ತಿಂಗಳಲ್ಲಿ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ಭದ್ರಾ ನೀರು

KannadaprabhaNewsNetwork |  
Published : Mar 02, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ     | Kannada Prabha

ಸಾರಾಂಶ

ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಬೀರಲಿಂಗೇಶ್ವರ ಪೂಜಾ ಕಾರ್ಯಕ್ರಮವನ್ನು ಶಾಸಕ ಎಂ.ಚಂದ್ರಪ್ಪ ಉದ್ಘಾಟಿಸಿದರು.

ಶಾಸಕ ಎಂ.ಚಂದ್ರಪ್ಪ ಪುನರುಚ್ಚಾರ । ತಾಳಿಕಟ್ಟೆಯಲ್ಲಿ ಭೀರಲಿಂಗೇಶ್ವರ ಪೂಜಾ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಇನ್ನೊಂದು ತಿಂಗಳಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೂ ಭದ್ರಾ ಮೇಲ್ದಂಡೆಯಡಿ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಪುನರುಚ್ಚಾರ ಮಾಡಿದರು.

ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಬೀರಲಿಂಗೇಶ್ವರ ಸ್ವಾಮಿಯ ಪೂಜಾ ಕಾರ್ಯಕ್ರಮ, ಅನ್ನ ಸಂತರ್ಪಣೆ, 35 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಿಸಿ ರಸ್ತೆ ಉದ್ಘಾಟಿಸಿ ಮಾತನಾಡಿದ ಅವರು, ಕೆಲ ತಾತ್ರಿಕ ಕಾರಣದಿಂದ ಕೆರೆಗಳಿಗೆ ನೀರು ತುಂಬಿಸುವುದು ತಡವಾಗಿದೆ. ಇನ್ನೊಂದು ತಿಂಗಳಲ್ಲಿ ನೀರು ಹರಿಯುವುದು ಗ್ಯಾರಂಟಿ ಎಂದರು.

ರೈತರ ತೋಟಗಳು ಒಣಗಬಾರದೆಂದು ತಾಲೂಕಿನ 17 ಕಡೆ ವಿದ್ಯುತ್ ಪವರ್ ಸ್ಟೇಷನ್‍ಗಳ ನಿರ್ಮಿಸಲಾಗುತ್ತಿದೆ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐನೂರು ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಾರ್ಯಾರಂಭವಾಗಲಿದೆ. ಜೋಗ್‍ಫಾಲ್ಸ್ ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದ್ದು, ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ಕರೆಂಟ್‍ಗೆ ಅಭಾವವಿರುವುದಿಲ್ಲ ಎಂದರು.

ಹೊಳಲ್ಕೆರೆ ಪಟ್ಟಣ ಸಣ್ಣ ಹಳ್ಳಿಗಿಂತಲೂ ಕಡೆಯಾಗಿತ್ತು. ಶಾಸಕನಾಗಿ ಪ್ರವೇಶ ಮಾಡಿದ ನಂತರ ಪಟ್ಟಣದ ಸ್ವರೂಪವೇ ಬದಲಾಗಿದೆ. ಹೈಟೆಕ್ ಆಸ್ಪತ್ರೆ, ಶಾಲಾ-ಕಾಲೇಜುಗಳನ್ನು ಕಟ್ಟಿಸಿ ಗುಣಮಟ್ಟದ ಸಿಸಿ ರಸ್ತೆಗಳನ್ನು ಮಾಡಿಸಿದ್ದೇನೆ. ಕಿರಿದಾಗಿದ್ದ ಕೆರೆ ಏರಿಯನ್ನು ಅಗಲ ಮಾಡಿಸಿದ್ದೇನೆ. ಗುಡ್ಡವನ್ನು ಕಡಿದು ಸಮ ಮಾಡಿ ಕೃಷಿ ಮಾರುಕಟ್ಟೆ ಕಟ್ಟಿಸಿದ್ದರ ಪರಿಣಾಮ ರೈತರು ಬೆಳೆದ ಬೆಳೆಗಳನ್ನು ಇಲ್ಲಿಗೆ ತಂದು ಮಾರಾಟ ಮಾಡಿಕೊಳ್ಳಲು ಅನುಕೂಲವಾಗಿದೆ. ಮುರಾರ್ಜಿದೇಸಾಯಿ ವಸತಿ ಶಾಲೆ, ಕಿತ್ತೂರುರಾಣಿಚೆನ್ನಮ್ಮ ಶಾಲೆ, ಕಸ್ತೂರಬಾ ಶಾಲೆ, ಅರಣ್ಯ ಇಲಾಖೆ ಗೆಸ್ಟ್ ಹೌಸ್ ಹಾಗೂ ನ್ಯಾಯಾಧೀಶರುಗಳಿಗೆ ವಸತಿ ಗೃಹಗಳನ್ನು ನಿರ್ಮಿಸಿದ್ದೇನೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದಿದ್ದರೂ ಇಲ್ಲಿಯವರೆಗೂ ಶಾಸಕರು, ಮಂತ್ರಿಗಳಾಗಿ ಬಂದವರು ಬರಿ ಭರವಸೆಗಳನ್ನು ಕೊಟ್ಟು ಹೋದರೆ ವಿನಃ ಯಾವ ಅಭಿವೃದ್ದಿಯೂ ಆಗಿಲ್ಲ ಎಂದು ಜನ ಬೇಸರಪಟ್ಟುಕೊಳ್ಳುತ್ತಿದ್ದುದನ್ನು ಗಮನಿಸಿ ಕಾರ್ಯೋನ್ಮುಖನಾಗಿದ್ದೇನೆ. ರಸ್ತೆ, ನೀರು, ವಿದ್ಯುತ್ ಪೂರೈಸಿದ್ದೇನೆ. ಬ್ರಿಟೀಷರ ಕಾಲದ ಹಳೆ ಕಟ್ಟಡಗಳನ್ನು ಕೆಡವಿ ಗುಣಮಟ್ಟದ ಶಾಲಾ-ಕಾಲೇಜುಗಳನ್ನು ಕಟ್ಟಿಸಿದ್ದೇನೆ. ತಾಲೂಕಿಗೆ ಹದಿಮೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದರಿಂದ ಬಡ ಮಕ್ಕಳು ಎಲ್‍ಕೆಜಿ.ಯಿಂದ ಪಿಯುಸಿ ವರೆಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬಹುದಾಗಿದೆ ಎಂದರು.

ಹೊಸದುರ್ಗ ಕನಕಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ಉನ್ನತ ಶಿಕ್ಷಣ ಬಡವರ ಮಕ್ಕಳಿಗೆ ಸಿಗುತ್ತಿಲ್ಲವೆನ್ನುವುದನ್ನು ಮನಗಂಡು ಶಾಸಕ ಡಾ.ಎಂ.ಚಂದ್ರಪ್ಪನವರು ತಾಳಿಕಟ್ಟೆ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿಸಿರುವುದು ದೊಡ್ಡ ಸಾಧನೆ. ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಹುಡುಕಿದರೂ ಇಂತಹ ಶಾಸಕರು ನಿಮಗೆ ಸಿಗುವುದಿಲ್ಲ ಎಂದು ಹೇಳಿದರು.

ರೇವಣಸಿದ್ದನ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲಿಯವರೆಗೂ ನೀವುಗಳು ಶ್ರದ್ದೆಯಿಂದ ಮಾಡುವುದಿಲ್ಲವೋ ಅಲ್ಲಿಯತನಕ ನಿಮಗೆ ಒಳ್ಳೆಯ ಭವಿಷ್ಯವಿಲ್ಲ. ಅದಕ್ಕಾಗಿ ಪ್ರತಿ ವರ್ಷವೂ ರೇವಣಸಿದ್ದರ ಜಯಂತಿಯನ್ನು ಆಚರಿಸಿ. ಗುಡಿಗೌಡ್ರು ಕುರುಬ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ಅವರುಗಳ ಮುಂದಾಳತ್ವದಲ್ಲಿ ಕಾರ್ಯಕ್ರಮಗಳು ನಡೆಯಬೇಕೆಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಬಿ.ಗಂಗಾಧರ್, ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ರೇವಣಯ್ಯ ಒಡೆಯರ್, ಗುರಯ್ಯ ಒಡೆಯರ್, ನುಲೆನೂರು ಶೇಖರ್, ಡಿ.ಚಂದ್ರಪ್ಪ, ನಾಗರಾಜಪ್ಪ, ಚಂದ್ರಮೌಳಿ, ಚಿಕ್ಕಪ್ಪ, ರುದ್ರಸ್ವಾಮಿ, ಕುಮಾರ್, ಆರ್.ಹಳ್ಳಪ್ಪ, ನಾಗಪ್ಪ, ಗೋವಿಂದಪ್ಪ, ಚಂದ್ರಪ್ಪ, ರಾಮಮೂರ್ತಿ, ಮರಿಗೆಂಚಪ್ಪ, ಜಗದೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಕ ವ್ಯಸನದ ವಿರುದ್ದ ಜಾಗೃತ ರನ್
ನಾಡು ನುಡಿ ಬಗ್ಗೆ ಗಮನಾರ್ಹ ಸಾಧನೆ: ರವಿ ದಳವಾಯಿ