ಆದಿ ಚುಂಚನಗಿರಿ ಮಠವು ಶಿಕ್ಷಣ, ಆರೋಗ್ಯ ಸೇವೆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ಲಾಘಿಸಿದ್ದಾರೆ.

-ಮರದ ನೆರಳು ಇಂದು ದೇಶ-ವಿದೇಶಗಳಲ್ಲೂ ಹರಡಿದೆ । ಕೆಂಗೇರಿಯ ಬಿಜಿಎಸ್ ಮೈದಾನದಲ್ಲಿ ಬಿಜಿಎಸ್ ಫೌಂಡೇಷನ್ ಡೇ, ಬಿಜಿಎಸ್ ಉತ್ಸವ-2026

ಕನ್ನಡಪ್ರಭ ವಾರ್ತೆ ಬೆಂಗಳೂರು

ಆದಿ ಚುಂಚನಗಿರಿ ಮಠವು ಶಿಕ್ಷಣ, ಆರೋಗ್ಯ ಸೇವೆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ಲಾಘಿಸಿದ್ದಾರೆ.

ಶುಕ್ರವಾರ ಕೆಂಗೇರಿಯ ಬಿಜಿಎಸ್ ಮೈದಾನದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಆಯೋಜಿಸಿದ್ದ 18ನೇ ಬಿಜಿಎಸ್ ಫೌಂಡೇಷನ್ ಡೇ ಮತ್ತು ಬಿಜಿಎಸ್ ಉತ್ಸವ-2026 ಉದ್ಘಾಟಿಸಿ ಅವರು ಮಾತನಾಡಿದರು.

ಬಿಜಿಎಸ್ ಸಂಸ್ಥೆಯು ಇಂದು ಹುಟ್ಟಿ ನಾಳೆ ಸಾಯುವ ಹುಲ್ಲುಕಡ್ಡಿಯಲ್ಲ. ಇದು ನೂರಾರು ವರ್ಷ ಬಾಳುವ ಆಲದ ಮರ ಇದ್ದಂತೆ. ಬಾಲಗಂಗಾಧರನಾಥ ಸ್ವಾಮೀಜಿಯವರು ನೆಟ್ಟ ಈ ಆಲದ ಮರದ ನೆರಳು ಇಂದು ದೇಶ-ವಿದೇಶಗಳಲ್ಲೂ ಹರಡಿಕೊಂಡಿದೆ. ಮಂಡ್ಯ ಜಿಲ್ಲೆಯ ಒಂದು ಕುಗ್ರಾಮದಲ್ಲಿದ್ದ ಚುಂಚನಗಿರಿ ಮಠ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಗಳು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಸುಮಾರು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಇಂದು ದೇಶ-ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವರ ಆಶಯದಂತೆ ಮಠದ ಸೇವಾ ಕಾರ್ಯಗಳು ಮುಂದುವರಿಯುತ್ತಿವೆ ಎಂದು ಹೇಳಿದರು.

ತಾರತಮ್ಯವಿಲ್ಲದೆ ಸೇವೆ

ಹಿರಿಯ ಸ್ವಾಮೀಜಿಯವರ ಹಾದಿಯಲ್ಲೇ ನಿರ್ಮಲಾನಂದನಾಥ ಸ್ವಾಮೀಜಿಯವರು ಮುನ್ನಡೆಯುತ್ತಿದ್ದಾರೆ. ಮಠದ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾಜದ ಎಲ್ಲಾ ವರ್ಗಗಳಿಗೂ ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಹಿಂದುಳಿದ ವರ್ಗಗಳೂ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಬೇಕು ಎಂಬ ಮಾರ್ಗದರ್ಶನವನ್ನು ಬಾಲಗಂಗಾಧರನಾಥ ಸ್ವಾಮೀಜಿಯವರು ನೀಡಿದ್ದರು. ಅವರ ಈ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

ನಮ್ಮ ಗುರುಗಳಾದ ಅಜ್ಜಯ್ಯನವರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶದೊಂದಿಗೆ ಮಾರ್ಗದರ್ಶನ ನೀಡಿದ್ದರು. ಅದೇ ಆಶಯವನ್ನು ಬಾಲಗಂಗಾಧರನಾಥ ಸ್ವಾಮೀಜಿಯವರು ‘ಮಾನವ ಸೇವೆಯಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಚಿಂತನೆಯ ಮೂಲಕ ಮುಂದುವರಿಸಿದರು. ಗುರುವೇ ಅರಿವಿನ ಜ್ಯೋತಿ, ಗುರುವೇ ಅಂತರಂಗ ಮತ್ತು ಬಹಿರಂಗ. ಗುರುವೇ ಒಂದು ದೊಡ್ಡ ತತ್ವ, ತಪಸ್ಸು ಹಾಗೂ ಮಾರ್ಗದರ್ಶನ ಎಂದು ಬಣ್ಣಿಸಿದರು.

--ಕ್ಯಾಪ್ಷನ್‌....))))

ಕೆಂಗೇರಿಯ ಬಿಜಿಎಸ್ ಮೈದಾನದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಆಯೋಜಿಸಿದ್ದ ಬಿಜಿಎಸ್ ಉತ್ಸವವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು, ಡಾ ಪ್ರಕಾಶನಾಥ ಸ್ವಾಮೀಜಿ, ಸಚಿವ ಎಚ್.ಸಿ.ಬಾಲಕೃಷ್ಣ, ಶಾಸಕ ಎಸ್.ಟಿ.ಸೋಮಶೇಖರ್, ನಟ ಗಣೇಶ್ ಮತ್ತಿತರರು ಹಾಜರಿದ್ದರು.