ಕನ್ನಡಪ್ರಭ ವಾರ್ತೆ ಮಡಿಕೇರಿ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ನಾಗರಿಕರಿಗೆ ಚೆಸ್ಕಾಂ ಸಾವಿರ ಸಾವಿರ ರುಪಾಯಿ ಬಿಲ್ಲು ಕೊಟ್ಟ ಪ್ರಕರಣ ಮಡಿಕೇರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅವ್ಯವಹಾರ ನಡೆದಿದೆ. ಬಡ ಜನರ ಬಾಳಿಗೆ ಬೆಳಕಾಗಲಿ ಎಂಬ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಬೆಳಕು ಯೋಜನೆ ಜಾರಿಗೆ ತಂದಿದೆ. ಆದರೆ ಇಲ್ಲಿ ಬಡವರ ಮನೆಗೆ ಇನ್ನೂ ವಿದ್ಯುತ್ ಸಂಪರ್ಕವೇ ಬಂದಿಲ್ಲ. ಮೀಟರ್ ಬೋರ್ಡ್ ಕೂಡ ಹಾಕಿಲ್ಲ. ಕರೆಂಟ್ ಕಂಬ ಕೂಡ ಹಾಕಿಲ್ಲ. ಆದರೆ ಚೆಸ್ಕಾಂನಿಂದ ಈ ಬಡವರಿಗೆ ವಿದ್ಯುತ್ ಬಿಲ್ ಕಟ್ಟಿ ಅಂತ ಸಾವಿರಾರು ರು. ಬಿಲ್ ಬಂದಿದೆ. ಚೆಸ್ಕಾಂನ ಕೆಲವು ಕಾಣದ ಕೈಗಳು ಇಲ್ಲಿ ಭಾರೀ ಗೋಲ್ಮಾಲ್ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಚೆಸ್ಕಾಂ ದಾಖಲೆಗಳಲ್ಲಿ ಈ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದಿದ್ದರೂ, ವಾಸ್ತವವಾಗಿ ಇವರ ಮನೆಗಳಿಗೆ ಇನ್ನೂ ಬೆಳಕು ಯೋಜನೆಯೇ ಬಂದಿಲ್ಲ. ಹಾಗಾದರೆ ಇವರ ಹೆಸರಲ್ಲಿ ಬಂದ ಲಕ್ಷಾಂತರ ರು. ಮೌಲ್ಯದ ವಿದ್ಯುತ್ ಕಂಬಗಳು, ವಿದ್ಯುತ್ ವೈರ್ಗಳು ಮೀಟರ್ ಬೋರ್ಡ್ಗಳು ಎಲ್ಲಿ ಹೋದವು ಎಂಬುದೇ ಇದೀಗ ಎಲ್ಲರ ಪ್ರಶ್ನೆ. ಇದೀಗ ಬಿಲ್ ಪಡೆದ ಇಲ್ಲಿನ 12 ಮಂದಿ ಫಲಾನುಭವಿಗಳು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇವರಿಗೆಲ್ಲ 1000ರಿಂದ 3000 ರು. ತನಕ ವಿದ್ಯುತ್ ಬಿಲ್ ಬಂದಿದೆ. ತಮಗೆ ವಿದ್ಯುತ್ ಸಂಪರ್ಕವೇ ಇಲ್ಲ ಎಂದಾದಲ್ಲಿ ಬಿಲ್ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಆದರೆ ಚೆಸ್ಕಾಂ ಸಿಬ್ಬಂದಿ ಮಾತ್ರ ವಿದ್ಯುತ್ ಬಿಲ್ ಕಟ್ಟಿ ಇಲ್ಲದಿದ್ದರೆ ಮೀಟರ್ ಬೋರ್ಡ್ ಸಂಪರ್ಕ ಕಟ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲದ ಮೀಟರ್ ಬೋರ್ಡ್ನಿಂದ ಸಂಪರ್ಕ ಹೇಗೆ ಕಟ್ ಮಾಡುತ್ತಾರೆ ಎಂಬುದು ತಮಾಷೆಯ ವಿಚಾರ. ಆದ್ದರಿಂದ ಈ ಪ್ರಕರಣವನ್ನು ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಮನೆಗಳಿಗೆ ಬೆಳಕು ಯೋಜನೆಯಡಿಯಲ್ಲಿ ವಿದ್ಯುತ್ ನೀಡಲಾಗಿಲ್ಲ. ಆದರೆ ಈ ಮನೆಗಳಿಗೆ ಸಾವಿರಾರು ರುಪಾಯಿ ಬಿಲ್ ಬರುತ್ತಿದೆ. ವಿದ್ಯುತ್ ಇಲ್ಲದೆ ಬಿಲ್ ಕಟ್ಟುವುದು ಹೇಗೆ? ಆದ್ದರಿಂದ ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು.-ಕಾಳನ ರವಿ, ಅಧ್ಯಕ್ಷ, ಭಾಗಮಂಡಲ ಗ್ರಾ.ಪಂ.