ಘೋಷಣೆಗೆ ಸೀಮಿತವಾದ ಬಿಯಾಂಡ್‌ ಬೆಂಗಳೂರು!

KannadaprabhaNewsNetwork |  
Published : Feb 24, 2026, 03:30 AM IST
ಹುಬ್ಬಳ್ಳಿಯಲ್ಲಿ ಟ್ರಾಫಿಕ್‌ ಸಮಸ್ಯೆ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಬಜೆಟ್‌ನಲ್ಲಿ ಯಾವ್ಯಾವ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ? ಯಾವ ಘೋಷಣೆಯಾದರೆ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿದೆ. ಇಲ್ಲಿನ ಸಮಸ್ಯೆಗಳೇನು? ಹುಬ್ಬಳ್ಳಿ-ಧಾರವಾಡದಲ್ಲಿ ಮ್ಯಾನುಫ್ಯಾಕ್ಚರಿಂಗ್‌ ಸಿಟಿ ಮಾಡಬೇಕು? ಅವುಗಳಿಗೆ ಸರ್ಕಾರ ಸ್ಪಂದಿಸಲಿ ಎಂಬ ಆಶಯದೊಂದಿಗೆ ಜನರ ನಿರೀಕ್ಷೆಗಳೇನು? ಎಂಬುದನ್ನೆಲ್ಲ ಮುಂದಿಟ್ಟುಕೊಂಡು ಬಜೆಟ್‌ ನಿರೀಕ್ಷೆ ಹೆಸರಲ್ಲಿ ಕನ್ನಡಪ್ರಭ ಇಂದಿನಿಂದ ಸರಣಿ ಲೇಖನ ಪ್ರಕಟಿಸಲಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಉತ್ತರ ಕರ್ನಾಟಕದಲ್ಲಿನ ಪ್ರತಿಭಾ ಪಲಾಯನ ತಪ್ಪಿಸಿ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಕೈಗಾರಿಕೆಗಳ ಸ್ಥಾಪನೆಗೆ ಈ ಸಲದ ಬಜೆಟ್‌ ಆದರೂ ವೇದಿಕೆ ಕಲ್ಪಿಸುವುದೇ? ಬಿಯಾಂಡ್‌ ಬೆಂಗಳೂರು ಎಂಬ ಘೋಷವಾಕ್ಯಕ್ಕೆ ಸರ್ಕಾರ ಬಜೆಟ್‌ ಮೂಲಕ ತನ್ನ ಬದ್ಧತೆ ಪ್ರದರ್ಶಿಸುತ್ತದೆಯೇ?

ಇವು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ. 6ರಂದು ಮಂಡಿಸಲಿರುವ ದಾಖಲೆಯ ತಮ್ಮ 17ನೇ ಹಾಗೂ ಈ ಸರ್ಕಾರದ 3ನೇ ಬಜೆಟ್ ಮೇಲೆ ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಜನತೆಯ ನಿರೀಕ್ಷೆಗಳು.

ಬೆಂಗಳೂರು ಆಚೆ (ಬಿಯಾಂಡ್‌ ಬೆಂಗಳೂರು) ಎಂಬುದು ಸರ್ಕಾರದ ಘೋಷವಾಕ್ಯ. ಬರೀ ಈ ಸರ್ಕಾರದ್ದಲ್ಲ. ಹಿಂದಿನ ಎಲ್ಲ ಸರ್ಕಾರಗಳು ಇದನ್ನು ಹೇಳಿಕೊಂಡೇ ಬರುತ್ತಿವೆ. ಆದರೆ ಇದು ಬರೀ ಘೋಷಣೆಯಷ್ಟೇ ಆಗುತ್ತಿದೆಯೇ ಹೊರತು ಬಿಯಾಂಡ್‌ ಬೆಂಗಳೂರಿನ ಕಲ್ಪನೆಗೆ ಸಂಬಂಧಿಸಿದಂತೆ ಯಾವ ಸರ್ಕಾರದಲ್ಲೂ ಒಂದೇ ಒಂದು ಕೆಲಸಗಳಾಗಿಲ್ಲ ಎಂಬುದು ಅಷ್ಟೇ ಸ್ಪಷ್ಟ.

ಬೆಂಗಳೂರು ಬಿಟ್ಟು ಯಾವ ನಗರಗಳಿಗೂ ಕೈಗಾರಿಕೆಗಳು ಬರುತ್ತಲೇ ಇಲ್ಲ. ಇಲ್ಲಿನ ವಿದ್ಯಾರ್ಥಿಗಳು ಕಲಿತು ಮತ್ತೆ ಕೆಲಸಕ್ಕೆ ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಾರೆ. ಇದು ದೂರವಾಗಬೇಕೆಂದರೆ ದೊಡ್ಡ ದೊಡ್ಡ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಜತೆಗೆ ಎಂಎಸ್‌ಎಂಇಗಳಿಗೆ ಉತ್ತೇಜನ ನೀಡುವ ಕೆಲಸಗಳಾಗಬೇಕು.

ಉದ್ಯಮಿ ಸ್ನೇಹಿ ಇಲಾಖೆ:

ಇನ್ನು ಯಾರಾದರೂ ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದರೆ ಅವರಿಗೆ ಹತ್ತಾರು ಇಲಾಖೆಗಳಿಂದ ಅನುಮತಿ ಪಡೆಯುವಷ್ಟರಲ್ಲೇ ಸಾಕಪ್ಪಾ ಸಾಕು ಈ ಸರ್ಕಾರದ ಸಹವಾಸ ಎನ್ನುವಂತಾಗಿದೆ. ಹೆಸರಿಗೆ ಮಾತ್ರ ಕೈಗಾರಿಕೆ ಸ್ನೇಹಿ ಸರ್ಕಾರ ಎಂದು ಹೇಳಲಾಗುತ್ತದೆಯೇ ಹೊರತೂ ಆ ನಿಟ್ಟಿನಲ್ಲಿ ಕೆಲಸಗಳಾಗುತ್ತಿಲ್ಲ ಎಂಬುದು ಉದ್ದಿಮೆಗಳ ಆರೋಪ. ಆದ ಕಾರಣ ಕೈಗಾರಿಕೆ ಸ್ನೇಹಿ ಎಂಬುದನ್ನು ಸಾಬೀತು ಪಡಿಸುವಂತಹ ಕೆಲಸಗಳಾಗಬೇಕು. ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ತರಬೇಕು. ಅದು ಈ ಬಜೆಟ್‌ ಮೂಲಕ ಆಗಲಿ ಎಂಬ ಆಶಯ ಉದ್ದಿಮೆದಾರರದು.

ಜತೆಗೆ ಕೈಗಾರಿಕಾ ವಸಾಹತುಗಳ ಅಭಿವೃದ್ಧಿ, ಲ್ಯಾಂಡ್‌ ಬ್ಯಾಂಕ್‌ಗೆ ಒತ್ತು ನೀಡಬೇಕು. ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪಿಸಲು ಭೂಮಿ ದರವನ್ನು ಏರಿಕೆ ಮಾಡಿರುವುದು ಮುಖ್ಯ ಕಾರಣವಾಗಿದೆ. ಆದಕಾರಣ ದರವನ್ನು ಮೊದಲನಂತೆ ಇಳಿಸಿ ಉದ್ಯಮಿಗಳಿಗೆ ನೀಡುವಂತಾಗಬೇಕು. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಮ್ಯಾನುಫ್ಯಾಕ್ಚರಿಂಗ್‌ ಸಿಟಿ ಮಾಡಬೇಕು. ಇದರಿಂದ ಸಣ್ಣ, ಅತಿ ಸಣ್ಣ ಉದ್ದಿಮೆಗಳು ಒಂದೇ ಕಡೆ ಸ್ಥಾಪನೆಯಾಗುತ್ತವೆ. ಆಗ ಸಹಜವಾಗಿ ಲಾಜಿಸ್ಟಿಕ್‌ ಸಮಸ್ಯೆ ಎದುರಾಗುವುದಿಲ್ಲ ಎಂಬುದು ಉದ್ಯಮಿದಾರರ ಅಂಬೋಣ.

ಇದರೊಂದಿಗೆ ಇಟ್ಟಿಗಟ್ಟಿ, ಮಮ್ಮಿಗಟ್ಟಿ, ತಾರಿಹಾಳ, ಗಾಮನಗಟ್ಟಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಲಭ್ಯ ಕಲ್ಪಿಸಬೇಕು. ಈ ಬಜೆಟ್‌ ಕೈಗಾರಿಕಾ ಸ್ನೇಹಿ, ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ಕೆಲಸ ಮಾಡಲಿ ಎಂಬ ನಿರೀಕ್ಷೆ ಉದ್ದಿಮೆದಾರರದು.ಕೈಗಾರಿಕಾ ವಸಾಹತುಗಳಲ್ಲಿ ಮೂಲಸೌಲಭ್ಯಗಳೇ ಇಲ್ಲ. ಇನ್ನು ಯಾರಾದರೂ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಮುಂದಾದರೆ ಅವರು ಕಚೇರಿಯಿಂದ ಕಚೇರಿಗೆ ಅಲೆದೇ ಸುಸ್ತಾಗುವಂತಹ ಪರಿಸ್ಥಿತಿ ಇದೆ. ಇದು ಹೋಗಬೇಕು. ಬಿಯಾಂಡ್ ಬೆಂಗಳೂರು ಬರೀ ಘೋಷಣೆಯಾಗಬಾರದು. ಅದಕ್ಕೆ ತಕ್ಕಂತೆ ಕೆಲಸಗಳಾಗಬೇಕು.

ಇಸ್ಮಾಯಿಲ್‌ ಶಿರಹಟ್ಟಿ, ಉದ್ದಿಮೆದಾರ, ಹುಬ್ಬಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಕ್ತರ ಮನಸ್ಸಿನಲ್ಲಿ ಸಿದ್ದಲಿಂಗ ಶ್ರೀಗಳು ಶಾಶ್ವತ: ಗವಿಮಠದ ಬಸವಲಿಂಗ ಶ್ರೀಗಳು
ಅಬಕಾರಿ ಇಲಾಖೆ ಕಾರ್ಯಾಚರಣೆ: 2 ಟ್ಯಾಂಕರ್ ಸೇರಿ ₹90 ಲಕ್ಷ ಮೌಲ್ಯದ ಸ್ವತ್ತು ಜಪ್ತಿ