ಕನ್ನಡಪ್ರಭ ವಾರ್ತೆ ಉಡುಪಿ
ಭಗವದ್ಗೀತೆಯು ನೀಡುವ ಸಂದೇಶಗಳನ್ನು ಪಾಲಿಸಿದಾಗ ವಿಶ್ವದ ವಿಕಾಸ ಸಾಧ್ಯ. ಹೃದಯದ ದೌರ್ಬಲ್ಯವೇ ಅಶಾಂತಿಗೆ ಕಾರಣವಾದದ್ದು. ಶ್ರೀಕೃಷ್ಣನು ಗೀತೋಪದೇಶದೊಂದಿಗೆ ಮನಸ್ಸಿನ ದೌರ್ಬಲ್ಯವನ್ನು ನಿವಾರಿಸಿಕೊಳ್ಳುವ ಸೂತ್ರವನ್ನು ನೀಡಿದ್ದಾನೆ. ಈ ನಿಟ್ಟಿನಲ್ಲಿ ವಿವಿಧ ಕರ್ತವ್ಯಗಳ ಒತ್ತಡದಲ್ಲಿರುವ ಎಲ್ಲರೂ ಗೀತಾಭ್ಯಾಸವನ್ನು ತಪ್ಪದೆ ಮಾಡಬೇಕು. ಅಶಾಂತವಾದ ಮನಸ್ಸಿಗೆ ಗೀತೆಯ ಆಶ್ರಯದಿಂದ ನೆಮ್ಮದಿ ಸಿಗುತ್ತದೆ ಎಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡಿದರು.ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠ ಮತ್ತು ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನ, ಲೋಕಭಾಷಾ ಪ್ರಚಾರ ಸಮಿತಿ ಒರಿಸ್ಸಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಭಗವದ್ಗೀತಾ ಆನ್ ಲೈನ್ ಸಮ್ಮೇಳನದ ಪ್ರಾರಂಭದಲ್ಲಿ ಪುತ್ತಿಗೆಗಳು ಸಂದೇಶ ನೀಡಿದರು.
ಮಠದ ಪ್ರಧಾನ ಕಾರ್ಯದರ್ಶಿಗಳಾದ ವಿದ್ವಾನ್ ಪ್ರಸನ್ನ ಆಚಾರ್ಯರು ಅಟ್ಲಾಂಟಾ ನಗರದಿಂದ ಈ ಸಮ್ಮೇಳನದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಶ್ರೀಪಾದರು ವಿಶ್ವದಾದ್ಯಂತ ವ್ಯಾಪಕವಾದ ಪ್ರಚಾರ ಮಾಡುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಉದ್ದೇಶವನ್ನು ತಿಳಿಸಿ, ಅಟ್ಲಾಂಟಾ ನಗರದಲ್ಲಿ ಶ್ರೀಪಾದರು ಸಂಕಲ್ಪಿಸಿರುವ ಭಗವದ್ಗೀತಾ ಕಾರ್ಯಕ್ರಮಗಳ ಪರಿಚಯವನ್ನು ಮಾಡಿಸಿದರು.ಈ ಎನ್.ಆರ್.ಐ.ಸಮ್ಮೇಳನದ ಅಧ್ಯಕ್ಷತೆಯನ್ನು ಸಾಗರೋತ್ತರ ರಾಷ್ಟ್ರಗಳಲ್ಲಿ ಪ್ರಸಿದ್ಧ ವಿದ್ವಾಂಸರಾದ ಪುತ್ತಿಗೆ ಮಠದ ಆಸ್ಥಾನ ವಿದ್ವಾಂಸ ಕೇಶವರಾವ್ ತಾಡಿಪತ್ರಿ ಅವರು ಅಮೆರಿಕದಿಂದಲೇ ನಿರ್ವಹಿಸಿದರು.
ಅಮೆರಿಕದಿಂದ ಮೀರಾ ತಾಡಿಪತ್ರಿ, ಜಿ.ವಿ.ಶ್ರೀನಿವಾಸನ್, ವಿವೇಕ್ ಶ್ರೀವತ್ಸ, ವೆಂಕಟಪ್ರಸಾದ್, ವೆಂಕಟೇಶ ಮುತಾಲಿಕ್, ಈಶಾನ್ಯ ಜೋಷಿ, ಆಸ್ಟ್ರೇಲಿಯಾದಿಂದ ಅಂಗ್ ಥಾನ್ ಮುಂತಾದವರು ವಿದ್ವತ್ಪೂರ್ಣವಾದ ಪ್ರಬಂಧಗಳನ್ನು ಮಂಡಿಸಿದರು.ಇದೇ ಸಂದರ್ಭದಲ್ಲಿ ಒಟ್ಟು ಆರು ಗೋಷ್ಠಿಗಳು ಆನ್ಲೈನ್ ಮೂಲಕ ನಡೆದವು. ಈ ಗೋಷ್ಠಿಗಳಲ್ಲಿ ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದ ವಿದ್ವಾಂಸರು, ಪಾಂಡಿಚೇರಿ ಪ್ರದೇಶದ ವಿದ್ವಾಂಸರು, ಆಂಧ್ರಪ್ರದೇಶದ ವಿದ್ವಾಂಸರು, ಅಸ್ಸಾಂ ರಾಜಸ್ಥಾನ ಹಾಗೂ ಕರ್ನಾಟಕ ಒರಿಸ್ಸಾ ರಾಜ್ಯದ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿದರು.
ಭಾಗವಹಿಸಿದ ಪ್ರತಿಯೊಬ್ಬರೂ ಪರಮಪೂಜ್ಯ ಶ್ರೀಪಾದರ ಈ ಕಾರ್ಯಯೋಜನೆಗಳನ್ನು ಮುಕ್ತವಾಗಿ ಪ್ರಶಂಸಿಸಿದರು. ಡಾ. ಬಿ. ಗೋಪಾಲಾಚಾರ್ಯರು ಸ್ವಾಗತ ಭಾಷಣವನ್ನು ಮಾಡಿದರು.