ಚಿಕ್ಕಪ್ಪನಹಳ್ಳಿ ಷಣ್ಮುಖ
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ ಪ್ರಮಾಣದ ಏತ ನೀರಾವರಿ(ಲಿಫ್ಟ್) ಯೋಜನೆಯಾಗಿದ್ದು, ವಿದ್ಯುತ್ ಶಕ್ತಿ ಅವಲಂಭಿಸಿದೆ. ತುಂಗಾ ಹಾಗೂ ಭದ್ರಾದಿಂದ ಒಟ್ಟು 29.90 ಟಿಎಂಸಿ ನೀರನ್ನು ಲಿಫ್ಟ್ ಮಾಡಿ 2,25,515 ಹೆಕ್ಟೇರ್ ಪ್ರದೇಶಕ್ಕೆ ಮೈಕ್ರೋ ಇರಿಗೇಷನ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ತುಂಗಾದಿಂದ ಎರಡು ಕಡೆ ಹಾಗೂ ಭದ್ರಾದಿಂದ ಎರಡು ಕಡೆ ನೀರನ್ನ ಲಿಫ್ಟ್ ಮಾಡಬೇಕಿದೆ. ತುಂಗಾ ಜಲಾಶಯದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದರಿಂದ ಪಂಪ್ ಹೌಸ್ ನಿರ್ಮಾಣ, ವಿದ್ಯುತ್ ಸ್ಥಾವರಗಳ ಕಾಮಗಾರಿ ಪ್ರಗತಿಯಲ್ಲಿದೆ.
ಆದರೆ ಭದ್ರಾದಿಂದ ಎರಡು ಕಡೆ ಸದ್ಯ ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಪ್ಯಾಕೇಜ್ -2 ಪಂಪ್ ಹೌಸ್-1 ಶಾಂತಿಪುರ ಹಾಗೂ ಪಂಪ್ ಹೌಸ್ -2 ಬೆಟ್ಟದಾವರೆಕೆರೆ ಬಳಿ ನೀರನ್ನು ಲಿಫ್ಟ್ ಮಾಡಿ ಕಾಲುವೆಗೆ ಹಾಯಿಸಲಾಗುತ್ತಿದೆ. ಈ ಪಂಪ್ ಹೌಸ್‌ಗಳಿಗೆ ಪೂರೈಕೆ ಮಾಡಲಾಗುತ್ತಿರುವ ವಿದ್ಯುತ್ ಸ್ಥಾವರಗಳ ಬಿಲ್ ಸಕಾಲದಲ್ಲಿ ಪಾವತಿ ಮಾಡಲಾಗುತ್ತಿಲ್ಲವೆಂಬುದು ಮೆಸ್ಕಾಂ ದೂರು. ಜುಲೈ 24 ರವರೆಗೆ ಶಾಂತಿಪುರ ಪಂಪ್ ಹೌಸ್ ದು 865.14 ಕೋಟಿ, ಬೆಟ್ಟದಾವರೆಕೆರೆ ದು 852.32 ಕೋಟಿ ರು ಸೇರಿದಂತೆ ಒಟ್ಟು 17.17 ಕೋಟಿ ರು ಬಾಕಿ ಇದೆ. ರೈತರು ಹಾಗೂ ಸಾರ್ವಜನಿಕರ ಹಿತದ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿಲ್ಲವೆಂದು ಮೆಸ್ಕಾಂ ತನ್ನ ಸೂಚನಾ ಪತ್ರದಲ್ಲಿ ತಿಳಿಸಿದೆ. ಮೆಸ್ಕಾಂಗೆ ವಿದ್ಯುತ್ ಖರೀದಿ, ನಿರ್ವಹಣೆ, ಆಡಳಿತಾತ್ಮಕ ಹಾಗೂ ಸಿಬ್ಬಂದಿ ವೆಚ್ಚ ಸೇರಿದಂತೆ ಹಲವಾರು ಬಾಬತ್ತುಗಳಿದ್ದು ಆರ್ಥಿಕ ಸಂಪನ್ಮೂಲಗಳ ಕೊರತೆ ಇದೆ. ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ ವಿದ್ಯುತ್ ಬಿಲ್ ಅಗಾಧ ಪ್ರಮಾಣದಲ್ಲಿ ಬಾಕಿ ಇದೆ. ಸರ್ಕಾರ ಕೂಡಾ ವಸೂಲಾತಿಗೆ ಬಿಗಿ ನಿರ್ದೇಶನ ನೀಡಿದೆ. ಹಾಗಾಗಿ ಏತ ನೀರಾವರಿ ಯೋಜನೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅವಕಾಶಗಳು ಎದುರಾಗದಂತೆ ಬಾಕಿ ಮೊತ್ತ ಪಾವತಿಸುವಂತೆ ಮೆಸ್ಕಾಂ ಭದ್ರಾ ಮೇಲ್ದಂಡೆ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಖಡಕ್ ಸೂಚನೆ ನೀಡಿದೆ. ಒಂದೆಡೆ 2500 ಕೋಟಿ ರು ನಷ್ಟು ಗುತ್ತಿಗೆದಾರರ ಬಿಲ್ ಹಾಗೂ ಮತ್ತೊಂದೆಡೆ 17.77 ಕೋಟಿಯಷ್ಟು ವಿದ್ಯುತ್ ಬಿಲ್ ಬಾಕಿಯಿಂದಾಗಿ ಯೋಜನೆ ಮೇಲೆ ಕಾರ್ಮೋಡ ಆವರಿಸಿದ್ದು, ಭವಿಷ್ಯದಲ್ಲಿ ಹೇಗೋ ಎನ್ನುವ ಆತಂಕಗಳು ಮೂಡಿವೆ.