* ಅನಂತಕುಮಾರ್
ರಾಜ್ಯ ಸರ್ಕಾರ ನಗರದಲ್ಲಿ ಸುಮಾರು ೧೦ ಕೋ. ರು. ವೆಚ್ಚದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಅಸ್ತು ಎಂದಿದ್ದು, ಸಿದ್ಧತೆಗಳು ನಡೆದಿವೆ. ಪರಿಣಾಮ ತಾಲೂಕಿನಲ್ಲಿ ಭವಿಷ್ಯದಲ್ಲಿ ಮೀನು ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಇದಕ್ಕೆ ಮೀನುಗಾರಿಕೆ ಇಲಾಖೆ ಸಹ ಪೂರಕವಾಗಿ ಸನ್ನದ್ಧವಾಗಬೇಕಿದೆ.
ಇದರಿಂದಾಗಿ ಮೂಲ ಮೀನು ಸಾಕಾಣಿಕೆ ಹಾಗೂ ಮಾರಾಟ, ಸಾಗಾಣಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಮತ್ತು ಮೀನು ಕೃಷಿ ಕೈಗೊಳ್ಳುತ್ತಿರುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಹಲವಾರು ಕಾರಣಗಳಿಂದ ಈ ವ್ಯಾಪ್ತಿಯಲ್ಲಿ ಪ್ರಸ್ತುತ ನಿರೀಕ್ಷಿತ ಮಟ್ಟದಲ್ಲಿ ಮೀನು ಉತ್ಪಾದನೆ ಸಾಧ್ಯವಾಗುತ್ತಿಲ್ಲ.ಮೀನು ಸಾಕಾಣಿಕೆ, ಮಾರಾಟ ಮತ್ತು ಸಾಗಾಣಿಕೆ ಹಾಗೂ ಕೃಷಿ ಮೀನುಗಾರಿಕೆಯಿಂದ ಒಟ್ಟು ಸುಮಾರು ೬ ಸಾವಿರಕ್ಕೂ ಹೆಚ್ಚು ಜನರು ಬದುಕು ಕಟ್ಟಿಕೊಂಡಿ ದ್ದಾರೆ. ಪ್ರಸ್ತುತ ಹೊರ ರಾಜ್ಯದ ಮೀನು ಸ್ಥಳೀಯ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿದ್ದು, ಬಹಳಷ್ಟು ಜನರ ಬದುಕಿಗೆ ಆಧಾರವಾಗಿದೆ. ಇದನ್ನು ರಾಜ್ಯ ಸರ್ಕಾರ ಮನಗಂಡು ಈ ವ್ಯಾಪ್ತಿಯಲ್ಲಿ ಮೀನು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಇನ್ನು, ಮೀನುಗಾರಿಕೆ ಇಲಾಖೆ ತಾಲೂಕಿನ ಬಿಆರ್‌ಪಿಯಲ್ಲಿ ಅತಿದೊಡ್ಡ ಮೀನು ಮರಿ ಉತ್ಪಾದನೆ ಹಾಗೂ ತರಬೇತಿ ಕೇಂದ್ರ ಹೊಂದಿದ್ದು, ಸಾಕಾಣಿಕೆ ವೃತ್ತಿಯಲ್ಲಿ ತೊಡಗಿರುವವರು ಹಾಗೂ ರೈತರು ಈ ಕೇಂದ್ರದಿಂದ ಮೀನು ಮರಿಗಳನ್ನು ಪಡೆದು ಕೊಳ್ಳಬಹುದಾಗಿದೆ. ಅಲ್ಲದೆ ಇಲಾಖೆಯ ಸ್ಥಳೀಯ ಕೇಂದ್ರಗಳಲ್ಲಿ ಮೀನು ಮರಿಗಳನ್ನು ತಂದು ಸುಮಾರು ೪೫ ರಿಂದ ೬೦ ದಿನಗಳವರೆಗೆ ಪಾಲನೆ ಮಾಡುವ ಮೂಲಕ ಬಿತ್ತನೆಗೆ ನೀಡಲಾಗುತ್ತಿದೆ. ವರ್ಷದಲ್ಲಿ ಸುಮಾರು ೧೦ ತಿಂಗಳ ಕಾಲ ಈ ಕಾರ್ಯ ನಡೆಯುತ್ತಿದೆ.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್ ಮಾತನಾಡಿ, ಇಲಾಖೆ ವತಿಯಿಂದ ಮೀನು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇಲಾಖೆಯ ಅಧೀನದಲ್ಲಿರುವ ಕೆರೆಗಳಲ್ಲಿ ಮೀನು ಸಾಕಾಣಿಕೆಗೆಯಲ್ಲಿ ಹಾಗೂ ಕೃಷಿ ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಅಗತ್ಯವಿರುವ ಮೀನು ಮರಿಗಳನ್ನು ಪೂರೈಸಲಾಗುತ್ತಿದೆ. ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಿಗಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ತಲುಪಿಸಲಾಗುತ್ತಿದೆ ಎಂದರು.