ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ರೈತ ಸಂಘದ ಕಚೇರಿಯಲ್ಲಿ ಶುಕ್ರವಾರ ಸಂಘದ ಮಾಸಿಕ ಸಭೆಯನ್ನು ಕರೆಯಲಾಗಿತ್ತು.ಸಭೆಯನ್ನು ಉದ್ದೇಶಿಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಭದ್ರಾ ಮೇಲ್ದಂಡೆ ಕಾಮಗಾರಿಯು ಸಂಪೂರ್ಣ ಸ್ಥಗಿತಗೊಂಡಿದೆ. ಸರ್ಕಾರದಿಂದ ಹಿಂದೆ ಮಾಡಿರುವ ಕಾಮಗಾರಿಗೆ ಹಣ ಪಾವತಿ ಮಾಡದೇ ಇರುವುದರಿಂದ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿಲ್ಲ. ಬಜೆಟ್‌ನಲ್ಲಿ ಬಿಡುಗಡೆಯಾದ ಹಣವನ್ನು ಸರ್ಕಾರ ಎತ್ತಿನಹೊಳೆ ಯೋಜನೆಗೆ ವರ್ಗಾಯಿಸಿದೆ ಎಂದು ಗುತ್ತಿಗೆದಾರರೊಬ್ಬರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರವು ಕೂಡ 5,300 ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ. ಹೀಗೆ ಆದರೆ ಮುಂದೆ ನಮ್ಮ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಆಗುವುದಿಲ್ಲ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಜನವರಿ 1 ರಿಂದ 6 ತಾಲೂಕಲ್ಲಿ ಧರಣಿ ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸರ್ಕಾರಕ್ಕೆ ಒತ್ತಡ ತರಬೇಕಾಗಿದೆ.ಹೊಸದುರ್ಗ ತಾಲೂಕು ಶಾಸಕ ಗೋವಿಂದಪ್ಪನವರು ಪತ್ರಿಕಾ ಹೇಳಿಕೆ ನೀಡಿರುವ ಪ್ರಕಾರ, ಡಿಸೆಂಬರ್ ಅಂತ್ಯದೊಳಗಾಗಿ ಕ್ರಸ್ಟ್ ಗೇಟ್ ಅಳವಡಿಸಲು ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎನ್ನಲಾಗಿದೆ. ಈ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮಾಡಲು ಹಿರಿಯೂರು ತಾಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ರೈತರು ಬಿಡುವುದಿಲ್ಲ. ಶಾಸಕರು ಇದಕ್ಕೆ ಖರ್ಚು ಮಾಡುವ 224 ಕೋಟಿ ಹಣವನ್ನು ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಬೇಕು. ಮೆಕ್ಕೆಜೋಳ ಬೆಂಬಲ ಬೆಲೆ ನೀಡಲು ಗುಬ್ಬಿ ತಾಲೂಕಿನ ಕಾರ್ಖಾನೆಗೆ ರೈತರೇ ಸಾಗಿಸಬೇಕು. ರೈತರು ಬೆಳೆ ಸಾಗಿಸಲು ಸಾರಿಗೆ ವೆಚ್ಚ ಸುಮಾರು 10 ರಿಂದ 15 ಸಾವಿರ ಖರ್ಚಾಗುತ್ತದೆ. ಹೀಗೆ ಮಾಡಿದರೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದರು ರೈತರಿಗೆ ಅನುಕೂಲ ಆಗುವುದಿಲ್ಲ. ಬರುವ 10ನೇ ತಾರೀಕು ಬೆಳೆ ವಿಮೆ ಪರಿಹಾರ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಎಲ್ಲಾ ರೈತ ಬಾಂಧವರು ಈ ಧರಣಿಯಲ್ಲಿ ಭಾಗವಹಿಸಬೇಕು ಎಂದರು.
ತಾಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಮಾತನಾಡಿ, ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಇದ್ದರೂ ಇಲ್ಲದಂತಾಗಿದೆ. ರೈತರಿಗಾಗಿ ಸುಮಾರು ನೂರಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಜಾಗ ಇದ್ದು ಅನೇಕ ಬಿಲ್ಡಿಂಗ್ ಗಳು, ಮಾರಾಟದ ಮಳಿಗೆಗಳು ಇದ್ದು ರೈತರಿಗೆ ಅನೇಕ ಸೌಲಭ್ಯಗಳು ಇದ್ದರೂ ಸಹ ನಗರದ ಸುತ್ತಮುತ್ತ ಖಾಸಗಿ ಮಾರುಕಟ್ಟೆಗಳು ಪ್ರಾರಂಭವಾಗುತ್ತಿವೆ. ಅಡಕೆ ಮಾರುಕಟ್ಟೆ, ಟೊಮೆಟೊ, ಹಣ್ಣು ಮಾರುಕಟ್ಟೆ, ಹೂವಿನ ಮಾರುಕಟ್ಟೆ ಹಾಗೂ ದವಸ ಧಾನ್ಯಗಳ ಅಂಗಡಿಗಳಲ್ಲಿ ಮಾರಾಟ ಮಾಡುವುದನ್ನು ಗಮನಿಸಿದರೆ ಸರ್ಕಾರಿ ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಕೂಡಲೇ ಸರ್ಕಾರ ಇಂಥ ಅಧಿಕಾರಿಗಳನ್ನು ಅಮಾನತು ಮಾಡಿ ರೈತರಿಗಾಗಿ ಇರುವ ಎಪಿಎಂಸಿ ಮಾರುಕಟ್ಟೆಯನ್ನು ಸದುದ್ದೇಶಕ್ಕೆ ಬಳಸಿಕೊಳ್ಳಲು ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಈ ವೇಳೆ ರಂಗಸ್ವಾಮಿ, ಸಣ್ಣ ತಿಮ್ಮಣ್ಣ, ತಿಮ್ಮಾರೆಡ್ಡಿ, ಬಿ.ಆರ್.ರಂಗಸ್ವಾಮಿ, ವೆಂಕಟೇಶ್, ತಿಮ್ಮಯ್ಯ, ಜಯಣ್ಣ, ಜಗದೀಶ್, ಶಿವಣ್ಣ, ನಾರಣಪ್ಪ, ವಿರುಪಾಕ್ಷ, ಈರಣ್ಣ, ಬಾಲಕೃಷ್ಣ, ರಾಮಕೃಷ್ಣ,ದೊರೆಸ್ವಾಮಿ ಮುಂತಾದವರು ಹಾಜರಿದ್ದರು.