ಚಿತ್ರದುರ್ಗ: ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಮಧ್ಯಕರ್ನಾಟಕವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉಪೇಕ್ಷೆ ಮಾಡಿರುವುದನ್ನು ರೈತ ಸಂಘ ಗಂಭೀರವಾಗಿ ಪರಿಣಿಸಿದೆ. ಭದ್ರಾ ಮೇಲ್ದಂಡೆ ಕಾಮಗಾರಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದೆಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.ಇಲ್ಲಿನ ಪತ್ರಕರ್ತರ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಆಯೋಜಿಸಿದ್ದ ನುಲೇನೂರು ಶಂಕ್ರಣ್ಣ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಈ ಭಾಗದ ಜನ ಮಂಡ್ಯ, ಮೈಸೂರು ರೈತರ ಕೂಗಿಗೆ ದನಿಯಾಗಿದ್ದಾರೆ. ಆದರೆ ಆ ಭಾಗದಿಂದ ಮಧ್ಯಕರ್ನಾಟಕದ ನೀರಾವರಿಗಳಿಗೆ ಬೆಂಬಲ ಲಭ್ಯವಾಗುತ್ತಿಲ್ಲ. ಹಾಗಾಗಿ ರೈತ ಸಂಘದಿಂದ ಭದ್ರಾ ಮೇಲ್ದಂಡೆ ಬೆಂಬಲಿಸಿ ಹೋರಾಟ ನಡೆಸಲಾಗುವುದು ಎಂದರು.ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಸಿಯಲು ಅವಕಾಶ ಕೊಡುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಸಂದರ್ಭ ಸೃಷ್ಟಿಯಾಗದಂತೆ ಎಚ್ಚರವಹಿಸಲಾಗುವದು. ಮುಂಬವರು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕನಿಷ್ಠ ಒಂದು ಜಿಪಂ ಹಾಗೂ ಒಂದು ತಾಪಂ ಕ್ಷೇತ್ರ ಗೆಲ್ಲುವು ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ಹಳ್ಳಿಯಲ್ಲಿಯೂ ಕಾರ್ಯಕರ್ತರ ತಂಡ ರಚಿಸಲಾಗುವುದು ಎಂದು ಹೇಳಿದರು.ಟಿ.ನುಲೇನೂರು ಶಂಕರಪ್ಪನವರದು ಅಪರೂಪದ ವ್ಯಕ್ತಿತ್ವ. ಎಲ್ಲಿಯೇ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆಯಾಗಲಿ ಅಲ್ಲಿ ಹೋರಾಟಕ್ಕೆ ಮುಂದಿರುತ್ತಿದ್ದರು. ಹಸಿರು ಟವಲ್‍ಗೆ ಧಕ್ಕೆಯಾಗದಂತೆ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಈಗ ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಂಡು ಅನೇಕರು ಮರಳು ದಂಧೆ ಸೇರಿದಂತೆ ಅನೇಕ ಅಕ್ರಮಗಳಲ್ಲಿ ತೊಡಗಿರುವುದು ನಮ್ಮ ಗಮನಕ್ಕೆ ಬಂದಿದೆ. ಜಾತಿ ಧರ್ಮ ಎತ್ತಿಕಟ್ಟಿ ಸಮಾಜ ಹೊಡೆಯುವ ಇಂದಿನ ಪರಿಸ್ಥಿತಿಯಲ್ಲಿ ರೈತರ ಮೇಲೆ ಮಹತ್ತರ ಜವಾಬ್ದಾರಿಯಿದೆ ಎಂದರು. ಶಂಕರಪ್ಪನವರಂತ ನೂರಾರು ರೈತರನ್ನು ಹುಟ್ಟುಹಾಕಿ ಚಳುವಳಿಗೆ ಶಕ್ತಿ ತುಂಬಬೇಕಿದೆ. ಹಸಿರು, ನೀಲಿ, ಕೆಂಪು ಟವಲ್ ಜೊತೆಗೂಡಿ ಕೆಲಸ ಮಾಡುತ್ತಿದೆ. ರೈತ ಚಳವಳಿಗೆ ಭೌತಿಕ ಶಕ್ತಿ ತುಂಬಬೇಕಿದೆ. ಚಳವಳಿಯ ಮೇಲೂ ಧಾರ್ಮಿಕ ಭಾವನೆ ಬೀರುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು. ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಎಲ್ಲರೊಡನೆಯೂ ಉತ್ತಮ ಒಡನಾಟವಿಟ್ಟುಕೊಂಡಿದ್ದ ಟಿ.ನುಲೇನೂರು ಶಂಕರಪ್ಪ ರೈತ ಪರ ಚಳುವಳಿ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆಗಾಗಿ ನಡೆದ ಎಲ್ಲಾ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿರುತ್ತಿದ್ದ ಶಂಕರಪ್ಪನವರಿಗೆ ಜಿಲ್ಲೆಗೆ ನೀರು ಹರಿಸಬೇಕೆಂಬ ಆಸೆಯಿತ್ತು. ಆದರೆ ವಿಧಿ ಇಷ್ಟು ಬೇಗೆ ಸೆಳೆದುಕೊಳ್ಳುತ್ತದೆಂದು ನಾವುಗಳ್ಯಾರು ಊಹಿಸಿರಲಿಲ್ಲ ಎಂದರು. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಹೋರಾಟದಲ್ಲಿ ನುಲೇನೂರು ಶಂಕ್ರಪ್ಪ ಅವರದು ಅವಿರತ ಪ್ರಯತ್ನ. ಸಮಿತಿ ಅಧ್ಯಕ್ಷರಾಗಿ ಹೋರಾಟ ಮುನ್ನಡೆಸುವಾಗಲೇ ನಮ್ಮನ್ನು ಅಗಲಿದ್ದು ನೋವಿನ ಸಂಗತಿ ಎಂದರು.