-ಮರದ ನೆರಳು ಇಂದು ದೇಶ-ವಿದೇಶಗಳಲ್ಲೂ ಹರಡಿದೆ । ಕೆಂಗೇರಿಯ ಬಿಜಿಎಸ್ ಮೈದಾನದಲ್ಲಿ ಬಿಜಿಎಸ್ ಫೌಂಡೇಷನ್ ಡೇ, ಬಿಜಿಎಸ್ ಉತ್ಸವ-2026
ಆದಿ ಚುಂಚನಗಿರಿ ಮಠವು ಶಿಕ್ಷಣ, ಆರೋಗ್ಯ ಸೇವೆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ಲಾಘಿಸಿದ್ದಾರೆ.
ಶುಕ್ರವಾರ ಕೆಂಗೇರಿಯ ಬಿಜಿಎಸ್ ಮೈದಾನದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಆಯೋಜಿಸಿದ್ದ 18ನೇ ಬಿಜಿಎಸ್ ಫೌಂಡೇಷನ್ ಡೇ ಮತ್ತು ಬಿಜಿಎಸ್ ಉತ್ಸವ-2026 ಉದ್ಘಾಟಿಸಿ ಅವರು ಮಾತನಾಡಿದರು.ಬಿಜಿಎಸ್ ಸಂಸ್ಥೆಯು ಇಂದು ಹುಟ್ಟಿ ನಾಳೆ ಸಾಯುವ ಹುಲ್ಲುಕಡ್ಡಿಯಲ್ಲ. ಇದು ನೂರಾರು ವರ್ಷ ಬಾಳುವ ಆಲದ ಮರ ಇದ್ದಂತೆ. ಬಾಲಗಂಗಾಧರನಾಥ ಸ್ವಾಮೀಜಿಯವರು ನೆಟ್ಟ ಈ ಆಲದ ಮರದ ನೆರಳು ಇಂದು ದೇಶ-ವಿದೇಶಗಳಲ್ಲೂ ಹರಡಿಕೊಂಡಿದೆ. ಮಂಡ್ಯ ಜಿಲ್ಲೆಯ ಒಂದು ಕುಗ್ರಾಮದಲ್ಲಿದ್ದ ಚುಂಚನಗಿರಿ ಮಠ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾರತಮ್ಯವಿಲ್ಲದೆ ಸೇವೆ
ನಮ್ಮ ಗುರುಗಳಾದ ಅಜ್ಜಯ್ಯನವರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶದೊಂದಿಗೆ ಮಾರ್ಗದರ್ಶನ ನೀಡಿದ್ದರು. ಅದೇ ಆಶಯವನ್ನು ಬಾಲಗಂಗಾಧರನಾಥ ಸ್ವಾಮೀಜಿಯವರು ‘ಮಾನವ ಸೇವೆಯಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಚಿಂತನೆಯ ಮೂಲಕ ಮುಂದುವರಿಸಿದರು. ಗುರುವೇ ಅರಿವಿನ ಜ್ಯೋತಿ, ಗುರುವೇ ಅಂತರಂಗ ಮತ್ತು ಬಹಿರಂಗ. ಗುರುವೇ ಒಂದು ದೊಡ್ಡ ತತ್ವ, ತಪಸ್ಸು ಹಾಗೂ ಮಾರ್ಗದರ್ಶನ ಎಂದು ಬಣ್ಣಿಸಿದರು.
ಕೆಂಗೇರಿಯ ಬಿಜಿಎಸ್ ಮೈದಾನದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಆಯೋಜಿಸಿದ್ದ ಬಿಜಿಎಸ್ ಉತ್ಸವವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು, ಡಾ ಪ್ರಕಾಶನಾಥ ಸ್ವಾಮೀಜಿ, ಸಚಿವ ಎಚ್.ಸಿ.ಬಾಲಕೃಷ್ಣ, ಶಾಸಕ ಎಸ್.ಟಿ.ಸೋಮಶೇಖರ್, ನಟ ಗಣೇಶ್ ಮತ್ತಿತರರು ಹಾಜರಿದ್ದರು.