ಆಕರ್ಷಕ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ ಗೌರಿ-ಗಣೇಶ ಮೂರ್ತಿಯ ಪೂಜಾ ವಿಧಿ-ವಿಧಾನ, ಹೋಮ, ಇತರೆ ಕೈಂಕರ್ಯಗಳನ್ನು ನಗರದ ಶ್ರೀಉಗ್ರನರಸಿಂಹಸ್ವಾಮಿ ದೇವಾಲಯದ ಅರ್ಚಕ ಬಾಲಾಜಿ ಮತ್ತು ತಂಡದ ನೇತೃತ್ವದಲ್ಲಿ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ನಗರದ ಸರ್ಕಾರಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಒಂದು ವಾರಗಳ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಬೃಹತ್ ಗಾತ್ರದ ಗಣೇಶ ಹಾಗೂ ಗೌರಿ ಮೂರ್ತಿಯನ್ನು ಸೋಮವಾರ ಸಂಜೆ ಪ್ರತಿಷ್ಠಾಪಿಸಲಾಯಿತು.

ಆಕರ್ಷಕ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ ಗೌರಿ-ಗಣೇಶ ಮೂರ್ತಿಯ ಪೂಜಾ ವಿಧಿ-ವಿಧಾನ, ಹೋಮ, ಇತರೆ ಕೈಂಕರ್ಯಗಳನ್ನು ನಗರದ ಶ್ರೀಉಗ್ರನರಸಿಂಹಸ್ವಾಮಿ ದೇವಾಲಯದ ಅರ್ಚಕ ಬಾಲಾಜಿ ಮತ್ತು ತಂಡದ ನೇತೃತ್ವದಲ್ಲಿ ಕೈಗೊಳ್ಳಲಾಯಿತು. ಕಲಾವಿದ, ನಟ ಅರುಣ್‌ ಸಾಗರ್ ಸಾರಥ್ಯದಲ್ಲಿ ನಿರ್ಮಿಸಿರುವ ಸಭಾ ಮಂಟಪ, ಪ್ರವೇಶ ದ್ವಾರ, ಮತ್ತಿತರ ಮಾದರಿಗಳು ಸ್ಥಳೀಕರು ಮತ್ತು ಭಕ್ತಾದಿಗಳನ್ನು ಸೆಳೆದವಲ್ಲದೆ ಕಾರ್ಯಕ್ರಮದ ಪ್ರಯುಕ್ತ ಕ್ರೀಡಾಂಗಣ ಸೇರಿದಂತೆ ಪಟ್ಟಣದ ಪೇಟೆಬೀದಿ ಉದ್ದಕ್ಕೂ ಅಳವಡಿಸಿರುವ ವಿದ್ಯುತ್ ದೀಪಾಲಂಕಾರ ಹಬ್ಬದ ಮೆರುಗನ್ನು ಇಮ್ಮಡಿಗೊಳಿಸಿತ್ತು.

ಪೂಜಾ ಕೈಂಕರ್ಯದ ವೇಳೆ ಶಾಸಕ ಕೆ.ಎಂ.ಉದಯ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕರಾದ ವಿನುತಾ ಉದಯ್, ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್, ರೋಟರಿ ಅಧ್ಯಕ್ಷ ಲೋಕೆಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಕಲಾವಿದ. ನಟ ಅರುಣ್‌ಸಾಗರ್ ಇತರರು ಪಾಲ್ಗೊಂಡರು.

ಮದ್ದೂರು ನಗರ ಸೇರಿದಂತೆ ತಾಲೂಕಿನ ಎಲ್ಲೆಡೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತಲ್ಲದೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪ್ರಸಾದ ವಿನಿಯೋಗ ನೆರವೇರಿದವು.

ತಾಲೂಕಿನ ವೈದ್ಯನಾಥಪುರದ ಶ್ರೀವೈದ್ಯನಾಥೇಶ್ವರ ದೇವಾಲಯದಲ್ಲಿ ಸೋಮವಾರ ಪ್ರಾತಃಕಾಲ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಜರುಗಿತು.

ಶಿಂಷಾನದಿಯಲ್ಲಿ ಸ್ನಾನ ಮಾಡಿ ಗಂಗಾಪೂಜೆ ನೆರವೇರಿಸಿದ ಭಕ್ತಾದಿಗಳು ದೇವಾಲಯ ಹೊರ ಆವರಣದ ಅರಳಿ ಕಟ್ಟೆಯ ನಾಗದೇವತೆಗಳಿಗೆ ತನಿ ಎರೆದು ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಪ್ರಸನ್ನ ಪಾರ್ವತಾಂಭ ದೇವಾಲಯ ಟ್ರಸ್ಟ್‌ನಿಂದ ಉಪಾಹಾರ ಮತ್ತು ಹೋಳಿಗೆ ಊಟ ಉಣ ಬಡಿಸಲಾಯಿತು.

ಮದ್ದೂರು ನಗರದ ಹಳೇ ಬಸ್ ನಿಲ್ದಾಣದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಭಕ್ತಾದಿಗಳು ಆವರಣದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಪ್ರತಿಮೆ ಬಳಿ ಪರಸ್ಪರ ಬಾಗಿನ ವಿನಿಮಯಕ್ಕೆ ಮುಂದಾದರು.