ಎಲ್ಲರೂ ಅಧ್ಯಯನ ಮಾಡಬೇಕಾದ ಗ್ರಂಥ ಭಗವದ್ಗೀತೆ: ಡಾ. ಶಂಕರ ಭಟ್ ಬಾಳಿಗದ್ದೆ

KannadaprabhaNewsNetwork |  
Published : May 18, 2026, 03:30 AM IST
ಕಾಸರಗೋಡಿನ ಗೀತಾ ಜ್ಞಾನ ಯಜ್ಞ ಟ್ರಸ್ಟಿನ 11ನೇ ಸ್ನೇಹ ಸಮ್ಮೇಳನ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಸರ್ವ ವೇದಗಳ ಸಾರ ಭಗವದ್ಗೀತೆ. ಮಾತೃ ಹೃದಯವನ್ನು ಅಂತರ್ಗತ ಮಾಡಿಕೊಂಡ ವಾತ್ಸಲ್ಯಪೂರ್ಣ ಅಮೃತ ವಾಣಿ. ಜಾತಿ, ಧರ್ಮ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ಅಧ್ಯಯನ ಮಾಡುವ ಮಹತ್ವದ ಗ್ರಂಥವಾಗಿದೆ.

ಕಾಸರಗೋಡಿನ ಗೀತಾ ಜ್ಞಾನ ಯಜ್ಞ ಟ್ರಸ್ಟಿನ 11ನೇ ಸ್ನೇಹ ಸಮ್ಮೇಳನ ಉದ್ಘಾಟನೆ

ಕನ್ನಡ ಪ್ರಭಾ ವಾರ್ತೆ ಯಲ್ಲಾಪುರ

ಸರ್ವ ವೇದಗಳ ಸಾರ ಭಗವದ್ಗೀತೆ. ಮಾತೃ ಹೃದಯವನ್ನು ಅಂತರ್ಗತ ಮಾಡಿಕೊಂಡ ವಾತ್ಸಲ್ಯಪೂರ್ಣ ಅಮೃತ ವಾಣಿ. ಜಾತಿ, ಧರ್ಮ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ಅಧ್ಯಯನ ಮಾಡುವ ಮಹತ್ವದ ಗ್ರಂಥವಾಗಿದೆ. ಇದು ನಿತ್ಯಾನುಷ್ಠಾನದ ಜೀವನ ಪದ್ಧತಿಯಾಗಬೇಕಾಗಿದೆ ಎಂದು ಹಿರಿಯ ವಿದ್ವಾಂಸ ಡಾ. ಶಂಕರ ಭಟ್ ಬಾಳಿಗದ್ದೆ ಹೇಳಿದರು.

ಭಾನುವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಕಾಸರಗೋಡಿನ ಗೀತಾ ಜ್ಞಾನ ಯಜ್ಞ ಟ್ರಸ್ಟಿನ 11ನೇ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಗೀತೆ ವಿಶ್ವ ಭ್ರಾತೃತ್ವ ಜೋಡಿಸುತ್ತದೆ ಎಂದು ಪಾಶ್ಚಿಮಾತ್ಯ ವಿದ್ವಾಂಸರೇ ಹೇಳಿದ್ದಾರೆ. ಸ್ವರ್ಣವಲ್ಲಿ ಶ್ರೀ ಗಳು ನಾಡಿನಾದ್ಯಂತ 2017ರಲ್ಲಿ ಗೀತಾಭಿಯಾನ ಪ್ರಾರಂಭಿಸಿದ್ದರು. ಗಾಂಧೀಜಿ ಕೂಡ ಅಮೃತ ಸದೃಶವಾದದ್ದು ಎಂದು ಹೇಳಿದ್ದಾರೆ. ಅದಕ್ಕೆ ಭವಸಾಗರ ದಾಟಿಸುವ ಶಕ್ತಿ ಇದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಸರಗೋಡಿನ ಗೀತಾ ಜ್ಞಾನ ಯಜ್ಞ ಟ್ರಸ್ಟಿನ ಪ್ರಧಾನ ಗುರು ಸುಬ್ರಾಯ ನಂದೋಡಿ ಮಾತನಾಡಿ, ನಾವಿಂದು ಎಲ್ಲಾ ನಕಾರಾತ್ಮಕ ಚಿಂತನೆ ತುಂಬಿಕೊಂಡು ಮನೆ, ಸಮಾಜ, ದೇಶದ ಆರೋಗ್ಯ ಹಾಳು ಮಾಡುತ್ತಿದ್ದೇವೆ. ಮನಸ್ಸೇ ಎಲ್ಲದಕ್ಕೂ ಕಾರಣ. ದೇವರು ನಮಗೆ ಎಲ್ಲವನ್ನು ಕೊಟ್ಟಿದ್ದಾನೆ ಆದರೂ ಬೇಡುತ್ತಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಗೀತೆಯೊಂದೇ ಪರಿಹಾರ ನೀಡಬಲ್ಲದು. ಪ್ರತಿ ಮನೆಗಳಲ್ಲಿ ನಿತ್ಯವೂ ಪಾರಾಯಣವಾಗಲೇ ಬೇಕು. ಬೇರೆಯವರ ವಿಷಯ ತೆಗೆದುಕೊಂಡು ವ್ಯರ್ಥ ಕಾಲಹರಣ ಮಾಡುವ ಬದಲಿಗೆ ಬೆಳಿಗ್ಗೆ ಮತ್ತು ಸಂಜೆ ಪಾರಾಯಣದ ನಂತರ ಶಂಖ ನಾದವನ್ನು ಮೊಳಗಿಸಿ ಎಂದ ಅವರು, ನಾವು ಕುಟುಂಬದಿಂದ ದೂರವಾಗುತ್ತಿದೇವೆ. ಪ್ರತಿಭಾ ಪಲಾಯನ, ಸಾಂಸ್ಕೃತಿಕ ದಾಳಿ ಇವೆಲ್ಲವುಗಳನ್ನು ಎದುರಿಸಲು ನಮ್ಮ ಮಕ್ಕಳಿಗೆ ನಿತ್ಯವೂ ಗೀತೆಯನ್ನು ಪಾರಾಯಣ ಮಾಡುವ ಪದ್ಧತಿಯನ್ನು ಜಾರಿಗೆ ತನ್ನಿ. ಆಗ ದೇಶವೂ ಹಾಳಾಗದು ಎಂದರು.

ಚಿಂತಕ ದಿವಾಕರ್ ಹೆಗಡೆ ಮಾತನಾಡಿ, ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಭಗವದ್ಗೀತೆ ಯಾವುದೇ ಮತೀಯ ಪುಸ್ತಕವಾಗಿರದೆ ವ್ಯಕ್ತಿತ್ವ ನಿರ್ಮಾಣ ಮಾಡುವ, ಮನೋಸ್ಥೈರ್ಯ ಹೆಚ್ಚಿಸುವ ಗ್ರಂಥವಾಗಿದೆ ಎಂದರು.

ತಜ್ಞ ವೈದ್ಯೆ ಡಾ. ಸೌಮ್ಯ ಕೆ.ವಿ. ಗೀತಾ ಮಹಾತ್ಮೆ ಮತ್ತು ಗೀತಾ ಜ್ಞಾನ ಸುಧಾ ಎಂಬ 2 ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ ವಸುದೈವ ಕುಟುಂಬಕಂ ಎಲ್ಲರೂ ಚೆನ್ನಾಗಿರಬೇಕು ಎಂಬುದೇ ಭಾರತೀಯ ಸಂಸ್ಕೃತಿ. ಆ ದೃಷ್ಟಿಯಿಂದ ಬಿಡುಗಡೆಗೊಂಡ ಈ 2 ಗ್ರಂಥಗಳು ನಮ್ಮ ಬದುಕಿಗೆ ಮಾರ್ಗದರ್ಶನ ನೀಡಬಲ್ಲದು ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಧರ್ಮವನ್ನು ಕಾಪಾಡುವ ದೃಷ್ಟಿಯಲ್ಲಿ ಗೀತಾ ಜ್ಞಾನ ಯಜ್ಞ ಸಾವಿರಾರು ಮಹಿಳೆಯರನ್ನು ಈ ಯಜ್ಞದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಧರ್ಮ ಉಳಿದರೆ ಎಲ್ಲವೂ ಉಳಿಯುತ್ತದೆ. ಎಲ್ಲರಿಗೂ ಶಾಂತಿ, ನೆಮ್ಮದಿ ದೊರಕಲಿ ಎಂದರು.

ಜಯಲಕ್ಷ್ಮಿ ಶಿಗೇಪಾಲ ಮತ್ತು ವಾಣಿ ಸಂಗಡಿಗರಿಂದ ಸ್ವಾಗತ ಗೀತೆ. ಮಾದೇವಿ ಭಟ್ ಮತ್ತು ಮಮತಾ ಭಟ್ ನಿರ್ವಹಿಸಿದರು. ತಾಲೂಕಾ ಸಂಚಾಲಕಿ ವಿನುತಾ ಕೋಟೆಮನೆ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಸಹ ಸಂಚಾಲಕಿ ರಚನಾ ಹೆಗಡೆ ಸ್ವರ್ಣವಲ್ಲಿ ಶ್ರೀ ಗಳ ಸಂದೇಶ ವಾಚಿಸಿದರು. ಜಯಶ್ರೀ ಹೆಗಡೆ ಇಡುಗುಂದಿ ಸಂಘಟನಾ ಮಂತ್ರ ಪಠಿಸಿದರು. ಸಂಚಾಲಕಿ ಸುಜಾತಾ ಮಂಗಳೂರು ಪುಸ್ತಕ ಪರಿಚಯಿಸಿದರು. ಶಕುಂತಲಾ ಹೆಗಡೆ ಹಿರೇಸರ ಸಂಗಡಿಗರು ಧ್ಯೇಯ ಗೀತೆ ಹಾಡಿದರು. ಸಹ ಸಂಚಾಲಕಿ ಸಂಧ್ಯಾ ಕೊಂಡದಕುಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀನಕೆರೆ ಗ್ರಾಮದಲ್ಲಿ 3 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ
ಡೆಂಘೀ, ಮಲೇರಿಯಾ ಮುಕ್ತ ಜಿಲ್ಲೆಯಾಗಲು ಶ್ರಮಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ