)
- ರೈತರು, ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ರಕ್ತಗಾಯ । ರೇಣು, ಮಾಡಾಳ್ ಸೇರಿ ಹಲವರ ಬಂಧನ - ಭದ್ರಾ ಡ್ಯಾಂನಿಂದ ತಕ್ಷಣ ನಾಲೆಗೆ ನೀರು ಹರಿಸಲು ಸರ್ಕಾರ, ಸಚಿವರು, ಡಿಸಿಗೆ ರೈತರ ತಾಕೀತು
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ-48 ಅನ್ನು ಮಂಗಳವಾರ ಬಂದ್ ಮಾಡಲು ಮುಂದಾಗಿದ್ದ ವೇಳೆ ದೊಡ್ಡ ಹೈಡ್ರಾಮಾ ನಡೆದಿದ್ದು, ಹೋರಾಟನಿರತ ರೈತರು, ಸಿಪಿಐ, ಪೊಲೀಸ್ ಸಿಬ್ಬಂದಿ ಸೇರಿದಂತೆ ಆರೇಳು ಜನರಿಗೆ ರಕ್ತಗಾಯಗಳಾಗಿವೆ.ನಗರದ ವಲಯದ ಬಾಡಾ ಕ್ರಾಸ್‌ನ ಅಪೂರ್ವ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ-48 ಹಾಗೂ ಸರ್ವೀಸ್ ರಸ್ತೆಯಲ್ಲಿ ರೈತರು ಅಡುಗೆ ಮಾಡಲು ಮುಂದಾದರು. ಒಲೆ, ಪಾತ್ರೆಗಳನ್ನಿಟ್ಟು ಅಡುಗೆ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಇತರರ ಜೊತೆಗೆ ಮಾತಿನ ಚಕಮಕಿ ಶುರುವಾಯಿತು. ಹೆದ್ದಾರಿ ಬಂದ್ ಮಾಡದಂತೆ ಪೊಲೀಸ್ ಅಧಿಕಾರಿಗಳು ರೇಣುಕಾಚಾರ್ಯ ಮತ್ತಿತರರಿಗೆ ಮನವಿ ಮಾಡಿದರು. ಪೊಲೀಸ್ ಇಲಾಖೆ ಮನವಿಗೆ ಸೊಪ್ಪು ಹಾಕದ ಪ್ರತಿಭಟನಾಕಾರರು ಹೆದ್ದಾ ರಿ ಪಕ್ಕದ ಸರ್ವೀಸ್ ರಸ್ತೆಯ ಪಕ್ಕದ ಜಾಗದಲ್ಲಿ ಬೆಳಗ್ಗೆಯಿಂದ ಹಸಿದು ಬಂದಿದ್ದ ರೈತರಿಗೆ ಆಹಾರ ಸಿದ್ಧಪಡಿಸುವ ವ್ಯವಸ್ತೆ ಮಾಡಿ, ಹೋರಾಟಕ್ಕೆ ಮುಂದಾಗುತ್ತಿದ್ದರು. ಹೆದ್ದಾರಿ ಬಂದ್‌ಗೆಂದು ಟ್ರ್ಯಾಕ್ಟರ್, ಬೈಕ್, ಕಾರುಗಳಲ್ಲಿ ರೈತರು ಬರುವುದನ್ನು ಪೊಲೀಸರು ತಡೆದಿದ್ದು, ಇದು ರೈತರ ಹೋರಾಟ ಹತ್ತಿಕ್ಕುವ ಕೆಲಸ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯ ಮಾಡಿದ್ದಾರೆ. ಭದ್ರಾ ಡ್ಯಾಂ ಇತಿಹಾಸದಲ್ಲೇ ಮೊದಲ ಸಲ ಐಸಿಸಿ ಸಭೆಯಲ್ಲಿ ನಿರ್ಣಯವೇ ಆಗದೇ ನೆರೆಯ ಜಿಲ್ಲೆಗಳಿಗೆ 3 ಟಿಎಂಸಿ ಪ್ರಾಯೋಗಿಕವಾಗಿ ನೀರು ಹರಿಸುತ್ತಿದ್ದಾರೆ. ಮಳೆ ಕೈ ಕೊಟ್ಟು, ಗಂಭೀರ ಬರ ಆವರಿಸಿದ್ದರೂ ಭದ್ರಾ ಅಚ್ಚುಕಟ್ಟು ರೈತರನ್ನು ಕಡೆಗಣಿಸಿ, ಹಿರಿಯೂರು ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು, ಪ್ರಾಯೋಗಿಕವಾಗಿ ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
50ಕ್ಕೂ ಹೆಚ್ಚು ಜನರ ವಶ:
ರೈತರಿಗೆ, ಸಿಪಿಐ-ಸಿಬ್ಬಂದಿಗೆ ಪೆಟ್ಟು:
- - -
* ರೈತರ ಕಣ್ಣಲ್ಲಿ ನೀರಲ್ಲ ರಕ್ತ ಬರಿಸಿದರೂ ಹೋರಾಟ ನಿಲ್ಲದು
ನಗರದಲ್ಲಿ ಮಂಗಳವಾರ ಪ್ರತಿಭಟನೆ ವೇಳೆ ಪೊಲೀಸರಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾವುದೇ ವಾಹನಕ್ಕೆ ಪ್ರತಿಭಟನಾನಿರತ ರೈತರು ಅಡ್ಡಿಪಡಿಸಿರಲಿಲ್ಲ, ಪೊಲೀಸರಿಗೂ ಯಾವುದೇ ತೊಂದರೆ ಕೊಟ್ಟಿರಲಿಲ್ಲ. ಹಸಿದು ಬಂದ ರೈತರಿಗೆ ಸರ್ವೀಸ್ ರಸ್ತೆ ಪಕ್ಕ ಅಡುಗೆ ಮಾಡದೇ, ಹೋಟೆಲ್ ಕಡೆಗೆ ಹೋಗುವಂತೆ ಹೇಳಿದರು. ಶಾಂತಿಯುತ ಹೋರಾಟ ಮಾಡುತ್ತೇವೆ. ನೀರು ಎತ್ತುವ ವಿಷಯ ಬಂದರೆ ಹಳ್ಳಿಗೆ ಹೋಗಿ ಕೆಲಸ ಮಾಡುತ್ತೇವೆಂದು ಹೇಳಿದರೂ ಕೇಳಲಿಲ್ಲ ಎಂದರು.
ನಮಗೆ ಮಾಡೋಕೆ ಕೆಲಸ ಇವೆ. ದನ ಕರು ಬಿಟ್ಟು ನಾವು ಹೋರಾಟಕ್ಕೆ ಬಂದಿದ್ದೇವೆಂದರೆ ನಮಗೆ ಹಳ್ಳಿಗಳಲ್ಲಿ ನೀರಿನ ತೀವ್ರ ಅವಶ್ಯಕತೆ ಇದೆಯೆಂಬುದನ್ನು ಸರ್ಕಾರ ಅರಿಯಲಿ. ನೀವು ಹೇಳಿದಾಗ ಬಿಡಬೇಕೇನೋ ಎಂಬುದಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಗ್ಯಾಸ್, ಒಲೆ, ಆಹಾರ ಧಾನ್ಯ ಚೆಲ್ಲಾಡಿ ದೌರ್ಜನ್ಯ ಎಸಗಿದ್ದಾರೆ. ಜೋರಾಗಿ ಮಾತನಾಡುತ್ತಿದ್ದವರನ್ನೆಲ್ಲಾ ಟಾರ್ಗೆಟ್ ಮಾಡಿ, ದೌರ್ಜನ್ಯ ಎಸಗಿದ್ದಾರೆ. ಪೊಲೀಸ್ ಜೀಪಿಗೆ ತಲೆಯನ್ನು ಅದುಮಿದ್ದರಿಂದ ನನ್ನ ತಲೆ, ಎಡ ಕಣ್ಣಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ದೂರಿದರು.ಯಕ್ಕನಹಳ್ಳಿ ಮೇಘರಾಜ ಎಂಬ ರೈತನ ಎದೆಗೆ ಪೊಲೀಸರು ಒದ್ದಿದ್ದಾರೆ. ರೈತರ ಕಣ್ಣಿನಲ್ಲಿ ರಕ್ತ ಬರಿಸಿದ ಭ್ರಷ್ಟ ಪೊಲೀಸ್ ಅಧಿಕಾರಿಗಳು, ಭ್ರಷ್ಟ ಜಿಲ್ಲಾ ಮಂತ್ರಿ, ಇಂತಹ ನೀಚ ಸರ್ಕಾರ ಈ ಹಿಂದೆ ಯಾವತ್ತಿಗೂ ಇರಲಿಲ್ಲ. ರೈತರ ಕಣ್ಣಿನಲ್ಲಿ ಈಗಿನ ನೀರಲ್ಲ, ರಕ್ತ ಹರಿಸುವಂತೆ ಮಾಡುತ್ತಿದ್ದಾರೆ. ನಿಜವಾಗಲೂ ರೈತರ ಪರ ಕಾಳಜಿ ಇದ್ದರೆ ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಬಿಡಿಸಲಿ. ನಾಚಿಕೆಗೇಡಿನ ರಾಜ್ಯ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಮಂತ್ರಿಗಳು ರೈತರ ಬಗ್ಗೆ ಬದ್ಧತೆ ತೋರಲಿ ಎಂದರು.
ರೈತರ ರಕ್ಷಣೆಗೆ ಇರಬೇಕಾದ ಪೊಲೀಸ್ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟ ಅಧಿಕಾರಿಗಳು ಆಳುವ ಸರ್ಕಾರದ ಹೇಳಿಕೆ, ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ. ಡಿಸಿ, ಎಸ್‌ಪಿ ಸ್ಥಳಕ್ಕೆ ಬಂದು, ನಮಗೆ ಆದ ಅನ್ಯಾಯ ಸರಿಪಡಿಸಬೇಕು. ಹೋರಾಟನಿರತ ರೈತರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತುಪಡಿಸಲಿ. ಭದ್ರಾ ನಾಲೆಗಳಿಗೆ ನೀರು ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾಲ್ಕಾರು ಜನಕ್ಕೆ ರಕ್ತ ಬರಿಸಿದ್ದಾರೆ. ಇನ್ನೂ ಎಷ್ಟು ಜನಕ್ಕೆ ರಕ್ತ ಬರಿಸುತ್ತೀರೋ ನೋಡೋಣ. ನಾವಂತೂ ಹೋರಾಟದಿಂದ ಹಿಂದೆ ಸರಿಯುವವರಲ್ಲ ಎಂದು ಗಾಯಾಳು ಹಿರಿಯ ರೈತ ಮುಕ್ತೇನಹಳ್ಳಿ ಶಿವಯೋಗಿ ಎಚ್ಚರಿಸಿದರು.ಈ ಸಂದರ್ಭ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮಾಡಾಳ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರ, ಬಿ.ಎಸ್.ಜಗದೀಶ, ಬಿ.ಜಿ.ಅಜಯಕುಮಾರ, ಧನಂಜಯ ಕಡ್ಲೇಬಾಳು ಸೇರಿದಂತೆ ಅನೇಕರು ಇದ್ದರು.
- - -(ಬಾಕ್ಸ್-2)
* ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸಬಾರದು: ರೇಣುದಾವಣಗೆರೆ: ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ಹರಿಸುವ ಮೂಲಕ ಭದ್ರಾ ಅಚ್ಚುಕಟ್ಟು ರೈತರಿಗೆ ರಾಜ್ಯ ಸರ್ಕಾರ ಘೋರ ಅನ್ಯಾಯ ಮಾಡಿದ್ದು, ಜಿಲ್ಲೆಯ ಸಚಿವರು, ಶಾಸಕರ ನಿರ್ಲಕ್ಷ್ಯದಿಂದ ರೈತರು ಇಂದು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರಹಾಕಿದ್ದಾರೆ.
ನಗರದ ಬಾಡಾ ಕ್ರಾಸ್ ಬಳಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಸಂಘರ್ಷ ಬೇಡ. ಸಿಎಂ ಬಾಗಿನ ಅರ್ಪಿಸಿದರೆ ನಾವೇನು ವಿಷ ಕುಡಿಯಬೇಕಾ? ಪ್ರಚಾರಕ್ಕೆಂದು ಹೋರಾಟಕ್ಕಿಳಿದಿಲ್ಲ. ಪೊಲೀಸರು ನೀವು ನಮ್ಮವರೇ. ಸರ್ಕಾರದ ಕೆಲಸ ಮಾಡಬೇಕೇ ಹೊರತು, ಕಾಂಗ್ರೆಸ್ ಏಜೆಂಟರ್ ಆಗಿ ಕೆಲಸ ಮಾಡಬೇಡಿ ಎಂದರು.ನೀರು ಬಿಡುವವರೆಗೂ ಇಲ್ಲಿಯೇ ಅಡುಗೆ, ಊಟ ಮಾಡುತ್ತೇವೆ. ನೀವು ಎಲ್ಲಿಗೆ ಬಂಧಿಸಿ, ಕರೆದೊಯ್ಯುತ್ತೀರೋ ಅಲ್ಲಿಯೇ ಹೋರಾಟ ನಡೆಸುತ್ತೇವೆ. ಭದ್ರಾ ಮೇಲ್ದಂಡೆಗೆ ನೀರನ್ನು ಹರಿಸಿ, ಭದ್ರಾ ಅಚ್ಚುಕಚ್ಚು ರೈತರ ಹಕ್ಕನ್ನು ವಂಚಿಸಿದ ಸರ್ಕಾರದ ವಿರುದ್ಧ ನಮ್ಮ ಹೋರಾಟ. ನಮ್ಮ ಹಕ್ಕಿನ ನೀರಿಗಾಗಿ 3 ವರ್ಷದಿಂದ ನಾವು ಹೋರಾಟ ನಡೆಸಿದ್ದು, ಈಗ ಜನರಿಗೆ ಸಮಸ್ಯೆ ಏನೆಂಬುದು ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಅಚ್ಚುಕಟ್ಟಿಗೆ ನೀಡಬೇಕಾದ ನೀರನ್ನು ಭದ್ರಾ ಮೇಲ್ದಂಡೆಯಡಿ ಚಿತ್ರದುರ್ಗ, ತುಮಕೂರು, ತರೀಕೆರೆ ಭಾಗಕ್ಕೆ ಯಾರನ್ನು ಕೇಳಿ ಒಯ್ದಿದ್ದಾರೆ? ಐಸಿಸಿ ಸಭೆ ಮಾಡದೇ ನೀರು ಬಿಡುವುದಕ್ಕೆ ಆದೇಶಿಸಿದ್ದು ಯಾರು? ಬತ್ತ ನಾಟಿಗೆ ನೀರಿಲ್ಲವೆಂದು ಹೇಳಿ ಇಂತಹ ಬರಗಾಲದಲ್ಲೂ ಮೇಲ್ದಂಡೆಗೆ 3 ಟಿಎಂಸಿ ನೀರು ಬಿಟ್ಟು, ಅಚ್ಚುಕಟ್ಟು ರೈತರನ್ನು ಬಲಿ ಕೊಡಲು ಹೊರಟಿದ್ದೀರಾ? ಭದ್ರಾ ಮೇಲ್ದಂಡೆಗೆ ನೀರು ಬಿಡಲು ನಮ್ಮ ವಿರೋಧವಿಲ್ಲ. ಆದರೆ, ತುಂಗಾ ನದಿಯಿಂದ ಭದ್ರಾಗೆ 17.41 ಟಿಎಂಸಿ ನೀರನ್ನು ಲಿಫ್ಟ್ ಮಾಡಿ, ಅಲ್ಲಿಂದ ಭದ್ರಾ ಮೇಲ್ದಂಡೆಗೆ ಕೊಡಬೇಕೆಂಬ ಅರಿವು ನಿಮಗಿಲ್ಲವೇ ಎಂದು ಪ್ರಶ್ನಿಸಿದರು.ಭದ್ರಾ ಮೇಲ್ದಂಡೆಗೆ ಒಟ್ಟು 29.90 ಟಿಎಂಸಿ ನೀರನ್ನು ಬಿಡಬೇಕು. ಅದರಲ್ಲಿ ತುಂಗಾದಿಂದ 17.41 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ಲಿಫ್ಟ್ ಮಾಡಬೇಕು. ಉಳಿದ ನೀರನ್ನು ಭದ್ರಾದಿಂದ ಕೊಡುವು
ದು ಎಷ್ಟು ಸರಿ? ಮುತ್ತಿನಕೊಪ್ಪ ಏತ ಯೋಜನೆಯ ಬಾಕಿ ಕಾಮಗಾರಿಗೆ ₹30 ಕೋಟಿ ಬಿಡುಗಡೆ ಮಾಡಿ, ಕೆಲಸ ಪೂರ್ಣ ಮಾಡಿ. 3 ಟಿಎಂಸಿ ನೀರು ಬಿಟ್ಟ ಪರಿಣಾಮ ಅಚ್ಚುಕಟ್ಟು ಜಿಲ್ಲೆಗಳಲ್ಲಿ ಸಂಕಷ್ಟ ಬಂದೊದಗಿದೆ. ಇಂತಹ ಬರದಲ್ಲಿ ರೈತರ ಶಾಪ, ರಕ್ತದ ಕಣ್ಣೀರು ಮುಖ್ಯಮಂತ್ರಿ, ನೀರಾವರಿ ಸಚಿವ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಅಚ್ಚುಕಟ್ಟು ರೈತವಿರೋಧಿ ಧೋರಣೆ ವಿರುದ್ಧ ಅನಿವಾರ್ಯವಾಗಿ ಹೆದ್ದಾರಿ ಬಂದ್ ಮಾಡುತ್ತಿದ್ದೇವೆ. ನಾವ್ಯಾರೂ ರಾಜಕೀಯಕ್ಕಾಗಿ ನೀರಿನ ಹೋರಾಟ ಮಾಡುತ್ತಿಲ್ಲ. ನಾವೆಲ್ಲಾ ಅಪ್ಪಟ ರೈತರು, ನಮ್ಮ ತೋಟ, ಗದ್ದೆಗಳಿವೆ. ಯಾರೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ. ರೈತರ ವಿಚಾರದಲ್ಲಿ ರಾಜಕಾರಣ ಬೇಡ. ಜಿಲ್ಲಾ ಮಂತ್ರಿಗಳು, ಶಾಸಕರು ಏನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.ಚನ್ನಗಿರಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ಡ್ಯಾಂನಲ್ಲಿ ಸಣ್ಣ ಸೋರಿಕೆಯಾದರೂ, ಚಿಕ್ಕ ವ್ಯತ್ಯಾಸವಾದರೂ ಹೋರಾಡುತ್ತಾ ಬಂದವರು ನಾವು. 3 ವರ್ಷದ ಹಿಂದೆಯೇ ಹೀಗೇ ಆಗುತ್ತದೆಂದು ಎಚ್ಚರಿಸಿದ್ದೆವು. ಆಗಿನಿಂದಲೂ ಹೋರಾಟ ನಡೆಸಿದ್ದೆವು. ತೀವ್ರ ಬರ ಇದ್ದರೂ ಸಿಎಂ ಆದೇಶವೆಂದು ಐಸಿಸಿ ಸಭೆ ಮಾಡದೇ, ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರನ್ನು ಹರಿಸುತ್ತಿರುವುದು ಒಳ್ಳೆಯದಲ್ಲ. ಮೇಲ್ದಂಡೆಗೆ ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ, ನಿಯಮ ಪಾಲಿಸಲಿ. ಡ್ಯಾಂಗೆ ತುಂಗಾದಿಂದ 17.41 ಟಿಎಂಸಿ ನೀರು ತುಂಬಿಸಿ, ಒಯ್ಯಲಿ ಎಂದರು.
ಜಿಲ್ಲಾ ಸಚಿವರು ರೈತರಲ್ಲಿ ವಿಭಜಿಸಿದ್ದಾರೆ. ಹೀಗೆ ಮಾಡುವ ಬದಲು ಬೇಸಿಗೆ ಬೆಳೆಗೂ ನೀರು ಕೊಡಿಸುತ್ತೇನೆಂದು ಹೇಳಿದ್ದರೆ ನಾವೆಲ್ಲರೂ ಒಪ್ಪುತ್ತಿದ್ದೆವು. ಅದನ್ನು ಮಾಡದೇ, ರೈತರು ನೀವೆಲ್ಲಾ ಒಂದಾಗಿ ಬನ್ನಿ ಅಂತಾ ಹೇಳಿ ಸುಮ್ಮನಾದರು. ಮಳೆಯೇ ಇಲ್ಲದಾಗ ಮೇಲ್ದಂಡೆಗೆ ನೀರು ಕೊಡುವುದು ಸರಿಯಲ್ಲ. ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಸ್ವತಃ ಅಸಹಾಯಕರಾಗಿದ್ದು, ಜಿಲ್ಲಾ ಸಚಿವರ ಮೇಲೆ ನಂಬಿಕೆ ಇಲ್ಲ. ರೈತರಿಗೆ ಅನ್ಯಾಯ ಮಾಡುವ ಕೆಲಸವನ್ನು ಸರ್ಕಾರ ಮಾಡಬಾರದು. ಕಾವೇರಿ ನೀರಿನ ವಿಚಾರದಲ್ಲಿ ಒಂದಾಗುವ ಜನಪ್ರತಿನಿಧಿಗಳು ಭದ್ರಾ ವಿಚಾರದಲ್ಲೇಕೆ ಹಿಂದೇಟು ಹಾಕುತ್ತೀರಿ ಎಂದು ಅವರು ಪ್ರಶ್ನಿಸಿದರು.- - -
-(ಫೋಟೋಗಳಿವೆ.)