ಕನ್ನಡಪ್ರಭವಾರ್ತೆ ಚಿತ್ರದುರ್ಗಕೇಂದ್ರ ಜಲಶಕ್ತಿ ಹಾಗೂ ರೇಲ್ವೆ ಇಲಾಖೆ ಸಹಾಯಕ ಸಚಿವ ವಿ. ಸೋಮಣ್ಣ ಗಾಂಧಿ ಜಯಂತಿ ದಿನದಂದು ಚಿತ್ರದುರ್ಗಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೇಲ್ವೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸುತ್ತಿರುವುದು ಕೋಟೆ ನಾಡಿನ ರೈತ ಸಮುದಾಯದಲ್ಲಿ ಅಚ್ಚರಿ ಮೂಡಿಸಿದೆ.2023ರ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ಅನುದಾನ ಘೋಷಿಸಲಾಗಿದ್ದು, ಇದುರೆಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಹಿಂದಿನ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಈ ಬಗ್ಗೆ ಅಂದಿನ ಜಲಸಂಪನ್ಮೂಲ ಸಚಿವ ಶೆಖಾವತ್ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಅದರೂ ಯಾವುದೇ ಫಲವಿಲ್ಲ.
ಮುಂದುವರಿದ ಭಾಗವಾಗಿ ಚಿತ್ರದುರ್ಗ ಕ್ಷೇತ್ರದ ನೂತನ ಸಂಸದ ಗೋವಿಂದ ಕಾರಜೋಳ ಕೇಂದ್ರದ ಹಾಲಿ ಜಲಶಕ್ತಿ ಸಚಿವ ಪಾಟೀಲ್ ಅವರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೂಡ ಕೇಂದ್ರ ಜಲಶಕ್ತಿ ಸಚಿವರ ಭೇಟಿಯಾಗಿದ್ದಾರೆ. ಆದರೆ ಇದುವರೆಗೂ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ.ಕೇಂದ್ರ ಸರ್ಕಾರದ ಜಲಶಕ್ತಿ ರಾಜ್ಯ ಸಚಿವರಾಗಿ ವಿ. ಸೋಮಣ್ಣ ನಿಯೋಜನೆಗೊಂಡಾಗ ಸಹಜವಾಗಿ ಮಧ್ಯ ಕರ್ನಾಟಕದ ಭಾಗದ ರೈತರು ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳ್ಳುತ್ತದೆ, ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ ಎಂದು ಭಾವಿಸಿದ್ದರು. ಅದು ಹುಸಿಯಾಗಿದೆ. ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಕಾಲಹರಣ ಮಾಡುತ್ತಿದೆಯೇ ಎಂಬ ಅನುಮಾನಗಳು ರಾಜ್ಯ ಸರ್ಕಾರಕ್ಕೆ ಕೇಂದ್ರ ಜಲಶಕ್ತಿ ಸಚಿವರು ಬರೆದ ಪತ್ರ ಸಾಬೀತು ಪಡಿಸಿದೆ.ಸಾಲದೆಂಬಂತೆ ಸಂಸದ ಗೋವಿಂದ ಕಾರಜೋಳ ಅವರಿಗೆ ವಿ. ಸೋಮಣ್ಣ ಬರೆದಿರುವ ಪತ್ರ ಕೂಡಾ, ಕೇಂದ್ರ ಸರ್ಕಾರದ ನಿಲುವು ಪ್ರತಿಪಾದಿಸಿದೆ. ಭದ್ರಾ ಮೇಲ್ದಂಡೆಗೆ ಇಲ್ಲಿಯವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಅನುದಾನದ ಆಧಾರದ ಮೇಲೆ ಕೇಂದ್ರ ನೆರವು ನೀಡಲಿದೆ. ಈ ಸಂಬಂಧ ಲೆಕ್ಕ ಪತ್ರ ಸಲ್ಲಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಕೇಂದ್ರ ಸರ್ಕಾರದಲ್ಲಿ ರೈಲು ಮತ್ತು ಜಲಶಕ್ತಿ ಎರಡೂ ಖಾತೆ ಹೊಂದಿರುವ ಸೋಮಣ್ಣ ಬುಧವಾರ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಭೂ ಸ್ವಾದೀನ ವಿಷಯ ಚರ್ಚಿಸುತ್ತಿದ್ದಾರೆ. ರೈಲ್ವೆ ಮಾರ್ಗದ ರೀತಿಯೆ ಭದ್ರಾ ಮೇಲ್ದಂಡೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿದೆ.ಭದ್ರಾ ಮೇಲ್ದಂಡೆ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಬಯಲು ಸೀಮೆಗೆ ನೀರುಣಿಸುವ ಮಹತ್ವದ ಯೋಜನೆಯಾಗಿದೆ. ಸೋಮಣ್ಣ ಪ್ರತಿನಿಧಿಸುವ ತುಮಕೂರು ಜಿಲ್ಲೆಗೆ ಭದ್ರಾ ಹರಿಯಲಿದ್ದಾಳೆ. ತುಮಕೂರು ಬ್ರಾಂಚ್ ಕಾಲುವೆ ಮೂಲಕ 85 ಸಾವಿರ ಹೆಕ್ಟೇರು ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. ಇದರಲ್ಲಿ 161 ಕೆರೆಗಳಿಗೆ ನೀರು ತುಂಬಿಸುವುದು ಸೇರಿದೆ.
ವಾಸ್ತವಾಂಶ ಹೀಗಿರುವಾಗ ಪ್ರಗತಿ ಪರಿಶೀಲನೆಗೆ ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಸಚಿವ ವಿ. ಸೋಮಣ್ಣ, ಕೇವಲ ರೈಲ್ವೆ ಜಾಡು ಹಿಡಿದು ಬಂದಿದ್ದಾರೆ. ಭದ್ರಾ ಕಾಲುವೆಗಳ ಗಮನಿಸುವ ಉಸಾಬರಿಗೆ ಹೋಗಿಲ್ಲ. ಸಚಿವ ಸೋಮಣ್ಣ ಅವರ ಈ ನಿಲುವು ಭದ್ರಾ ಮೇಲ್ದಂಡೆ ಬಗ್ಗೆ ಕೇಂದ್ರ ಸರ್ಕಾರ ತಳೆದಿರುವ ಉದಾಸೀನ ಮನೋಭಾವದ ಸಾಕ್ಷಾತ್ ದರ್ಶನದಂತೆ ಬಯಲು ಸೀಮೆ ಜನಕ್ಕೆ ಗೋಚರಿಸಿದೆ.ವಿ.ಸೋಮಣ್ಣ ಕೇಂದ್ರ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿ ಅಧಿಕಾರಿಗಳ ಜತೆ ಪ್ರಗತಿ ಪರಶೀಲನೆ ನಡೆಸುತ್ತಿದ್ದಾರೆ. ಕೇವಲ ರೇಲ್ವೆ ಇಲಾಖೆಯ ಪರಿಶೀಲನೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ. ಭದ್ರಾ ಮೇಲ್ದಂಡೆಯಂತಹ ನೀರಾವರಿ ಕನಸು ಸಾಕಾರಗೊಳಿಸುವ ನಿಟ್ಟಿನ ಪ್ರಯತ್ನಗಳಿಗೆ ಸೋಮಣ್ಣ ದನಿಯಾಗಬೇಕಿತ್ತು. ಸೋಮಣ್ಣ ಅವರ ಈ ನಡೆಯನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಖಂಡಿಸುತ್ತದೆ. ಭದ್ರಾ ಮೇಲ್ದಂಡೆಗೆ ಅನುದಾನ ನೀಡುವ ಕುರಿತು ಸಚಿವ ಸೋಮಣ್ಣ ಹುಸಿ ಭರವಸೆ ನೀಡದೆ ಸ್ಪಷ್ಟತೆ ಪ್ರದರ್ಶಿಸಲಿ.ಬಿ.ಎ.ಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ