ಸಂತ ಸೇವಾಲಾಲರನ್ನು ಸರ್ವ ಸಮುದಾಯದವರೂ ಆರಾಧಿಸುತ್ತಾರೆ. ಆದ್ದರಿಂದ ಅವರ ಆದರ್ಶ ಎಲ್ಲರಿಗೂ ಪ್ರೇರಣೆಯಾಗಿದೆ.
ಯಲಬುರ್ಗಾ: ಮನುಷ್ಯನಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯವಿದೆ ಎಂದು ಶ್ರೀಶಿವಪ್ರಕಾಶ ಮಹಾರಾಜರು ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ, ತಾಲೂಕು ಗೋರಸೇನಾ ಸಂಘ ಹಾಗೂ ಬಂಜಾರ ನೌಕರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಮತ್ತು ಭೋಗ್ ಪೂಜಾ, ಜಾಗೃತಿ ಸಭೆ ಹಾಗೂ ಬಂಜಾರಾ ಸಾಂಸ್ಕೃತಿಕ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂತ ಸೇವಾಲಾಲರನ್ನು ಸರ್ವ ಸಮುದಾಯದವರೂ ಆರಾಧಿಸುತ್ತಾರೆ. ಆದ್ದರಿಂದ ಅವರ ಆದರ್ಶ ಎಲ್ಲರಿಗೂ ಪ್ರೇರಣೆಯಾಗಿದೆ. ನಿಮ್ಮ ಮಕ್ಕಳಿಗೆ ಗಂಡು ಹೆಣ್ಣೆಂಬ ಬೇಧ ಮಾಡದೇ ಎಲ್ಲರಿಗೂ ಸಮಾನ ರೂಪದ ಶಿಕ್ಷಣ ಕೊಡಿಸಬೇಕು.ಸೇವಾಲಾಲರ ಜಯಂತಿ ಅರ್ಥಪೂರ್ಣವಾಗಬೇಕಾದರೆ ಅವರ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕು. ನಮ್ಮ ಹಕ್ಕು ಪಡೆಯಲು ಡಾ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದ ಅವಶ್ಯವಿದೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಸಂತ ಸೇವಾಲಾಲರು ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಅಂತ ಮಹಾತ್ಮರ ತತ್ವಾದರ್ಶ ಎಲ್ಲರೂ ಅನುಕರಿಸಬೇಕು. ಸಮುದಾಯದ ಮಕ್ಕಳು ವಿದ್ಯಾವಂತರಾಗಬೇಕು. ತಾಂಡಾಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾಣಬೇಕು. ಸಮಾಜದವರು ಒಗ್ಗಟ್ಟಾಗಬೇಕು. ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿದರು. ಮಾರನಾಳದ ಶ್ರೀ ಚಂದಾಲಾಲಾ ಪೂಜಾರ, ಬಂಜಾರ ಧರ್ಮಗುರು ಶ್ರೀ ಹೇಮಗಿರಿ ಗೋಸಾವಿ ಬುವಾನವರು ಸಾನ್ನಿಧ್ಯ ವಹಿಸಿದ್ದರು. ಬಂಜಾರ ಸಮಾಜದ ಅಧ್ಯಕ್ಷ ಸೀನಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.