ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಕ್ಕೆ ತಾಕೀತು

KannadaprabhaNewsNetwork |  
Published : Aug 23, 2026, 01:30 AM IST
22ಎಂಡಿಜಿ1, ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಕ್ಷರದಾಸೋಹ ಯೋಜನೆಯಡಿಯಲ್ಲಿ ತಯಾರಿಸಿದ ಉಪ್ಪಿಟ್ಟಿನಲ್ಲಿ ಹಲ್ಲಿ ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.  | Kannada Prabha

ಸಾರಾಂಶ

Bhadra upper embankment work to be completed

ಬೇಸಿಗೆಗೆ 35 ಟಿಎಂಸಿ ಡ್ಯಾಂನಲ್ಲಿ ಮೀಸಲಿಗೆ ಆಗ್ರಹ । ಜಿಲ್ಲಾ ರೈತರ ಒಕ್ಕೂಟ, ಸಂಘಟನೆಗಳ ಪ್ರತಿಭಟನೆ ।

ಕನ್ನಡಪ್ರಭ ವಾರ್ತೆ, ದಾವಣಗೆರೆ

ಭದ್ರಾ ಡ್ಯಾಂನಿಂದ ಬೇಸಿಗೆ ಹಂಗಾಮಿಗೆ 120 ದಿನ ಸತತವಾಗಿ ನೀರು ಹರಿಸಲು 35 ಟಿಎಂಸಿ ನೀರು ಸಂಗ್ರಹ ಮೀಸಲಿಡುವಂತೆ, ಭದ್ರಾ ಮೇಲ್ದಂಡೆ ಯೋಜನೆಯ ಷರತ್ತಿನಂತೆ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.40 ಟಿಎಂಸಿ ನೀರು ಎತ್ತಿ ಹರಿಸುವ ಕಾಮಗಾರಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟ, ರೈತ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಹರಪನಹಳ್ಳಿ ಭಾಗದ ಮುಖಂಡ, ಜಿಪಂ ಮಾಜಿ ಸದಸ್ಯ ಪಿ.ಮಹಾಬಲೇಶಗೌಡ, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ತಾಪಂ ಮಾಜಿ ಉಪಾಧ್ಯಕ್ಷ ಬೇತೂರು ಸಂಗಣ್ಣ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬೇತೂರು ಬಿ.ಪ್ರಭು ಇತರರ ನೇತೃತ್ವದಲ್ಲಿ ಸಭೆ ನಡೆಸಿ, ನಂತರ ಶ್ರೀ ಜಯದೇವ ವೃತ್ತಕ್ಕೆ ಧಾವಿಸಿದ ಅಚ್ಚುಕಟ್ಟು ರೈತರು ಸಾಂಕೇತಿಕವಾಗಿ ಪ್ರತಿಭಟಿಸಿ, ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಪಿ.ಮಹಾಬಲೇಶ್ವರ ಗೌಡ, ಭದ್ರಾ ಡ್ಯಾಂನಿಂದ ಮಳೆಗಾಲದ ಬೆಳೆಗೆ ನೀರು ಹರಿಸುವಂತೆ ಕೆಲವರು ಹೋರಾಟ ನಡೆಸಿದ್ದಾರೆ. ಆದರೆ, ಈಗ ನಾಲೆಗೆ ನೀರು ಹರಿಸಿದರೆ, ಮುಂದೆ ಬೇಸಿಗೆಯಲ್ಲಿ ಅಚ್ಚುಕಟ್ಟು ರೈತರು, ತೋಟದ ಬೆಳೆಗಾರರಿಗೂ ಸಮಸ್ಯೆ ತಪ್ಪಿದ್ದಲ್ಲ. ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಯಾವುದೇ ಕಾರಣಕ್ಕೂ ಡ್ಯಾಂ ನೀರು ನಂಬಿ, ಬತ್ತ, ಕಬ್ಬು ಇತರೆ ನೀರು ಹೆಚ್ಚು ಕೇಳುವ ಬೆಳೆ ಬೆಳೆಯದಂತೆ ಸ್ವತಃ ಮುಖ್ಯಮಂತ್ರಿಗಳೇ ಕರೆ ನೀಡಿದ್ದನ್ನೂ ನಾವ್ಯಾರೂ ಮರೆಯಬಾರದು. ಮುಂದಿನ ವರ್ಷದಲ್ಲೂ ಮಳೆ ಕೈಕೊಟ್ಟರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಬೇಸಿಗೆ ಹಂಗಾಮಿನಲ್ಲಿ 120 ದಿನ ಸತತವಾಗ ನಾಲೆಗೆ ನೀರು ಹರಿಸಲು ಭದ್ರಾ ಅಣೆಕಟ್ಟೆಯಲ್ಲಿ ಬಳಸಬಹುದಾದ 35 ಟಿಎಂಸಿ ನೀರಿನ ಸಂಗ್ರಹ ಮೀಸಲಿಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಷರತ್ತಿನಂತೆ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.40 ಟಿಎಂಸಿ ನೀರು ಎತ್ತಿ ಹರಿಸುವ ಕಾಮಗಾರಿಗೆ ಅಗತ್ಯವಾದ 30 ಕೋಟಿ ರು. ಅನುದಾನ ಬಿಡುಗಡೆ ಮಾಡಿ, ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು. ಭದ್ರಾ ಕಾಲುವೆಯುದ್ದಕ್ಕೂ ಬೆಳೆದಿರುವ ಗಿಡ ಗಂಟಿಗಳನ್ನು ತೆಗೆಸಿ, ಹೂಳು ತೆಗೆದು ಸ್ವಚ್ಛ ಮಾಡಿ, ಅಚ್ಚುಕಟ್ಟು ಕೊನೆ ಭಾಗಕ್ಕೂ ಸಮರ್ಪಕವಾಗಿ ನೀರು ತಲುಪುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಭದ್ರಾ ಡ್ಯಾಂಗೆ ಶನಿವಾರ ಒಳಹರಿವು ಪ್ರಮಾಣ 4510 ಕ್ಯೂಸೆಕ್ ಇದ್ದು, ನೀರಿನ ಮಟ್ಟ 174 ಅಡಿ 11 ಇಂಚು ಇದೆ. ಒಟ್ಟು ನೀರಿನ ಸಂಗ್ರಹ 58.28 ಟಿಎಂಸಿ ಇದೆ. ಇದರಲ್ಲಿ ಡೆಡ್ ಸ್ಟೋರೇಜ್ 13.8 ಟಿಎಂಸಿ, ಕುಡಿಯುವ ನೀರಿಗೆ 8.5 ಟಿಎಂಸಿ, ಸೋರಿಕೆ ಸೇರಿ ಅವಿಯಾಗುವ 6 ಟಿಎಂಸಿ, ಈ ವರ್ಷ ಎಲ್‌ನೀನೋ ಎಫೆಕ್ಟ್ ನಿಂದಾಗಿ 2 ಟಿಎಂಸಿ ನೀರನ್ನು ಹೆಚ್ಚುವರಿ ಕುಡಿಯುವ ನೀರಿಗೆ ಮೀಸಲಿಡುವಂತೆ ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳ ಜಲಾಶಯಗಳ ಪ್ರಾಧಿಕಾರಕ್ಕೂ ಪತ್ರ ಬರೆದು ಆದೇಶಿಸಿದೆ. ಹೀಗಾಗಿ 27.98 ಟಿಎಂಸಿ ನೀರು ಮಾತ್ರ ಬಳಕೆಗೆ ಉಳಿಯುತ್ತದೆ ಎಂದರು.

ಭದ್ರಾ ಅಚ್ಚುಕಟ್ಟಿಗೆ 120 ದಿನ ಸತತ ನೀರು ಹರಿಸಲು ಮಳೆಗಾಲದ ಹಂಗಾಮಿಗೆ 32 ಟಿಎಂಸಿ, ಬೇಸಿಗೆ ಹಂಗಾಮಿಗೆ 35 ಟಿಎಂಸಿ ನೀರು ಸಂಗ್ರಹವಿರಬೇಕು. ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಹಂಗಾಮಿನಲ್ಲಿ 1.60 ಲಕ್ಷ ಎಕರೆ ಬತ್ತ ನಾಟಿಯಾಗುತ್ತದೆ. ಈಗಾಗಲೇ 16 ಸಾವಿರ ಎಕರೆಯಲ್ಲಿ ಬತ್ತದ ಬೀಜ ಚೆಲ್ಲಿ ನಾಟಿಗೆ ಸಿದ್ಧತೆ ಮಾಡಲಾಗಿದೆ. 14 ಸಾವಿರ ಎಕರೆಯಲ್ಲಿ ಬತ್ತದ ಬೀಜ ಬಿತ್ತಲಾಗಿದೆ. ಸುಮಾರು ಶೇ.18.75ರಷ್ಟು ಬತ್ತದ ನಾಟಿಗೆ ಸಿದ್ಧತೆಯಾಗಿದೆ. ಡ್ಯಾಂ ನೀರು ಬಂದ ನಂತರ ಶೇ.50 ರೈತರು ಬೀಜ ಚೆಲ್ಲುವವರಿದ್ದಾರೆ. ಇವರೆಲ್ಲರಿಗೂ ಬತ್ತದ ಬೆಳೆ ಕೊಯ್ಲು ಆಗೋವರೆಗೆ ನೀರು ಕೊಡಬೇಕಾಗುತ್ತದೆ. ಅಂದ್ರೆ ಜನವರಿ ಅಂತ್ಯದವರೆಗೆ ನೀರು ಕೊಡಬೇಕು. ಆಗ ಮುಂದಿನ ಬೇಸಿಗೆ ಹಂಗಾಮಿನಲ್ಲಿ ನೀರು ಇಲ್ಲದಂತಾಗಲಿದೆ ಎಂದು ಅವರು ಎಚ್ಚರಿಸಿದರು. ರೈತ ಮುಖಂಡರಾದ ಬಲ್ಲೂರು ರವಿಕುಮಾರ, ಮಳಲ್ಕೆರೆ ಮುರಿಗೇಶ, ಬೇತೂರು ಗ್ರಾಪಂ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ, ಗೋಪನಾಳ್ ಎಸ್.ಆರ್. ರಾಜೇಂದ್ರ, ಗೋಣಿವಾಡ ಎನ್.ಎಂ. ಮಂಜುನಾಥ, ಕೆ.ಆರ್.ಶಿವಕುಮಾರ, ಶ್ಯಾಗಲೆ ತಿಪ್ಪೇಸ್ವಾಮಿ, ಕಂದಗಲ್ಲು ರೇವಣ್ಣ, ಎಸ್.ಆರ್.ರಾಜೇಶ್, ಪರಮೇಶ್, ಕುಕ್ಕುವಾಡ ಡಿ.ಬಿ.ಶಂಕರ, ಕೆ.ಸಿ.ಶಿವಕುಮಾರ, ಡಿ.ಸಿ.ದಿನೇಶ, ವಡ್ಡಿನಹಳ್ಳಿ ಲಿಂಗರಾಜ, ನಾಗರಾಜ, ಗೋಣಿವಾಡ ಮಂಜುನಾಥ, ಶಿವಕುಮಾರ ಮುಂತಾದವರು ಇದ್ದರು.

.......................ಕೋಟ್‌...ಭದ್ರಾ ಡ್ಯಾಂನಲ್ಲಿ ಈಗ ನೀರಿನ ಸಂಗ್ರಹ ಉಳಿಸಿಕೊಂಡು, ಮುಂದಿನ ಬೇಸಿಗೆಯಲ್ಲಿ 120 ದಿನ ಸತತವಾಗಿ ನೀರು ಹರಿಸಿದ್ರೆ ಬೇಸಿಗೆಯಲ್ಲಿ ಬತ್ತದ ಇಳುವರಿ ಎಕರೆಗೆ 50 ಚೀಲದವರೆಗೆ ಬರುತ್ತದೆ. ಉತ್ತಮ ದರವೂ ಸಿಗುತ್ತದೆ. ಜೊತೆಗೆ ತೋಟದ ಬೆಳೆ ಉಳಿಯುತ್ತದಲ್ಲದೇ, ಅಂತರ್ಜಲ ಮಟ್ಟ ಕುಸಿಯುವುದಿಲ್ಲ. ಇಡೀ ದಾವಣಗೆರೆ ಜಿಲ್ಲೆ ತಣ್ಣಗೆ ಇರುತ್ತದೆ. ಹಾಗಾಗಿ ರೈತರು ಈಗ ಬಹಳ ಎಚ್ಚರಿಕೆಯ ನಡೆ ಇಡಬೇಕಾಗಿದೆ.

ಬೇತೂರು ಸಂಗನಗೌಡತಾಪಂ ಮಾಜಿ ಉಪಾಧ್ಯಕ್ಷ, ............................(ಫೋಟೋ ಬರಲಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿತ್ತಲ ಕೋಳಿ ಸಾಕಾಣಿಕೆಯಿಂದ ಸುಸ್ಥಿರ ಜೀವನ
ಕ್ರೀಡೆಯಿಂದಲೂ ಸಾಧನೆ ಮಾಡಬಹುದು: ಪಾಪಣ್ಣ