ಕುರಿಗಳ ಹಿಂಡುಗಳೊಂದಿಗೆ ಊರೂರು ಅಲೆದಾಡುವ ಸಂಚಾರಿ ಕುರಿಗಾಹಿಗಳಿದ್ದಲ್ಲಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೆರಳಿ ಅವರೊಂದಿಗೆ ಕೆಲಕಾಲ ಬೆರೆತು ಕುಂದುಕೊರತೆ ಆಲಿಸಿದರು.

ಹಾವೇರಿ: ಕುರಿಗಳ ಹಿಂಡುಗಳೊಂದಿಗೆ ಊರೂರು ಅಲೆದಾಡುವ ಸಂಚಾರಿ ಕುರಿಗಾಹಿಗಳಿದ್ದಲ್ಲಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೆರಳಿ ಅವರೊಂದಿಗೆ ಕೆಲಕಾಲ ಬೆರೆತು ಕುಂದುಕೊರತೆ ಆಲಿಸಿದರು.

ಕಾಗಿನೆಲೆಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವಕ್ಕೆ ತೆರಳುವ ಮಾರ್ಗ ಮಧ್ಯೆ ಕುರುಬಗೊಂಡ ಗ್ರಾಮದ ಹೊಲವೊಂದರಲ್ಲಿ ನೆಲೆಸಿದ್ದ ಕುರಿಗಾಹಿಗಳನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿದರು. ಇನ್ನು ಮುಂದೆ ಪಡಿತರಕ್ಕಾಗಿ ಅಲೆಯುವ ಅಗತ್ಯವಿಲ್ಲ. ನೀವು ಎಲ್ಲೇ ಇದ್ದರೂ ಅಲ್ಲಿಯೇ ಪಡಿತರ ದೊರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನರಗುಂದ ಭಾಗದ ಸಂಚಾರಿ ಕುರಿಗಾಹಿಗಳು ತಮ್ಮ ಸಂಕಷ್ಟವನ್ನು ತೋಡಿಕೊಂಡರು. ಕುರಿಗಳೊಂದಿಗೆ ಜೀವನೋಪಾಯಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಸಂಚರಿಸುತ್ತೇವೆ. ಆದರೆ, ಪ್ರತಿ ತಿಂಗಳು ಪಡಿತರ ಪಡೆಯಲು ಮಾತ್ರ ಸ್ವಗ್ರಾಮಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ನಾವು ಎಲ್ಲಿದ್ದೇವೆಯೋ ಅಲ್ಲಿಯೇ ಪಡಿತರ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕುರಿಗಾಹಿಗಳ ಅಹವಾಲಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ, ಇದು ಕೇವಲ ನಿಮ್ಮ ಸಮಸ್ಯೆಯಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಚಾರಿ ಕುರಿಗಾಹಿಗಳ ಸಮಸ್ಯೆಯೂ ಆಗಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಆದಷ್ಟು ಬೇಗ ಸಂಚಾರಿ ಕುರಿಗಾಹಿಗಳು ತಾವು ನೆಲೆಸಿರುವ ಸ್ಥಳದಲ್ಲಿಯೇ ಪಡಿತರ ಪಡೆಯಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೇ ಕುರಿ ಕಳ್ಳತನವಾಗುತ್ತಿರುವ ಬಗ್ಗೆಯೂ ಕುರಿಗಾಹಿಗಳು ಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಡಿಕೆಶಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಇತರರು ಇದ್ದರು.