ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೊಳಲ್ಕೆರೆ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಭದ್ರಾಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಐದು ಸಾವಿರದ ಮುನ್ನೂರು ಕೋಟಿ ರು. ನೀಡುವುದಾಗಿ ಹೇಳಿದ ಕೇಂದ್ರ ಸರ್ಕಾರ ಜಿಲ್ಲೆಯ ಜನರನ್ನು ವಂಚಿಸಿದೆ. ಒಂದು ವರ್ಷವಾದರೂ ಇನ್ನು ಹಣ ಬಿಡುಗಡೆಗೊಳಿಸಿಲ್ಲ. ಮೂವತ್ತು ವರ್ಷಗಳಿಂದಲೂ ನೀರಾವರಿಗಾಗಿ ಜಿಲ್ಲೆಯ ರೈತರು ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ಬರೀ ಆಶ್ವಾಸನೆ ನೀಡುತ್ತಲೆ ವಂಚಿಸಿಕೊಂಡು ಬರುತ್ತಿವೆ. ಇನ್ನೆರಡು ಮೂರು ದಿನಗಳಲ್ಲಿ ಹಣ ಬಿಡುಗಡೆಗೊಳಿಸಿ ಭದ್ರಾಮೇಲ್ದಂಡೆ ಕಾಮಗಾರಿಗೆ ಚುರುಕಿನ ಚಾಲನೆ ನೀಡದಿದ್ದರೆ ದನ-ಕರುಗಳನ್ನು ತಂದು ಜಿಲ್ಲಾ ಪಂಚಾಯಿತಿಯಲ್ಲಿರುವ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಕಚೇರಿ ಮುಂದೆ ಕಟ್ಟಲಾಗುವುದೆಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ಕಾರ್ಯದರ್ಶಿ ರಾಮರೆಡ್ಡಿ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಸತೀಶ್, ಟಿ.ಎಮ್ಮಿಗನೂರು ಜಯಣ್ಣ, ಅನ್ನಪೂರ್ಣ, ತುಳಜಮ್ಮ, ಚಂದ್ರಮೌಳಿ, ನಿರಂಜನಮೂರ್ತಿ ಇನ್ನು ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.