಡು ಹೋಗುವುದರಿಂದ ಅಪಘಾತದ ಅಪಾಯ ಹೆಚ್ಚಾಗಬಹುದು. ಆದ್ದರಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.ಗೋವಿಂದಾಸ್ ಕಾಲೇಜಿನ ಉಪನ್ಯಾಸಕಿ ಹಾಗೂ ನಿರೂಪಕಿ ಅಕ್ಷತಾ ವಿ. ಮಾತನಾಡಿ, ಹಿಂದಿನ ಕಾಲದಲ್ಲಿ ಕೂಡು ಕುಟುಂಬ ವ್ಯವಸ್ಥೆ ಇದ್ದು, ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಜೀವನ ನಡೆಸುತ್ತಿದ್ದರು. ಇಂದಿನ ದಿನಗಳಲ್ಲಿ ಕುಟುಂಬದ ಕಾರ್ಯಕ್ರಮಗಳ ಸಂದರ್ಭದಲ್ಲಷ್ಟೇ ಎಲ್ಲರೂ ಒಂದೆಡೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹಿರಿಯರಾದ ಪ್ರಶಾಂತ್ ಕುಮಾರ್ ಕಲ್ಲೂರು ಶುಭ ಹಾರೈಸಿದರು. ಈ ಸಂದರ್ಭ ಸಾಧಕರಾದ ನಾಗರಾಜ್ ಬಜಾಲ್, ಜಯಪ್ರಕಾಶ್, ಈಶ್ವರ್ ಹಾಗೂ ನಾಗೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.