ಕಾಂಗ್ರೆಸ್, ಬಿಜೆಪಿಯಿಂದ ಭಗತ್ ಸಿಂಗ್ ಕನಸುಗಳಿಗೆ ದ್ರೋಹ

KannadaprabhaNewsNetwork |  
Published : Sep 29, 2025, 01:02 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್       | Kannada Prabha

ಸಾರಾಂಶ

ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಭಗತ್ ಸಿಂಗ್ ಜನ್ಮ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾಂಗ್ರೆಸ್ ಬಿಜೆಪಿ ಸೇರಿದಂತೆ ದೇಶದ ಎಲ್ಲಾ ಬಂಡವಾಳಶಾಹಿ ಪಕ್ಷಗಳು ಭಗತ್ ಸಿಂಗ್ ಒಳಗೊಂಡು ಸ್ವಾತಂತ್ರ‍್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ಎಲ್ಲಾ ಹೋರಾಟಗಾರರ ಕನಸುಗಳಿಗೆ ದ್ರೋಹ ಎಸಗಿವೆ ಎಂದು ಎಐಟಿಯುಸಿ ಸಂಚಾಲಕ ರವಿಕುಮಾರ್ ಆರೋಪ ಮಾಡಿದರು.

ಭಗತ್ ಸಿಂಗ್ ಅವರ 119 ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಭಾನುವಾರ ಚಿತ್ರದುರ್ಗ ನಗರದ ಒನಕೆ ಒಬವ್ವ ಜಿಲ್ಲಾ ಕ್ರೀಡಾಂಗಣ, ಚಂದ್ರವಳ್ಳಿ ಆವರಣ, ಭಗತ್ ಉದ್ಯಾನವನ ಸೇರಿದಂತೆ ಹಲವು ಬಡಾವಣೆಯಲ್ಲಿ ಏರ್ಪಡಿಸಿ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಗತ್ ಸಿಂಗ್ ಅವರು ಕ್ರಾಂತಿ ಮತ್ತು ಸ್ವಾತಂತ್ರ‍್ಯದ ಬಗೆಗಿನ ತಮ್ಮ ವಿಚಾರವನ್ನು ಎಲ್ಲ ಕಡೆ ಪ್ರಬಲವಾಗಿ ಹರಡಿದ್ದರು. ಅಂದು ಸಾವಿರಾರು ಜನ ಭಗತ್ ಸಿಂಗ್ ಅವರ ಆಶಯವನ್ನು ಈಡೇರಿಸಲು ಪ್ರಾಣತ್ಯಾಗಕ್ಕೆ ಸಿದ್ಧರಾಗಿ ಬೀದಿಗಿಳಿದಿದ್ದರು ಎಂದರು.

ಭಗತ್ ಸಿಂಗ್ ಅವರ ಪ್ರಕಾರ ಸ್ವಾತಂತ್ರ‍್ಯದ ಪರಿಕಲ್ಪನೆ ಬೇರೆಯದೇ ಆಗಿತ್ತು.ಕೇವಲ ಸ್ವಾತಂತ್ರ‍್ಯ ಪಡೆಯುವುದು ನಮ್ಮ ಉದ್ದೇಶವಲ್ಲ. ಬ್ರಿಟೀಷರಿಂದ ಪಡೆದ ಸ್ವಾತಂತ್ರ್ಯ ನಮ್ಮ ದೇಶದ ಕೆಲವೇ ಕೆಲವು ಶ್ರೀಮಂತ ವರ್ಗಕ್ಕೆ ವರ್ಗಾವಣೆಯಾದರೆ, ಅದು ನಿಜವಾದ ಸ್ವಾತಂತ್ರ್ಯ ವಾದೀತೇ ಎಂದು ಸದಾ ಪ್ರಶ್ನಿಸುತ್ತಿದ್ದರು.

ಯಾವ ರಾಷ್ಟ್ರ ತನ್ನೆಲ್ಲ ಜನರಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡುತ್ತದೆಯೋ, ಯಾವ ರಾಷ್ಟ್ರಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದಿಲ್ಲವೋ, ಯಾವ ರಾಷ್ಟ್ರಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೋ ಅಂತಹ ರಾಷ್ಟ್ರ ನಮ್ಮದಾಗಬೇಕೆಂದು ಅವರು ಬಯಸಿದ್ದರೆಂದರು.

ಭಗತ್ ಸಿಂಗ್ ಮಾನವನ ಜೀವನವನ್ನು ಪ್ರೀತಿಸಿದರು ಮತ್ತು ಮಾನವನ ಘನತೆಯನ್ನು ಎತ್ತಿಹಿಡಿದರು. ದುರಂತವೆಂದರೆ, ಇಂದಿಗೂ ಕೂಡ ದೇಶದಲ್ಲಿ ದಿನನಿತ್ಯ ಮಾನವರ ಘನತೆಯ ಹರಣವಾಗುತ್ತಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆ. ಹಸಿವು, ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳು ಸಮಾಜದಲ್ಲಿ ತಾಂಡವವಾಡುತ್ತಿದೆ. ಬೆರಳೆಣಿಕೆಯ ಕಾರ್ಪೊರೇಟ್ ಮನೆತನಗಳ ಹಿಡಿತದಲ್ಲಿರುವ ದೇಶದ ಬಂಡವಾಳಶಾಹಿ ವ್ಯವಸ್ಥೆ ಅವಿಶ್ರಾಂತವಾಗಿ ದುಡಿಯುವ ರೈತ ಕಾರ್ಮಿಕರು ಹಾಗೂ ಜನಸಾಮಾನ್ಯರ ಬದುಕನ್ನು ಅಸಹನೀಯಗೊಳಿಸಿದೆ. ಕೆಲವು ಜನರ ಸಂಪತ್ತು ಸಹಸ್ರ ಕೋಟಿಗಳಲ್ಲಿ ಹೆಚ್ಚುತ್ತಿದ್ದರೆ ಬಹುಪಾಲು ಜನರು ತೀವ್ರ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂದರು.

ತೀವ್ರ ಅಸಮಾನತೆಯು ತುಂಬಿರುವ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯ ವಿರುದ್ಧ ದೇಶದ ವಿದ್ಯಾರ್ಥಿ, ಯುವಕರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಜಾತಿ ಧರ್ಮ ಭಾಷೆ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜವನ್ನು ಒಡೆಯುವ ಷಡ್ಯಂತರವನ್ನು ಸೋಲಿಸಿ ನಾವು ಇಂದು ಭಗತ್ ಸಿಂಗರ ಚಿಂತನೆಗಳನ್ನು ಅರಿತು ಕೊಳ್ಳಬೇಕಿದೆ. ಕ್ರಾಂತಿಯೆಂದರೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಿತ್ತೊಗೆದು ಸಮಾಜವಾದಿ ವ್ಯವಸ್ಥೆಯ ಸ್ಥಾಪನೆ. ಕೋಮುವಾದವು ಜನಗಳ ಆರ್ಥಿಕ ಪರಿಸ್ಥಿತಿಯೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಭಗತ್ ಸಿಂಗ್ ಗಮನಿಸಿದರು ಮತ್ತು ಧರ್ಮವನ್ನು ರಾಜಕೀಯದಿಂದ ಹೊರಗಿಡಬೇಕು ಎಂದರು.

ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ, ಹಸಿವು, ಬಡತನ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಸಮಸ್ಯೆಗಳನ್ನು ತಡೆಯಲು ಹಾಗೂ ಶಿಕ್ಷಣ-ಮಾನವತೆ-ಸಂಸ್ಕೃತಿ ಉಳಿಸಲು ,ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಭಗತ್ ಸಿಂಗ್ ಅವರ ವಿಚಾರಗಳಿಂದ ಸ್ಫೂರ್ತಿಪಡೆದು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಳ್ಳಲು ಯವಕರು ಮುಂದೆ ಬರಬೇಕು ಎಂದರು.

ಎಐಡಿವೈಒ ಜಿಲ್ಲಾ ಸಂಚಾಲಕ ಕೃಷ್ಣ, ಸದಸ್ಯರಾದ ಭರತ್, ಶಿವಕುಮಾರ್, ಎಐಡಿಎಸ್‌ಓ ಜಿಲ್ಲಾ ಸಂಚಾಲಕ ಮಹಾಂತೇಶ್, ಎಐಎಂಎಸ್‌ಎಸ್ ಸಹ ಸಂಚಾಲಕರಾದ ಕುಮುದ, ಗಿರಿಜಮ್ಮ , ಗುರುಶಾಂತ, ಲಕ್ಷ್ಮಿ, ನಿಶಾನ್, ಭುವನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಗತ್ ಸಿಂಗ್ ಅವರ 119 ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಒನಕೆ ಒಬವ್ವ ಜಿಲ್ಲಾ ಕ್ರೀಡಾಂಗಣ, ಚಂದ್ರವಳ್ಳಿ ಆವರಣ, ಭಗತ್ ಉದ್ಯಾನವನ ಸೇರಿದಂತೆ ಹಲವು ಬಡಾವಣೆ, ಹಾಸ್ಟೆಲ್ ಮುಂತಾದೆಡೆ ಎಐಡಿಎಸ್ಓ, ಎಐಡಿವೈಓ ಹಾಗೂ ಎಐಎಮ್ಎಸ್ಎಸ್ ಸಂಘಟನೆಗಳಿಂದ ಭಗತ್ ಸಿಂಗ್ ಸಭೆ ನಡೆಸಲಾಯಿತು. ಸಂಘಟನೆಗಳ ಕಚೇರಿಯಲ್ಲಿ ದಿ ಲಿಜೆಂಡ್ ಆಫ್ ಭಗತ್ ಸಿಂಗ್ ಸಿನಿಮಾ ಪ್ರದರ್ಶನ ಆಯೋಜಿಸಲಾಯಿತು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ