ಭದ್ರಾ ಮೇಲ್ದಂಡೆ ಯೋಜನೆ ಭೂ ಪರಿಹಾರ ಬಿಡುಗಡೆ, ಹಂಚಿಕೆ ಬಾಕಿ: ಕೆ.ಎಸ್‌.ಆನಂದ್‌

KannadaprabhaNewsNetwork |  
Published : Jan 04, 2026, 01:45 AM IST
3ಕೆಕೆಡಿಯು3 | Kannada Prabha

ಸಾರಾಂಶ

ಕಡೂರುಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಾಮಗಾರಿ ಬಾಕಇರುವ ಪ್ರದೇಶಗಳ 221 ಎಕರೆ ಭೂ ಸ್ವಾಧೀನಕ್ಕೆ ಸಂಪುಟದ ಅನುಮೋದನೆ ದೊರೆತು ಪರಿಹಾರದ ಹಣವೂ ಬಿಡುಗಡೆಯಾಗಿ ಫಲಾನುಭವಿಗಳಿಗೆ ಹಂಚಿಕೆ ಬಾಕಿ ಇದೆ ಎಂದು ಶಾಸಕ ಕೆ.ಎಸ್‌.ಆನಂದ್‌ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಾಮಗಾರಿ ಬಾಕಇರುವ ಪ್ರದೇಶಗಳ 221 ಎಕರೆ ಭೂ ಸ್ವಾಧೀನಕ್ಕೆ ಸಂಪುಟದ ಅನುಮೋದನೆ ದೊರೆತು ಪರಿಹಾರದ ಹಣವೂ ಬಿಡುಗಡೆಯಾಗಿ ಫಲಾನುಭವಿಗಳಿಗೆ ಹಂಚಿಕೆ ಬಾಕಿ ಇದೆ ಎಂದು ಶಾಸಕ ಕೆ.ಎಸ್‌.ಆನಂದ್‌ ಸ್ಪಷ್ಟಪಡಿಸಿದರು.ತಾಲೂಕಿನ ಯಗಟಿ ಹೋಬಳಿ ಅಣ್ಣೀಗೆರೆ (9ನೇ ಮೈಲಿಕಲ್ಲು)ಯಲ್ಲಿ ಶಾಸಕರ ನಡೆ ಪಂಚಾಯಿತಿ ಕಡೆ ಅಂಗವಾಗಿ 13 ನೇ ಜನಸಂಪರ್ಕ ಸಭೆಯಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಿಂದುಳಿದಿರುವ ಭಾಗಗಳಾದ ವೈ.ಮಲ್ಲಾಪುರ, ಅಣ್ಣೀಗೆರೆ , ಯಳಗೊಂಡನಹಳ್ಳಿ ಮತ್ತು ಬೇಚಾರ್‌ ಗ್ರಾಮ ಕುರುಬರ ಹಳ್ಳಿ ವಲಯಗಳಲ್ಲಿ ಕೆಲಸ ಮುಂದುವರಿಕೆಗೆ ಚಾಲನೆ ಕೊಟ್ಟು, ರೈತರ ಹಿತಕ್ಕಾಗಿ ಕಾಮಗಾರಿಗೆ ವೇಗ ದೊರಕಿಸುವ ಉದ್ದೇಶದಿಂದ ತಾವು ಮಾಡಿದ ಕೋರಿಕೆಯನ್ನು ಮುಖ್ಯಮಂತ್ರಿ ಪರಿಗಣಿಸಿದ್ದಾರೆ.

ಉಪ ಮುಖ್ಯಮಂತ್ರಿ ಸಹಕಾರದಿಂದ ರೈತರ ಭೂ ಸ್ವಾಧೀನಕ್ಕೆ ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿ ₹77 ಕೋಟಿ ಬಿಡುಗಡೆ ಮಾಡಿದೆ. ಈ ವಿಷಯವಾಗಿ ಇನ್ನು ಒಂದೆರಡು ವಾರದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಮೌಲ್ಯ ನಿರ್ವಹಣಾ ಸಮಿತಿ ಅಧ್ಯಕ್ಷ, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಇಂಜಿನಿಯರ್‌ಗಳು ರೈತರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ವಿಜೆಎನ್‌ಎಲ್‌ ಎಂ ಡಿ ಒಪ್ಪಿಗೆಯಂತೆ ಬಹುತೇಕ ಎಕರೆಗೆ ₹42 ಲಕ್ಷ ನಿರ್ಧಾರವಾಗಲಿದೆ. ರೈತರ ಜಮೀನು, ತೋಟಗಳಲ್ಲಿ ಇರಬಹುದಾದ ಮನೆ, ತೆಂಗು, ಅಡಕೆ, ಹುಣಸೆ ಮೊದಲಾದ ಮರಗಳು, ಮನೆ, ಕೊಳವೆಬಾವಿ ಮತ್ತಿತರ ಸ್ವತ್ತುಗಳಿಗೆ ಹೆಚ್ಚುವರಿ ಪರಿಹಾರವೂ ದೊರಕಲಿದೆ. ರೈತರ ಪರ ನಿಲ್ಲಲು ತಾವು ಬದ್ಧರಾಗಿರುವುದಾಗಿ ಭರವಸೆ ನೀಡಿದರು. ಅಣ್ಣೀಗೆರೆ ವ್ಯಾಪ್ತಿಯಲ್ಲಿ ರಾಗಿ ಬೆಳೆ ಮಳೆ ಕೊರತೆಯಿಂದ ನಷ್ಟವಾಗಿದೆ. ಜಾನುವಾರುಗಳಿಗೆ ಮೇವೂ ಇಲ್ಲ, ರೈತರಿಗೆ ಆಹಾರ ಧಾನ್ಯವೂ ಇಲ್ಲ. ಗಾಯದ ಮೇಲೆ ಬರೆ ಎಳೆದಂತೆ ಫಸಲ್‌ ಭೀಮಾ ಕಂತು ಪಾವತಿಸಿದರೂ ಪರಿಹಾರ ದೊರೆತಿಲ್ಲ, ಬೆಳೆ ಸಮೀಕ್ಷೆ ಕೂಡಾ ಸರಿಯಾಗಿ ಆಗಿಲ್ಲ ಎಂದು ರೈತ ಮಹಿಳೆಯರು ದೂರಿದರು.

ಯಗಟಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಯಶ್ರೀ ಉತ್ತರಿಸಿ, ಬೆಳೆ ಕಟಾವು ಪ್ರಯೋಗದ ಅನ್ವಯ ಇಳುವರಿ ಕಡಿಮೆ ಇದ್ದರೆ ಮಾತ್ರ ಪರಿಹಾರ ದೊರೆಯುತ್ತದೆ. ೨೦೨೪-೨೫ರ 2024-25 ನೇ ಸಾಲಿನಲ್ಲಿ ಅಣ್ಣೀಗೆರೆ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ₹5.12 ಲಕ್ಷ ಪಾವತಿಸಿದೆ. ಈ ಭಾರಿ ಈಗಾಗಲೇ ಬೆಳೆ ಕಟಾವು ಪ್ರಯೋಗದ ವರದಿ ಸಲ್ಲಿಸಿದ್ದು ಅದರ ಆಧಾರದಲ್ಲಿ ಮಾತ್ರ ಪರಿಹಾರ ದೊರೆಯಬಹುದು. ಅದರ ವರದಿ ಬರಲು ಇನ್ನೂ ಸಮಯ ಬೇಕು ಎಂದು ತಿಳಿಸಿದರು. 9ನೇ ಮೈಲಿಕಲ್ಲಿನಲ್ಲಿ ಇರುವ ಖಾಸಗಿ ಆಯುರ್ವೇದ ಕ್ಲಿನಿಕ್‌ನ ವೈದ್ಯರು ಆಲೋಪತಿ( ಇಂಗ್ಲಿಷ್‌ಮೆಡಿಸಿನ್‌) ಔಷಧಿ ಅದರಲ್ಲಿ ಯೂ ಹೆಚ್ಚಿನ ಡೋಸೇಜ್‌ ಬರೆದು ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಕ್ಲಿನಿಕನ್ನು ಮುಚ್ಚಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ ದತ್ತಾತ್ರಿ ಈಗಾಗಲೇ 2 ಬಾರಿ ತಪಾಸಣೆ ನಡೆಸಿ ಎಚ್ಚರಿಕೆ ನೀಡಲಾಗಿದೆ. ಅವರ ಪರವಾನಗಿ ನವೀಕರಣ ಮಾಡುವುದಿಲ್ಲ ಎಂದು ಉತ್ತರಿಸಿದರು. 9ನೇ ಮೈಲಿಕಲ್ಲು ಜಂಕ್ಷನ್‌ ಸ್ಥಳ ಬಹಳಷ್ಟು ಕಡೆಗಳಿಂದ ಜನರು ಬರುತ್ತಾರೆ. ಇಲ್ಲಿ ಒಂದು ಸಮುದಾಯ ಶೌಚಾಲಯ ನಿರ್ಮಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರೆ, ಸಂಜೀವಿನಿ ಒಕ್ಕೂಟದಲ್ಲಿ ಹತ್ತಾರು ಹಳ್ಳಿಗಳ ಸದಸ್ಯರಿದ್ದು ಸಭೆ ನಡೆಸಲು ಕಟ್ಟಡ ಗುರುತಿಸಿಕೊಡುವಂತೆ ಕೋರಲಾಗಿತ್ತು. ಅಣ್ಣೀಗೆರೆ ವ್ಯಾಪ್ತಿಯಲ್ಲಿ ವಿದ್ಯುತ್‌ ಕಂಬಗಳು ಹಳೆಯದಾಗಿದ್ದು ಶಿಥಿಲಗೊಂಡಿವೆ, ಎಲೆಕ್ಟ್ರಿಕ್‌ ಲೈನ್‌ ಜೋತು ಬಿದ್ದು ಜನರ ಜೀವಕ್ಕೆ ಅಪಾಯವಾಗುವ ಸನ್ನಿವೇಶವಿದೆ. ಟಿ.ಸಿ ಕೂಡಾ ಸ್ಥಳಾಂತರವಾಗಬೇಕು. ಈ ಭಾಗದಲ್ಲಿ ಜಾನುವಾರುಗಳ ಔಷಧೋಪ ಚಾರಕ್ಕಾಗಿ ಪಶು ಆಸ್ಪತ್ರೆ ಸ್ಥಾಪಿಸಬೇಕು. ಗ್ರಾಮದ ಒಳ ಭಾಗದಲ್ಲಿಯೇ ಅಡುಗೆ ಅನಿಲ ಸಿಲಿಂಡರ್‌ಗಳ ಗೋದಾಮು ಇದ್ದು ಏನಾದರೂ ಅನಾಹುತ ಸಂಭವಿಸುವ ಮೊದಲು ಇದನ್ನು ಸ್ಥಳಾಂತರಿಸಿ ಎಂದು ಅಣ್ಣೀಗೆರೆ ಗ್ರಾಮಸ್ಥರು ಕೋರಿದರೆ, ಪಾತೇನಹಳ್ಳಿ,ಗುಜ್ಜೇನಹಳ್ಳಿಗಳು ಕಂದಾಯ ಗ್ರಾಮವಾಗದೆ ಮೂಲ ಸೌಕರ್ಯ ಕೊರತೆ ಕಾಡುತ್ತಿದೆ. ಇದನ್ನು ಬಗೆಹರಿಸಿ ಎಂದು ಜನರು ಮನವಿ ಮಾಡಿದ್ದರು. ಪಾತೇನಹಳ್ಳಿ ಮತ್ತು ಗುಜ್ಜೇನಹಳ್ಳಿಗಳನ್ನು ಕಂದಾಯ ಗ್ರಾಮಗಳಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಇ- ಸೂತ್ತು ವಿತರಣೆಗೆ ಕ್ರಮ ಮತ್ತು ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಆನಂದ್‌ ಆಶ್ವಾಸನೆ ನೀಡಿದರು. ಸಭೆಯಲ್ಲಿ ತಹಸೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್‌.ಪ್ರವೀಣ್‌, ಗ್ರಾಪಂಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಎ.ಎಂ.ತಮ್ಮಯ್ಯ, ಶಂಕರಪ್ಪ, ಪ್ರೇಮಾ, ಚಂದ್ರಪ್ಪ, ಲಕ್ಷ್ಮೀದೇವಿ, ಪರ್ವೀನ್, ಭಾಗ್ಯ, ಗೀತಮ್ಮ, ಪಿಡಿಒ ನವೀನ್‌, ಕಾರ್ಯದರ್ಶಿ ಪರಮೇಶ್‌, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯ ತಿಪ್ಪೇಶ್‌ ಜಿ.ಎಂ. ಗ್ರಾಮಸ್ಥರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 3ಕೆಕೆಡಿಯು3. ಕಡೂರು ತಾಲೂಕು ಅಣ್ಣೀಗೆರೆಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯನ್ನು ಶಾಸಕ ಕೆ.ಎಸ್‌.ಆನಂದ್‌ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್