ಬಡವರಿಗೆ ಶ್ಯೂರಿಟಿ ಕೇಳ್ತೀರಾ,ಶ್ರೀಮಂತರಿಗಾದ್ರೆ ಕೋಟಿಗಟ್ಲೆ ಕೊಡ್ತೀರಾ

KannadaprabhaNewsNetwork | Published : Nov 22, 2024 1:19 AM

ಸಾರಾಂಶ

ಚಿತ್ರದುರ್ಗ: ಬಡವರಿಗೆ ಸಾಲ ಕೊಡಲು ಶ್ಯೂರಿಟಿ ಕೇಳ್ತೀರಾ, ಶ್ರೀಮಂತರಿಗಾದ್ರೆ ಕೊಟ್ಟಿಗಟ್ಟಲೆ ಸಾಲ ಹಾಗೆ ಕೊಡ್ತೀರಾ. ಹೀಗೆಂದು ಬ್ಯಾಂಕ್ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡವರು ಸಂಸದ ಗೋವಿಂದ ಕಾರಜೋಳ.

ಚಿತ್ರದುರ್ಗ: ಬಡವರಿಗೆ ಸಾಲ ಕೊಡಲು ಶ್ಯೂರಿಟಿ ಕೇಳ್ತೀರಾ, ಶ್ರೀಮಂತರಿಗಾದ್ರೆ ಕೊಟ್ಟಿಗಟ್ಟಲೆ ಸಾಲ ಹಾಗೆ ಕೊಡ್ತೀರಾ. ಹೀಗೆಂದು ಬ್ಯಾಂಕ್ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡವರು ಸಂಸದ ಗೋವಿಂದ ಕಾರಜೋಳ. ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಜರುಗಿದ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.

ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಶಿಕ್ಷಣ, ಮನೆ ನಿರ್ಮಾಣ ಸೇರಿದಂತೆ ಸರ್ಕಾರಿ ಪ್ರಾಯೋಜಿತ ಯಾವುದೇ ಸ್ಕೀಂಗಳಲ್ಲಿ ನಿಗದಿಗೊಳಿಸಿದ ಗುರಿಗಳನ್ನು ಬ್ಯಾಂಕುಗಳು ಸಾಧಿಸಿಲ್ಲ. ಬಡವರ ಕೆಲಸ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಯಾಕಿಷ್ಟು ತಾತ್ಸರ ? ಎಂದು ಪ್ರಶ್ನಿಸಿದರು.

ರೈತರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಕಾಳಜಿ ಇಲ್ಲ, ನಬಾರ್ಡ್‍ನಿಂದ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಹೊರತುಪಡಿಸಿ, ಕುರಿ ಸಾಕಣಿಕೆ ಪ್ರಧಾನ ವೃತ್ತಿಯಾಗಿದೆ. ಆದರೆ ಬ್ಯಾಂಕುಗಳು ಇದುವರೆಗೂ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹವಾಮಾನ ವೈಪರಿತ್ಯ ಆಧಾರಿತ ಬೆಳೆ ವಿಮೆ ಪಾವತಿಗೆ ನ.30ರ ಗಡುವು ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ 2018-19ನೇ ಸಾಲಿನಿಂದ 2023-24ನೇ ಸಾಲಿನ ವರೆಗೆ ಒಟ್ಟು 514 ರೈತರಿಗೆ ತೋಟಗಾರಿಕೆ ಬೆಳೆ ವಿಮೆ ಪಾವತಿ ಬಾಕಿಯಿದೆ. ನ.30ರೊಳಗೆ ರೈತರ ಖಾತೆಗೆ ಜಮೆ ಮಾದದಿದ್ದರೆ ಹಣ ವಾಪಸ್ಸು ಹೊಗಲಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಮಾ ಕಂಪನಿಯಿಂದ ರೈತರಿಗೆ ಪಾವತಿಸಲು ಹಣ ಬಿಡುಗಡೆ ಮಾಡಲಾಗಿದೆ. ಆದರೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಕೃಷಿ ಕ್ಷೇತ್ರಾಧಿಕಾರಿಗಳ ಲಾಗಿನ್‍ನಲ್ಲಿ ಹಣವಿದ್ದು, ಬ್ಯಾಂಕ್ ಅಧಿಕಾರಿಗಳಿಂದಲೇ ವಿಳಂಬವಾಗಿದೆ. ತೋಟಗಾರಿಕೆ ಇಲಾಖೆಯಿಂದ ಎಲ್ಲ ರೈತರ ಮಾಹಿತಿ ನೀಡಿ, ಬ್ಯಾಂಕುಗಳೊಂದಿಗೆ ಸಮನ್ವಯ ಕೈಗೊಳ್ಳಲು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕುಮಾರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಆರ್.ಬಿ.ಐ. ಪ್ರಬಂಧಕ ಅರುಣ್ ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share this article