ಎಸ್ಐಆರ್ ಮತದಾರರ ಪಟ್ಟಿಯನ್ನು ರದ್ದುಗೊಳಿಸುವುದು, ರೈತರ ಸಂಪೂರ್ಣ ಸಾಲಮನ್ನಾ, ಭೂ ಹಕ್ಕುಗಳ ಸಂರಕ್ಷಣೆ ಸೇರಿದಂತೆ 7 ಪ್ರಮುಖ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಎಸ್ಐಆರ್ ಮತದಾರರ ಪಟ್ಟಿಯನ್ನು ರದ್ದುಗೊಳಿಸುವುದು, ರೈತರ ಸಂಪೂರ್ಣ ಸಾಲಮನ್ನಾ, ಭೂ ಹಕ್ಕುಗಳ ಸಂರಕ್ಷಣೆ ಸೇರಿದಂತೆ 7 ಪ್ರಮುಖ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅಲ್ಲಿ ಬಹಿರಂಗ ಸಭೆ ನಡೆಸಿ ನಂತರ ಬೈಕ್ಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮನವಿ ಸಲ್ಲಿಸಿ, ಭಾರತದ ರಾಷ್ಟ್ರಪತಿಗಳಿಗೆ ಮನವಿ ರವಾನಿಸುವಂತೆ ಮನವಿ ಮಾಡಿದರು.
ಈ ವೇಳೆ ಎಐಕೆಎಸ್ನ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಅಂಗೀಕರಿಸಲು ಮಾತ್ರವಲ್ಲದೇ ರೈತರು, ಕೃಷಿ ಕೂಲಿಕಾರರೊಂದಿಗೆ ಈ ಕುರಿತು ಕೇಂದ್ರ ಸರ್ಕಾರ ಚರ್ಚೆ ನಡೆಸಬೇಕು. ಕೇಂದ್ರವು ವಾಗ್ದಾನ ಮಾಡಿದಂತೆ ಏಕಸ್ವಾಮ್ಯ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು. ರೈತರು, ಕೃಷಿ ಕಾರ್ಮಿಕರಿಗೆ ಮಾರಕ ಆಗುವಂತಹ ಕಾಯಿದೆಗಳನ್ನು ಆಡಳಿತಾತ್ಮಕ ಅಧಿಸೂಚನೆಗಳು ಮತ್ತು ಡಿಜಿಟಲ್ ತಂತ್ರಾಂಶಗಳ ನೆಪದಲ್ಲಿ ಕಾನೂನುಬದ್ಧಗೊಳಿಸಿ ಮತ್ತೆ ರೈತರ ಮೇಲೆ ಹೇರಲಾಗುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ನೀಡಿದ ವಾಗ್ದಾನವನ್ನು ಉಲ್ಲಂಘಿಸಿದೆ. ಇದರ ವಿರುದ್ದ ಕಾರ್ಮಿಕ ವರ್ಗವು ಬೀದಿಗಿಳಿದು ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ಹೊನ್ನೂರು ಮುನಿಯಪ್ಪ ಮಾತನಾಡಿ, ಸಮಗ್ರ ಕೃಷಿ ಸಾಲ ಮನ್ನಾ ಘೋಷಣೆ ಮಾಡುವ ಮೂಲಕ ಋಣಭಾರ ಕಡಿಮೆ ಮಾಡುವ ಮೂಲಕ ರೈತರ, ಕಾರ್ಮಿಕರ ಆತ್ಮಹತ್ಯೆಗಳನ್ನು ಕೊನೆಗಾಣಿಸಬೇಕು. ವಿದ್ಯುತ್ ಖಾಸಗೀಕರಣ ಮಸೂದೆ, ಬೀಜ ಮಸೂದೆ ಸೇರಿದಂತೆ ರೈತರಿಗೆ ಮಾರಕವಾಗಿರುವ ಎಲ್ಲಾ ಕಾಯಿದೆಗಳನ್ನು ಕೈಬಿಡಬೇಕು. ದೇಶದಲ್ಲಿ ಕೃಷಿ ಉಳಿಸಲು ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟನ್ನು ಕೊನೆಗಾಣಿಸಬೇಕೆಂದು ಆಗ್ರಹಿಸಿದರು.
ಸಿಐಟಿಯುನ ಕೆ.ಎಚ್. ಆನಂದರಾಜ್ ಮಾತನಾಡಿ, ಕೃಷಿಗೆ ಸಂಬಂಧಿತ ವಿದೇಶಿ ಒಪ್ಪಂದಗಳನ್ನು ಕೈಬಿಡಬೇಕು. ಖಾಸಗೀಕರಣ ನೀತಿಗಳನ್ನು ಹಿಂಪಡೆಯಬೇಕು. ಭೂಹಕ್ಕುಗಳ ಸಂರಕ್ಷಣೆ ಮಾಡಬೇಕು. ಕಾರ್ಮಿಕ ಸಂಹಿತೆಗಳ ರದ್ದತಿ ಮತ್ತು ಕನಿಷ್ಠ ವೇತನ ಜಾರಿ ಮಾಡಬೇಕು. ಮನರೇಗಾವನ್ನು ಬಲಪಡಿಸಿ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.ಹೆಗ್ಗೆರೆ ರಂಗಪ್ಪ ಮಾತನಾಡಿ, ಪ್ರತಿಭಟಿಸುವ ಹಕ್ಕು ಸಾಂವಿಧಾನಿಕವಾಗಿದೆ. ಆದರೆ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವ ಹೋರಾಟಗಾರರನ್ನು ತಡೆಯಲು ಯಾವುದೇ ಆಡಳಿತ ಯಂತ್ರ ಬಳಸಬಾರದು. ಜನತೆಯ ಪ್ರಜಾಸತ್ತಾತ್ಮಕ ಚಳವಳಿಗಳ ಮೇಲೆ ನಡೆಸುವ ದಮನಕಾರಿ ನೀತಿಯನ್ನು ಈ ಕೂಡಲೇ ಕೈಬಿಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಬುಳ್ಳಾಪುರದ ಹನುಮಂತಪ್ಪ, ಕೆ.ಟಿ.ಗಣೇಶ್, ನೀತಿಗರೆ ಗಣೇಶ್, ಐರಣಿ ಚಂದ್ರು, ಸತೀಶ್ ಅರವಿಂದ್, ಪವಿತ್ರಾ, ಕೆ.ಬಾನಪ್ಪ, ನೀತಿಗೆರೆ ಲಿಂಗೇಶ್, ಪಿ.ಬಸವರಾಜ್, ಹೆಚ್ಕೆಆರ್ ಸುರೇಶ್, ನಾಗಮ್ಮ, ಎ.ತಿಪ್ಪೇಶ್ ಆವರಗೆರೆ, ಹನುಮಂತಪ್ಪ, ಪಿ.ಪಿ.ಮರುಳಸಿದ್ದಯ್ಯ, ವಿ.ಲಕ್ಷ್ಮಣ್, ದಾದಾಪೀರ್, ಯಲ್ಲಪ್ಪ ಇತರರು ಇದ್ದರು.