ಬಿಜಿಎಂ ಸಿನಿಮಾ ಶೂಟಿಂಗ್ ಶುರು; ಗಣೇಶ ಹಬ್ಬಕ್ಕೆ ರಾಜ್ಯಾದ್ಯಂತ ಬಿಡುಗಡೆ

KannadaprabhaNewsNetwork |  
Published : Apr 02, 2026, 02:00 AM IST
ಬಿ.ಜಿ.ಎಂ.ಚಿತ್ರತಂಡ ಬಳ್ಳಾರಿಯಲ್ಲಿ ಬುಧವಾರ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚಿತ್ರೀಕರಣ ಆರಂಭಿಸಿತು. ಮೇಯರ್ ಪಿ.ಗಾದೆಪ್ಪ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದರು.  | Kannada Prabha

ಸಾರಾಂಶ

ಬೆಂಗಳೂರಿನ ಶ್ರೀಚಕ್ರ ಫಿಲಂಸ್ ನವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಬಳ್ಳಾರಿ: ಭಾರತೀಯ ಪರಂಪರೆಯ ವಿವಾಹದ ಮಹತ್ವ ಕುರಿತು ಪ್ರಚುರಪಡಿಸುವ ತ್ರಿಕೋನ ಪ್ರೇಮಕಥೆ ಹೊಂದಿರುವ ಬಿಜಿಎಂ ಸಿನಿಮಾವನ್ನು ಬಳ್ಳಾರಿ ಗ್ರಾಮೀಣ ಪ್ರದೇಶ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಬರುವ ಗಣೇಶ ಹಬ್ಬಕ್ಕೆ ಚಿತ್ರಮಂದಿರಗಳಿಗೆ ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರದ ನಿರ್ದೇಶಕ ಹಾಗೂ ಸಿನಿಮಾ ಲೇಖಕ ರಮೇಶ್ ಭೀಮರಾಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಶ್ರೀಚಕ್ರ ಫಿಲಂಸ್ ನವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಾಯಕ ನಟರ ಪಾತ್ರಗಳಲ್ಲಿ ಬೆಂಗಳೂರಿನ ಮಲ್ಲಿಕಾರ್ಜುನ್ ಹಾಗೂ ದಿನೇಶ್ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಕೊಟ್ಟೂರು ಅವರು ನಾಯಕಿ ಪಾತ್ರ ನಿರ್ವಹಿಸುವರು. ಆಕಾಶಪರ್ವ ಅವರ ಸಂಗೀತ ನಿರ್ದೇಶನ ಇರುವ ಸಿನಿಮಾಕ್ಕೆ ಅಂಜನಿಪುತ್ರ, ಕಬ್ಜ, ಜಂಟಲ್‌ಮನ್, ಕೆಜಿಎಫ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುವ ಕಿನ್ನಾಳ್‌ರಾಜ್ ಅವರು ಬಿಜಿಎಂ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ, ಹಾಡುಗಳನ್ನು ಬರೆದಿದ್ದಾರೆ. ರಾಮಾಯಣದಲ್ಲಿ ಬರುವ ಅನೇಕ ಸನ್ನಿವೇಶಗಳನ್ನು ಈಗಿನ ಕಾಲಕ್ಕೆ ಅನ್ವಯಿಸಿ ಸಿನಿಮಾದ ಸನ್ನಿವೇಶಗಳನ್ನು ರೂಪಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಬಳಿಕ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದು ತಿಳಿಸಿದರು.

ಚಿತ್ರದ ನಾಯಕಿ ಪೂಜಾ ಕೊಟ್ಟೂರು ಮಾತನಾಡಿ, ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನ್ನ ಮೂರನೇ ಸಿನಿಮಾ. ಅನೇಕ ಧಾರವಾಹಿಗಳಲ್ಲಿ ನಟಿಸಿದ್ದೇನೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಕಾವ್ಯ ಧಾರವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ. ಬಿಜಿಎಂ ಚಿತ್ರದ ಕಥೆ ವಿಭಿನ್ನವಾಗಿದೆ. ಸಿನಿಮಾ ಪ್ರಿಯರಿಗೆ ಖಂಡಿತ ಇಷ್ಟವಾಗಲಿದೆ ಎಂದು ತಿಳಿಸಿದರು.

ರಮೇಶ್ ಭೀಮರಾಯಪ್ಪ ಅತ್ಯುತ್ತಮ ಕಥೆ ಬರೆದಿದ್ದಾರೆ. ಕಥೆಯ ಬಗ್ಗೆ ತಿಳಿದ ಬಳಿಕ ಬಿಜಿಎಂ ಚಿತ್ರತಂಡದಲ್ಲಿ ಕೆಲಸ ಮಾಡಬೇಕು ಎಂದೆನಿಸಿತು. ಈ ಚಿತ್ರತಂಡದಲ್ಲಿ ಸೇರಿಕೊಂಡಿರುವೆ. ಇದೊಂದು ಭಾರತೀಯ ವಿವಾಹ ಮಹತ್ವ ಕುರಿತು ತಿಳಿಸುವ ಸಿನಿಮಾವಾಗಿದ್ದು, ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕಿನ್ನಾಳ್ ರಾಜ್ ಅವರು ತಿಳಿಸಿದರು. ಚಿತ್ರತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಂಘಟಿತ ಕಾರ್ಮಿಕರಿಗೂ ಸರ್ಕಾರಿ ಸೌಲಭ್ಯ ಕಲ್ಪಿಸಿ: ಕಾಮಾಕ್ಷಿ ರೇವಣಕರ
ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ಎಲ್ಲರಿಗೂ ಆದರ್ಶ: ಡಾ. ವಿಜಯಮಹಾಂತೇಶ ದಾನಮ್ಮನವರ