ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅಲ್ಲಿ ಬಹಿರಂಗ ಸಭೆ ನಡೆಸಿ ನಂತರ ಬೈಕ್‌ಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮನವಿ ಸಲ್ಲಿಸಿ, ಭಾರತದ ರಾಷ್ಟ್ರಪತಿಗಳಿಗೆ ಮನವಿ ರವಾನಿಸುವಂತೆ ಮನವಿ ಮಾಡಿದರು.
ಈ ವೇಳೆ ಎಐಕೆಎಸ್‌ನ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಅಂಗೀಕರಿಸಲು ಮಾತ್ರವಲ್ಲದೇ ರೈತರು, ಕೃಷಿ ಕೂಲಿಕಾರರೊಂದಿಗೆ ಈ ಕುರಿತು ಕೇಂದ್ರ ಸರ್ಕಾರ ಚರ್ಚೆ ನಡೆಸಬೇಕು. ಕೇಂದ್ರವು ವಾಗ್ದಾನ ಮಾಡಿದಂತೆ ಏಕಸ್ವಾಮ್ಯ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು. ರೈತರು, ಕೃಷಿ ಕಾರ್ಮಿಕರಿಗೆ ಮಾರಕ ಆಗುವಂತಹ ಕಾಯಿದೆಗಳನ್ನು ಆಡಳಿತಾತ್ಮಕ ಅಧಿಸೂಚನೆಗಳು ಮತ್ತು ಡಿಜಿಟಲ್ ತಂತ್ರಾಂಶಗಳ ನೆಪದಲ್ಲಿ ಕಾನೂನುಬದ್ಧಗೊಳಿಸಿ ಮತ್ತೆ ರೈತರ ಮೇಲೆ ಹೇರಲಾಗುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ನೀಡಿದ ವಾಗ್ದಾನವನ್ನು ಉಲ್ಲಂಘಿಸಿದೆ. ಇದರ ವಿರುದ್ದ ಕಾರ್ಮಿಕ ವರ್ಗವು ಬೀದಿಗಿಳಿದು ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ಹೊನ್ನೂರು ಮುನಿಯಪ್ಪ ಮಾತನಾಡಿ, ಸಮಗ್ರ ಕೃಷಿ ಸಾಲ ಮನ್ನಾ ಘೋಷಣೆ ಮಾಡುವ ಮೂಲಕ ಋಣಭಾರ ಕಡಿಮೆ ಮಾಡುವ ಮೂಲಕ ರೈತರ, ಕಾರ್ಮಿಕರ ಆತ್ಮಹತ್ಯೆಗಳನ್ನು ಕೊನೆಗಾಣಿಸಬೇಕು. ವಿದ್ಯುತ್ ಖಾಸಗೀಕರಣ ಮಸೂದೆ, ಬೀಜ ಮಸೂದೆ ಸೇರಿದಂತೆ ರೈತರಿಗೆ ಮಾರಕವಾಗಿರುವ ಎಲ್ಲಾ ಕಾಯಿದೆಗಳನ್ನು ಕೈಬಿಡಬೇಕು. ದೇಶದಲ್ಲಿ ಕೃಷಿ ಉಳಿಸಲು ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟನ್ನು ಕೊನೆಗಾಣಿಸಬೇಕೆಂದು ಆಗ್ರಹಿಸಿದರು.
ಹೆಗ್ಗೆರೆ ರಂಗಪ್ಪ ಮಾತನಾಡಿ, ಪ್ರತಿಭಟಿಸುವ ಹಕ್ಕು ಸಾಂವಿಧಾನಿಕವಾಗಿದೆ. ಆದರೆ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವ ಹೋರಾಟಗಾರರನ್ನು ತಡೆಯಲು ಯಾವುದೇ ಆಡಳಿತ ಯಂತ್ರ ಬಳಸಬಾರದು. ಜನತೆಯ ಪ್ರಜಾಸತ್ತಾತ್ಮಕ ಚಳವಳಿಗಳ ಮೇಲೆ ನಡೆಸುವ ದಮನಕಾರಿ ನೀತಿಯನ್ನು ಈ ಕೂಡಲೇ ಕೈಬಿಡಬೇಕೆಂದು ಮನವಿ ಮಾಡಿದರು.