ಕನ್ನಡಪ್ರಭ ವಾರ್ತೆ ಭದ್ರಾವತಿ
ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ 2024-25ನೇ ಸಾಲಿನ ಆಯವ್ಯಯ ಮಂಡಿಸಿದ್ದು, ನಿರೀಕ್ಷಿತ ಪ್ರಾರಂಭಿಕ ಶುಲ್ಕ 4167.82 ಲಕ್ಷ, ನಿರೀಕ್ಷಿತ ಒಟ್ಟು ಜಮಾ 11207.21 ಲಕ್ಷ, ನಿರೀಕ್ಷಿತ ಒಟ್ಟು ಜುಮ್ಲಾ 15375.03 ಲಕ್ಷ ರು. ಗಳಾಗಿದ್ದು, ನಿರೀಕ್ಷಿತ ಒಟ್ಟು ಖರ್ಚು 11205.93 ಗಳಾಗಿರುತ್ತದೆ. ನಿರೀಕ್ಷಿತ ಅಖೈರು ಶಿಲ್ಕು 4169.10ಲಕ್ಷ ಗಳಾಗಿದ್ದು, ಒಟ್ಟು 128.00 ಲಕ್ಷ ರು. ಉಳಿತಾಯವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕಳೆದ ಸಾಲಿನ ವಾಸ್ತವ ಅದಾಯ ಮತ್ತು ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಈ ಬಾರಿಯ ಆಯವ್ಯಯ ತಯಾರಿಸಲಾಗಿದೆ. ನಗರಸಭೆ ಕಚೇರಿ ಆಡಳಿತ ಪಾರದರ್ಶಕ ವಾಗಿಸಲು ಹಾಗೂ ತ್ವರಿತ ಸೇವೆ ಒದಗಿಸಲು ಇ-ಆಫೀಸ್ ತಂತ್ರಾಂಶದ ಮೂಲಕ ನಾಗರೀಕ ಸ್ನೇಹಿ ಆಡಳಿತ ನಡೆಸಲಾಗುತ್ತಿದೆ. ಸರ್ವರಿಗೂ ಸೂರು ಪರಿಕಲ್ಪನೆಯಡಿಯಲ್ಲಿ ವಸತಿರಹಿತ ನಿರಾಶ್ರಿತರಿಗೆ ಆಶ್ರಯ ತಂಗುದಾಣ ಪ್ರಾರಂಭಿಸಿದ್ದು, ಗುಣಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.ನಗರದ ಸ್ತ್ರೀ ಸಶಕ್ತಿಕರಣಗೊಳಿಸುವ ಉದ್ದೇಶದಿಂದ ರಚಿಸಲಾದ ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ಸರ್ಕಾರದ ಪ್ರೋತ್ಸಾಹಧನ ನೀಡಿ ಸಬಲೀಕರಣಗೊಳಿಸಲಾಗುತ್ತಿದೆ. ನಗರದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಉತ್ತೇಜಿಸಲು ನಗರಸಭೆಯಿಂದ ಕ್ರೀಡಾ ಪ್ರೋತ್ಸಾಹಧನ ನೀಡ ಲಾಗುತ್ತಿದೆ. ಕಚೇರಿ ದಾಖಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಾಖಲಾತಿ ಕೊಠಡಿ ವಿಸ್ತರಿಸಿ ಸುರಕ್ಷತೆಗೆ ಕ್ರಮವಹಿಸಲಾಗಿದೆ ಎಂದರು.
ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ರೈಲ್ವೆ ನಿಲ್ದಾಣದ ರಸ್ತೆಗೆ ಡಾ.ರಾಜ್ ಕುಮಾರ್ ಎಂದು ನಾಮಕರಣಗೊಳಿಸಬೇಕು. ತ್ವರಿತವಾಗಿ ಕ್ರಮಕೈಗೊಳ್ಳುವುದರ ಜೊತೆಗೆ ಎಲ್ಲಾ ಅಂಗಡಿಗಳ ನಾಮಫಲಕದಲ್ಲಿ ರಾಜ್ ಕುಮಾರ್ ರಸ್ತೆ ಎಂದು ಬರೆಸಲು ಸೂಚಿಸಲು ತಿಳಿಸಿದರು.
ಕಾಯಂ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಗೆ ಜಿ+3 ಮಾದರಿಯ ಗುಂಪು ಮನೆ ನಿರ್ಮಾಣ ಪೂರ್ಣಗೊಂಡು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು. ನಗರದ ವಿವಿಧೆಡೆ ಪ್ರಮುಖ ರಸ್ತೆಗಳಲ್ಲಿ ಡೆಕೋರೇಟಿವ್ ಕೊನಿಕಲ್ ಎಲೆಕ್ಟ್ರಿಕಲ್ ಪೋಲ್ ಅಳವಡಿಸಿ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು. ಕನಕ ಮಂಟಪ ಮೈದಾನದ ಹತ್ತಿರ ನಗರಸಭೆ ಅಧಿಕಾರಿಗಳು ಮತ್ತು ನೌಕರರಿಗೆ ಜಿ+3 ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು. ನಗರದ ವಿವಿಧೆಡೆ ಪ್ರಮುಖ ರಸ್ತೆಗಳಲ್ಲಿ ಪುಟ್ ಪಾತ್ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು.ಅಮೃತ್ 1.0 ಮತ್ತು ಕೆ.ಎಂ.ಆರ್.ಪಿ ಯೋಜನೆಯಡಿ ಚರಂಡಿ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವುದು.* ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ವಿಶ್ವಾಸ - ನಗರದ ವಿವಿಧಡೆ ಸೈಕಲ್ ಟ್ರ್ಯಾಕ್ ಮತ್ತು ಫುಟ್ ಪಾತ್ ನಿರ್ಮಾಣ ಹಾಗು ಮೈಸೂರಿನಲ್ಲಿರುವ ಸೈಕಲ್ ಟ್ರ್ಯಾಕ್ ಮಾದರಿಯಂತೆ ನ್ಯೂಟೌನ್ ಮಹಾತ್ಮ ಗಾಂಧಿ ಉದ್ಯಾನವನದ ಸುತ್ತಲೂ ಸೈಕಲ್ ಟ್ರ್ಯಾಕ್ ನಿರ್ಮಾಣ,ಮಾಧವ ನಗರ ಅಥವಾ ಜಟ್ ಪಟ್ ನಗರದಲ್ಲಿ ಹಾಗೂ ಬುಳ್ಳಾಪುರದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಬೊಮ್ಮನಕಟ್ಟೆ, ರಂಗಪ್ಪ, ಶಿವಾಜಿ, ಹೊಳೆಹೊನ್ನೂರು ಸೇರಿದಂತೆ ಪ್ರಮುಖ ವೃತ್ತಗಳನ್ನು ಅಭಿವೃದ್ಧಿ, ನಗರದ ಎಂ.ಎಂ ಕಾಂಪೌಂಡ್ ಹತ್ತಿರದಿಂದ ಜಟ್ ಪಟ್ ನಗರದವರೆಗೆ ಭದ್ರಾ ನದಿಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇನ್ನು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು 2 ಫ್ಯಾಬ್ರಿಕೇಟೆಡ್ ವಿಶ್ರಾಂತಿ ಕೊಟ್ಟಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.