ಕಡಿಮೆ ಬಂಡವಾಳದಲ್ಲಿ ಕೈಗೊಳ್ಳಬಹುದಾದ ಹಿತ್ತಲ ಕೋಳಿ ಸಾಕಾಣಿಕೆಯು ಗ್ರಾಮೀಣ ಮಹಿಳೆಯರು ಮತ್ತು ಸಣ್ಣ ರೈತರಿಗೆ ಸುಸ್ಥಿರ ಜೀವನೋಪಾಯದ ಉತ್ತಮ ಅವಕಾಶ ಒದಗಿಸುತ್ತದೆ ಎಂದು ತಜ್ಞರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಕಡಿಮೆ ಬಂಡವಾಳದಲ್ಲಿ ಕೈಗೊಳ್ಳಬಹುದಾದ ಹಿತ್ತಲ ಕೋಳಿ ಸಾಕಾಣಿಕೆಯು ಗ್ರಾಮೀಣ ಮಹಿಳೆಯರು ಮತ್ತು ಸಣ್ಣ ರೈತರಿಗೆ ಸುಸ್ಥಿರ ಜೀವನೋಪಾಯದ ಉತ್ತಮ ಅವಕಾಶ ಒದಗಿಸುತ್ತದೆ ಎಂದು ತಜ್ಞರು ತಿಳಿಸಿದರು.ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪಶುವೈದ್ಯಕೀಯ ಮಹಾ ವಿದ್ಯಾಲಯ, ಬೀದರ್‌ನಲ್ಲಿ ಕೋಳಿ ಅಭಿವೃದ್ಧಿ ಕುರಿತ ಅಖಿಲ ಭಾರತ ಸಮನ್ವಿತ ಸಂಶೋಧನಾ ಯೋಜನೆ ಸಹಯೋಗದೊಂದಿಗೆ ಎರಡು ದಿನಗಳ ‘ಹಿತ್ತಲ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮೀಣ ಕುಟುಂಬಗಳ ಪೌಷ್ಟಿಕ ಭದ್ರತೆ, ಮಹಿಳಾ ಸಬಲೀಕರಣ ಹಾಗೂ ಹೆಚ್ಚುವರಿ ಆದಾಯ ಸೃಷ್ಟಿಯಲ್ಲಿ ಹಿತ್ತಲ ಕೋಳಿ ಸಾಕಾಣಿಕೆಯ ಮಹತ್ವವನ್ನು ಒತ್ತಿ ಹೇಳಲಾಯಿತು.
ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ್ ಉದ್ಘಾಟಿಸಿದರು. ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‌ನ ಡೀನ್ ಡಾ.ಎಂ.ಕೆ. ತಾಂದಳೆ ಅಧ್ಯಕ್ಷತೆ ವಹಿಸಿದ್ದರು.ಎರಡು ದಿನಗಳ ತರಬೇತಿಯಲ್ಲಿ ತರಬೇತಿದಾರರಿಗೆ ವಿವಿಧ ಹಿತ್ತಲ ಕೋಳಿ ತಳಿಗಳು, ಉತ್ತಮ ಮರಿಗಳ ಆಯ್ಕೆ, ಕೋಳಿ ಪೌಷ್ಟಿಕಾಂಶ, ಆಹಾರ ನಿರ್ವಹಣೆ, ವಸತಿ ವ್ಯವಸ್ಥೆ, ಆರೋಗ್ಯ ಸಂರಕ್ಷಣೆ, ರೋಗನಿರೋಧಕ ಕ್ರಮಗಳು, ಲಸಿಕಾಕರಣ, ಸ್ವಚ್ಛತೆ, ವೈಜ್ಞಾನಿಕ ನಿರ್ವಹಣೆ ಹಾಗೂ ಕೋಳಿ ಮತ್ತು ಮೊಟ್ಟೆಗಳ ಮಾರು ಕಟ್ಟೆ ಕುರಿತು ತಾಂತ್ರಿಕ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಯಿತು. ತರಬೇತಿದಾರರಿಗೆ ಹಿತ್ತಲ ಕೋಳಿ ಸಾಕಾಣಿಕೆಯನ್ನು ಕುಟುಂಬದ ಪೌಷ್ಟಿಕ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಆದಾಯದ ಮೂಲವನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.
ತರಬೇತಿ ಯ ಸಮಾರೋಪದಲ್ಲಿ ಕೋಳಿ ಮರಿಗಳ ವಿತರಣೆಯನ್ನು ಹೊನ್ನಿಕೇರಿಯಲ್ಲಿ ಆಯೋಜಿಸಲಾಗಿತ್ತು. ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯ ಬಸವರಾಜ ಭತಮುರ್ಗೆ ಪಾಲ್ಗೊಂಡು ತರಬೇತಿದಾರರಿಗೆ ಶುಭ ಹಾರೈಸಿ ನಂತರ ಕೋಳಿ ಮರಿಗಳನ್ನು ವಿತರಿಸಿದರು.ಪಶು ವೈದ್ಯಕೀಯ ಮಹಾವಿದ್ಯಾಲಯ ಬೀದರ್‌ನ ಡಾ.ವಿದ್ಯಾಸಾಗರ್, ಡಾ.ಕೊಟ್ರೇಶ್ ಪ್ರಸಾದ್, ಡಾ.ಪ್ರೀತಿ ಹಾಗೂ ಡಾ.ಸತೀಶ್ ಮತ್ತಿತರರು ಇದ್ದರು.